ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಸೋಲಾರ್ ಹಾಳಾಗಿ ಬೀದರ್ನ ಬ್ರಿಮ್ಸ್ನಲ್ಲಿ ಬಾಣಂತಿಯರಿಗೆ ಬಿಸಿ ನೀರು ಸೀಗದೆ ಪರದಾಡುವಂತಾಗಿದೆ
ನಾಲ್ಕು ವರ್ಷದ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಸೋಲಾರ್ ವಾಟರ್ ಹೀಟರ್ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದಾಗಿ ಹೆರಿಗೆಗೆಂದು ಬರುವ ಬಾಣಂತಿಯರಿಗೆ ಬಿಸಿ ನೀರು ಸೀಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೀದರ್: ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಮ್ಸ್ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ ಆಸ್ಪತ್ರೆಗೆ ಹೆರಿಗೆಗೆಂದು ಬರುವ ಬಾಣಂತಿಯರಿಗೆ ಬಿಸಿ ನೀರು ಸೀಗುತ್ತಿಲ್ಲ. ಪಕ್ಕದಲ್ಲಿರುವ ಹೋಟೆಲ್ಗಳಿಂದ ಹಣ ಕೊಟ್ಟು ಬಿಸಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ರಿಮ್ಸ್ನ ನಿರ್ದೇಶಕರ ನಿರ್ಲಕ್ಷಕ್ಕೆ ರೋಗಿಗಳು ಹೈರಾಣರಾಗುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿದ ಸೋಲಾರ್ ವಾಟರ್ ಹೀಟರ್ ಹಾಳಾಗಿದ್ದು ಬಾಣಂತಿಯರಿಗೆ ಬೀಸಿ ನೀರು ಬೇಕಾದರೆ ಹೋಟೆಲ್ಗಳನ್ನೇ ಅವಲಂಬಿಸಬೇಕಾಗಿದೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಬೇಕು ಅನ್ನುವ ಉದ್ದೇಶದಿಂದ 150 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆಯನ್ನ ಕಟ್ಟಲಾಗಿದ್ದರೂ ಗುಣಮಟ್ಟದ ಚಿಕಿತ್ಸೆ ಮರಿಚಿಕೆಯಾಗಿದೆ.
ಬ್ರೀಮ್ಸ್ ಆಸ್ಪತ್ರೆ ಆರು ವರ್ಷದ ಹಿಂದೆ ಉದ್ಘಾಟನೆ ಮಾಡಲಾಗಿದೆ. ಹೆರಿಗೆಯಾದ ಹೆಣ್ಣು ಮಕ್ಕಳಿಗೆ ಬಿಸಿನೀರು ಕೂಡಾ ಇಲ್ಲಿನ ಸಿಬ್ಬಂದಿಗಳು ಕೊಡುತ್ತಿಲ್ಲ. ಬಿಸಿ ನೀರು ಬೇಕಾದರೆ ರೋಗಿಯ ಸಂಬಂಧಿಗಳು ಹೊಟೇಲ್ಗಳಿಗೆ ಹೋಗಿ ಬಿಸಿನೀರು ತಂದು ಹೆರಿಗೆಯಾದ ಹೆಣ್ಣು ಮಕ್ಕಳಿಗೆ ಕೊಡಬೇಕಾದ ಅನಿವಾರ್ಯತೆಯಿದೆ. ಇನ್ನೂ ಇಲ್ಲಿಗೆ ಬರುವ ಬಾಣಂತಿಯರು ಕುಡಿಯಲು ಮತ್ತು ಸ್ನಾನ ಮಾಡಲು ಕೂಡಾ ಬಿಸಿ ನೀರು ಕೊಡುತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ಅಳುವುತೋಡಿಕೊಳ್ಳುತ್ತಿದ್ದಾರೆ. ಬಾಣಂತಿಯರಿಗೆ ಬಿಸಿ ನೀರು ಕೊಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.
ಆಸ್ಪತ್ರೆ ಉದ್ಘಾಟನೆ ಮಾಡುವ ಮುನ್ನವೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ 20 ಕ್ಕೂ ಹೆಚ್ಚು ಸೋಲಾರ್ ವಾಟರ್ ಹೀಟರ್ಗಳನ್ನ ಅಳವಡಿಸಲಾಗಿತ್ತು. ಇಲ್ಲಿ ಅಳವಡಿಸಿದ್ದ ಸೋಲಾರ್ ವಾಟರ್ ಹೀಟರ್ನ ಗ್ಲಾಸ್ ಅನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ವರ್ಷದಿಂದ ಬಿಸಿ ನೀರು ಮಾತ್ರ ರೋಗಿಗಳಿಗೆ ಸೀಗುತ್ತಿಲ್ಲ. ಇದರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ತಲೆಕೆಡಿಸಿಕೊಂಡಿಲ್ಲ. ಪ್ರತಿ ನಿತ್ಯ ಜಿಲ್ಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಸಾಮಾನ್ಯ ಹೆರಿಗೆ, ನೂರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆಯಾಗುತ್ತಿದೆ.
ಹೆರಿಗೆಯಾದ ಹೆಣ್ಣು ಮಕ್ಕಳು ಅವರ ಆರೋಗ್ಯ ದೃಷ್ಟಿಯಿಂದ ಕೆಲ ದಿನಗಳ ಕಾಲ ಆರೋಗ್ಯ ಕೇಂದ್ರದಲ್ಲಿಯೇ ಇದ್ದು ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗುತ್ತಾರೆ. ಆದರೆ ಇಲ್ಲಿ ಇರುವಷ್ಟು ದಿನವಾದರೂ ಬಾಣಂತಿಯರಿಗೆ ಬಿಸಿ ನೀರು ಪೂರೈಕೆ ಮಾಡುವುದು ಅಲ್ಲಿನ ವೈದ್ಯಾಧಿಕಾರಿ ಹಾಗೂ ಸಿಬ್ಬಂಧಿಯ ಕರ್ತವ್ಯವಾಗಿದೆ. ಈ ಕುರಿತು ಇಲ್ಲಿನ ವೈದ್ಯಾಧಿಕಾರಿಯನ್ನ ಬೀಸಿ ನೀರು ಕೊಡಿ ಎಂದು ಕೇಳಿದರೆ ಇಲ್ಲಿ ಬಿಸಿ ನೀರು ಬರುವುದಿಲ್ಲ ಹೊರಗಡೆಯಿಂದ ತಂದು ಬಳಸಿ ಎಂದು ಹೇಳುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಬಾಣಂತಿಯರಿಗೆ ಬೀಸಿ ನೀರು ಪೂರೈಕೆ ಮಾಡದೆ ಬಾಣಂತಿಯರ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಬಾಣಂತಿಯರ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬ್ರೀಮ್ಸ್ ನಿರ್ದೇಶಕ ಶಿವಕುಮಾರ್ ಶೆಟಿಗಾರ್, ನಾನು ಅಧಿಕಾರ ವಹಿಸಿಕೊಂಡು 20 ದಿನಗಳಾಗಿದ್ದು, ಇದರ ಬಗ್ಗೆ ವಿಚಾರಿಸಿ 2ರಿಂದ 3 ದಿನಗಳಲ್ಲಿ ಸರಿಪಡಿಸುತ್ತೇವೆ ಎನ್ನುತ್ತಾರೆ. ಬಾಣಂತಿಯರ ಆರೋಗ್ಯದ ಬಗ್ಗೆ ಸರಕಾರ ಅದೇಷ್ಟೇ ಕಾಳಜಿ ವಹಿಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಣಂತಿಯರು ಅನೇಕ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ಈಗಲಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಬಾಣಂತಿಯರಿಗೆ ಬಿಸಿ ನೀರು ಕೊಡುವ ವ್ಯವಸ್ಥೆಯನ್ನ ಮಾಡಬೇಕೆಂದು ಇಲ್ಲಿನ ಜನರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ.
ವರದಿ–ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ