ಬೀದರ್: ಕಡಿಮೆ ನೀರು, ಕಡಿಮೆ ಕರ್ಚು, ಕಡಿಮೆ ಜಮೀನಿನಲ್ಲಿ ಹಿರೇಕಾಯಿ ಬೆಳೆ ಬೆಳೆದು ತಿಂಗಳಿಗೆ ಮೂರು ಲಕ್ಷ ಲಾಭ ಪಡೆಯುವ ರೈತ
ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಅತಿವಾಳ ಗ್ರಾಮದ ರೈತ ಎರಡುವರೆ ಎಕರೆ ಜಮೀನಿನಲ್ಲಿ ವಿನೂತನ ಪ್ರಯೋಗ ಮಾಡುತ್ತಾ, ಅಧಿಕ ಲಾಭ ಗಳಿಸುತ್ತಿದ್ದಾರೆ.
ಆ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬಿನ್, ತೊಗರಿ, ಉದ್ದು, ಬೆಳೆ ಬೆಳೆದು ಹೈರಾಣ ಆಗಿದ್ದರು. ಹೀಗಾಗಿ ಕೊಂಚ ಬದಲಾವಣೆ ಮಾಡಬೇಕು ತೋಚಿ, ಕೃಷಿಯಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂದು ಯೋಚಿಸಿದ್ದರು. ಹೀಗೆ ಯೋಚಿಸಿದ ರೈತ ತನ್ನ ಹೊಲದಲ್ಲಿ ಹಿರೇಕಾಯಿ ಬೆಳೆದು ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತು ಈ ರೈತ ಅಕ್ಷರಶಃ ಸತ್ಯ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಅತಿವಾಳ ಗ್ರಾಮದ ರೈತ ಶಾಲಿವಾನ್ ತಮ್ಮ ಎರಡು ಎಕರೆಯಷ್ಟು ಜಮೀನಿನಲ್ಲಿ ಹಿರೇಕಾಯಿ ಬೆಳೆಸಿ ಎರಡು ದಿನಕ್ಕೊಮ್ಮೆ 10 ಸಾವಿರ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ಉದ್ದು, ಸೋಯಾ, ಹೆಸರು ಮತ್ತು ಕಬ್ಬು ಬೆಳೆ ಬೆಳೆದು ರೈತ ಶಾಲಿವಾನ್ ಕೈ ಸುಟ್ಟುಕೊಳ್ಳುತ್ತಿದ್ದರು. ಈಗ ಈ ಬೆಳೆಗಳಿಗೆ ಗುಡ್ ಬೈ ಹೇಳಿ ತೋಟಗಾರಿಕೆ ಬೆಳೆಯ ಕಡೆಗೆ ಒಲವು ತೋರಿಸಿ ಅದರಲ್ಲಿ ಶ್ರಮಪಟ್ಟು ಕೆಲಸ ಮಾಡಿ ಉತ್ತಮವಾದ ಆದಾಯ ಗಳಿಸುತ್ತಿದ್ದಾರೆ.
ಹಿರೇಕಾಯಿ ಕಳೆದೊಂದು ತಿಂಗಳಿಂದ ನಿರಂತರವಾಗಿ ಒಂದು ದಿನ ಬಿಟ್ಟು ಒಂದು ಕಟಾವಿವಗೆ ಬರುತ್ತಿದೆ. ಪ್ರತಿಯೊಂದು ಸಲ ಕಟಾವು ಮಾಡಿದಾಗ ಒಂದು ಕ್ವಿಂಟಾಲ್ವರೆಗೂ ಉತ್ತಮ ಗುಣಮಟ್ಟದ ಹಿರೇಕಾಯಿ ಮಾರಾಟಕ್ಕೆ ಲಭ್ಯವಾಗುತ್ತಿದೆ. 10 ರಿಂದ 15 ಸಾವಿರ ರೂಪಾಯಿವರೆಗು ಆದಾಯ ಬರುತ್ತಿದೆ. ಮಾರುಕಟ್ಟೆಯಲ್ಲಿಯೂ ಹಿರೇಕಾಯಿಗೆ ಉತ್ತಮವಾದ ಬೆಲೆ ಸಿಗುತ್ತಿದ್ದು ಈ ರೈತನಿಗೆ ಹೆಚ್ಚಿನ ಲಾಭ ಬರುತ್ತಿದೆ. ಹಿರೇಕಾಯಿ ಬೆಳೆಸಿ ನಾನು ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದು ತೋಟಗಾರಿಕೆ ಬೆಳೆ ನನಗೆ ಕೈ ಹಿಡಿದಿದೆ ಎನ್ನುತ್ತಿದ್ದಾರೆ ರೈತ ಶಾಲಿವಾನ್.
ಅತಿವಾಳ ಗ್ರಾಮದ ರೈತ ಶಾಲಿವಾನ್ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಆಳವಡಿಸಿಕೊಂಡು ಪ್ರಗತಿಪರ ರೈತನೆನಿಸಿಕೊಂಡಿದ್ದಾರೆ. ಪ್ರಗತಿಪರ ಶಾಲಿವಾನ್ ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹೊಸ ತಂತ್ರಜ್ಞಾನವನ್ನು ಆಳವಡಿಕೊಳ್ಳುವಲ್ಲಿ ಮುಂದಿದ್ದು, ತಮ್ಮ ಜಮೀನಿನಲ್ಲಿ ನೂತನ ಅವಿಷ್ಕಾರವನ್ನು ಮಾಡುತ್ತಿದ್ದಾರೆ. ಬಹಳಷ್ಟು ರೈತರು ಕೃಷಿಯಲ್ಲಿ ನಷ್ಟವಾಯಿತು ಎಂದು ಅಲವತ್ತುಕೊಳ್ಳುತ್ತಿದ್ದರೆ ಶಾಲಿವಾನ್ ಅವರು ಪ್ರತಿ ವರ್ಷವೂ ಒಂದಲ್ಲ ಒಂದು ವಿನೂತನ ಬೆಳೆಯಿಂದ ಲಾಭಗಳಿಸುತ್ತಿದ್ದಾರೆ.
ಇನ್ನು ಇವರು ತಮ್ಮ ಹೊಲದಲ್ಲಿ ಯಾವುದೆ ಬೆಳೆಯನ್ನು ನಾಟಿ ಮಾಡುವ ಮುನ್ನ ಅದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸುತ್ತಾರೆ ಜೊತೆಗೆ ಜಿಲ್ಲೆಯಲ್ಲಿನ ರೈತರು ಯಾವ ಬೆಳೆಯನ್ನ ಹೆಚ್ಚಾಗಿ ಬೆಳೆದಿದ್ದಾರೆಂದು ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ರೈತರು ಹೆಚ್ಚಾಗಿ ಬೆಳೆದ ಬೆಳೆಯನ್ನ ಬಿಟ್ಟು ಇವರು ಬೇರೆ ಬೆಳೆಯನ್ನ ಆಯ್ಕೆ ಮಾಡಿಕೊಂಡು ತಮ್ಮ ಹೊಲದಲ್ಲಿ ನಾಟಿ ಮಾಡುವುದರಿಂದ ಇವರು ಬೆಳೆದ ಬೆಳೆಗೆ ಉತ್ತಮವಾದ ದರ ಸಿಗುತ್ತಿದೆ. ಜೊತೆಗೆ ಮಾರುಕಟ್ಟೆಯಲ್ಲಿಯೂ ಕೂಡ ಇವರು ತಂದ ವಸ್ತುಗಳಿಗೆ ಬೇಡಿಕೆ ಸಿಗುತ್ತಿದೆ.
ಕಳೆದ ಬಾರಿ ಎರಡು ಎಕರೆಯಷ್ಟು ಜಮೀನಿನಲ್ಲಿ ಟೋಮ್ಯಾಟೋ ಬೆಳೆಸಿದ್ದರು, ಆಗ ಇವರಿಗೆ 10 ಲಕ್ಷ ರೂಪಾಯಿಯಷ್ಟು ಲಾಭವಾಗಿತ್ತು. ಹೀಗಾಗಿ ಇವರು ನಷ್ಟ ಎಂಬುವುದೇ ಕಂಡಿಲ್ಲ. ಒಟ್ಟಿನಲ್ಲಿ ರೈತ ಶಾಲಿವಾನ್ ಕೊಳಾರೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಇವರ ರೀತಿ ಎಲ್ಲ ರೈತರು ಪ್ರಯೋಗಾತ್ಮಕ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸೋ ತೋಟಗಾರಿಕೆ ಬೆಳೆ ಬೆಳೆಯಲು ಎಲ್ಲ ರೈತರು ಮುಂದೆ ಬರಬೇಕು.
ವರದಿ-ಸುರೇಶ್ ನಾಯಕ್ ಟಿವಿ9 ಬೀದರ್