ಬೀದರ್: ಶ್ರೀಗಂಧ ಬೆಳೆದು ಗೆದ್ದ ಬೀದರ್ ರೈತರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 20, 2022 | 3:33 PM

Sandalwood Cultivation: ಕಬ್ಬು, ಸೋಯಾ, ತೊಗರಿ ಬೆಳೆಯಾಯಿತು. ಇದೀಗ ಶ್ರೀಗಂಧವನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯುವ ಸಾಹಸಕ್ಕೆ ಬೀದರ್ ಜಿಲ್ಲೆಯ ರೈತರು ಮುಂದಾಗಿದ್ದಾರೆ.

ಬೀದರ್: ಶ್ರೀಗಂಧ ಬೆಳೆದು ಗೆದ್ದ ಬೀದರ್ ರೈತರು
ಶ್ರೀಗಂಧ ಬೆಳೆ
Follow us on

ಬೀದರ್​: ಜಿಲ್ಲೆಯಲ್ಲಿ ಶ್ರೀಗಂಧ (sandalwood) ಬೆಳೆಗೆ ಒತ್ತು ಕೊಡುತ್ತಿರುವ ಅರಣ್ಯ ಇಲಾಖೆ, ಅತಿ ಹೆಚ್ಚು ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಬೆಳೆಸಿ ಸಾಧನೆ ಮಾಡಿರುವ ಬೆನ್ನಲ್ಲೇ ರೈತರೂ ಸಹ ತಮ್ಮ ಹೊಲಗಳಲ್ಲಿ ಶ್ರೀಗಂಧ ಬೆಳೆಯಲು ಒತ್ತು ನೀಡುತ್ತಿದ್ದಾರೆ. ಕನ್ನಡ ನಾಡಿಗೂ ಶ್ರೀಗಂಧಕ್ಕೂ ಶತಮಾನಗಳ ನಂಟಿದೆ. ಅನಾದಿ ಕಾಲದಿಂದಲೂ ಕರ್ನಾಟಕವನ್ನು ಗಂಧದ ಬೀಡು ಎಂದೇ ಕರೆಯುತ್ತಾರೆ. ಸೂಕ್ತ ಹವಾಮಾನ ಹೊರತಾಗಿಯೂ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಸುವವರ ಸಂಖ್ಯೆ ಕಡಿಮೆಯಿದೆ. ಆದರೆ ಇತ್ತೀಚೆಗೆ ಶ್ರೀಗಂಧ ಬೆಳೆಯಲು ರೈತರು ಮನಸ್ಸು ಮಾಡುತ್ತಿದ್ದಾರೆ. ಬೀದರ್ ತಾಲೂಕಿನ ಚಿಟ್ಟಾ ಗ್ರಾಮದ ಮಹ್ಮದ್ ಜಾಫರ್ ತನ್ನ 7 ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆ ಹಾಕಿ ನಾಲ್ಕು ವರ್ಷ ಕಳೆದಿದೆ. ಇನ್ನೂ 10 ವರ್ಷಗಳ ಕಾಲ ಕಳೆದರೆ 10 ರಿಂದ 15 ಕೋಟಿ ರೂಪಾಯಿ ಆದಾಯ ಗಳಿಸಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಮಹ್ಮದ್ ಜಾಫರ್ ತಮ್ಮ ಹೊಲದಲ್ಲಿ ಒಂದೂವರೆ ಸಾವಿರ ಶ್ರೀಗಂಧದ ಗಿಡಗಳು ಜೊತೆಗೆ ಮಾವು ಎರಡುವರೆ ಸಾವಿರ, ಹೆಬ್ಬೇವು ಐನೂರು, ಬಾಳೆ, ಪಪ್ಪಾಯಿ ಗಿಡಗಳನ್ನು ನೇಡಲಾಗಿದೆ. ಇದರ ನಡುವೆ ನಮಗೆಬೇಕಾದ ಎಲ್ಲಾ ಬೆಳೆಗಳನ್ನ ಬೆಳೆಯಬಹುದು ಹೀಗಾಗಿ ಶ್ರೀಗಂಧ ನಾಟಿ ಮಾಡಿದರೆ ರೈತರು ಲಾಭ ಗಳಿಸಬಹುದೆಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.

ಶ್ರೀಗಂಧ ಬೆಳೆಯುವ ಕುರಿತು

ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿಯಂತೆ ಪ್ರತಿ ಗಿಡಕ್ಕೆ ಮೂರು ಲೀಟರ್ ನೀರು ಕೊಡುತ್ತಿರಬೇಕು. ಮಳೆಗಾಲದಲ್ಲಿ ಮರದ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ವರ್ಷಕ್ಕೊಮ್ಮೆ ನಿಗದಿತ ಪ್ರಮಾಣದಲ್ಲಿ ಸಾವಯವ ಗೊಬ್ಬರ ಬಳಸಿದರೆ ಗಿಡದ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹೆಚ್ಚೆಂದರೆ ಒಂದು ಮರ ಬೆಳೆಯಲು ವರ್ಷಕ್ಕೆ 50 ರೂಪಾಯಿ ಖರ್ಚು ಬೀಳಬಹುದು ಎಂಬ ಅಚ್ಚರಿಯ ಅಂಶವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿಂದೆ ಶ್ರೀಗಂಧದ ಮರಗಳನ್ನು ಯಾವುದೇ ಪ್ರದೇಶದಲ್ಲಿ ಬೆಳೆದರೂ ಅದು ಸರ್ಕಾರದ ಸ್ವತ್ತಾಗಿರುತ್ತಿತ್ತು. ಆದರೆ ಕರ್ನಾಟಕ ಅರಣ್ಯ ಕಾಯಿದೆ 2001 ಸೆಕ್ಷನ್ 83ರ ಪ್ರಕಾರ ಯಾರ ಜಮೀನಿನಲ್ಲಿ ಶ್ರೀಗಂಧದ ಮರವಿರುತ್ತದೆಯೊ ಅದು ಮಾಲೀಕನ ಸ್ವತ್ತು ಎಂದು ತಿದ್ದುಪಡಿ ಮಾಡಿದೆ.

ಇದರಿಂದ ರೈತರು ಯಾವುದೇ ಆತಂಕವಿಲ್ಲದೆ ಶ್ರೀಗಂಧ ಬೆಳೆಯಬಹುದು. ಜೊತೆಗೆ ಶ್ರೀಗಂಧ ಬೆಳೆಯಲು ಇಚ್ಛಿಸುವ ರೈತರಿಗೆ ಅರಣ್ಯ ಇಲಾಖೆಯಿಂದ ಸಹಕಾರ ಸಿಗುತ್ತದೆ. ಇದರಿಂದ ರೈತರು ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಶ್ರೀಗಂಧವನ್ನು ಬೆಳೆಯಬಹುದು. ನೀಲಗಿರಿ ಮರಗಳ ಹಾವಳಿ ತಪ್ಪಿಸಿ ಶ್ರೀಗಂಧ ಮರ ಬೆಳೆಸುವುದಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ. ಇನ್ನು ಬೀದರ್ ಜಿಲ್ಲೆಯಲ್ಲಿ 72 ರೈತರು 3 ಸಾವಿರದ ಐದನೂರು ಗಿಡಗಳನ್ನು ನೇಟ್ಟಿದ್ದಾರೆ. ಈ ರೈತರಿಗೆ ಅರಣ್ಯ ಇಲಾಖೆಯಿಂದ ಎಲ್ಲಾ ಸೌಲಭ್ಯಗಳನ್ನು ಕೊಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಶ್ರೀಗಂಧ ನಿಧಾನವಾಗಿ ಬೆಳೆಯುವ ಅರೆ ಪರಾವಲಂಬಿ ಮರ. ಮಿಶ್ರ ತೋಟಗಾರಿಕೆ ಬೆಳೆಯಾಗಿ ಶ್ರೀಗಂಧವನ್ನು ಬೆಳೆಯುವುದರಿಂದ ರೈತನ ಬಾಳು ಬಂಗಾರವಾಗುವುದರಲ್ಲಿ ಅನುಮಾನವಿಲ್ಲ. ಮಾವು, ನುಗ್ಗೆ ಮತ್ತು ಸಪೋಟ ಮಧ್ಯೆ ಮಿಶ್ರ ಬೆಳೆಯಾಗಿ ಶ್ರೀಗಂಧವನ್ನು ಬೆಳೆಯಬಹುದು. ಇದರಿಂದ ಸಸ್ಯ ವೈವಿಧ್ಯತೆ ಕಾಪಾಡಬಹುದು. ಜೊತೆಗೆ ಗಿಡಗಳು ಬೆಳೆದಂತೆ ತೋಟದ ಮೌಲ್ಯ ಅಧಿಕವಾಗುತ್ತದೆ. 10- 20 ವರ್ಷಗಳಲ್ಲಿ ಅತ್ಯಧಿಕ ಲಾಭ ಗಳಿಸಬಹುದು ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ. ಇನ್ನು ಬೀದರ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಗಂಧ ಬೆಳೆಸಲು ಮುಂದಾಗಿದ್ದು ಜಿಲ್ಲೆಯಲ್ಲಿ ಈಗಾಗಲೇ ಸಾವಿರಾರು ಶ್ರೀಗಂಧ ಗಿಡಗಳನ್ನು ನಾಟಿ ಮಾಡಿದ್ದಾರೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್​

ಇದನ್ನೂ ಓದಿ: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಸೋಲಾರ್​ ಹಾಳಾಗಿ ಬೀದರ್​ನ ಬ್ರಿಮ್ಸ್​ನಲ್ಲಿ ಬಾಣಂತಿಯರಿಗೆ ಬಿಸಿ ನೀರು ಸೀಗದೆ ಪರದಾಡುವಂತಾಗಿದೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ