ಬೀದರ್: ಸಣ್ಣ ವಯಸ್ಸಿನಲ್ಲಿಯೇ ವಿಜ್ಞಾನ ಶಿಕ್ಷಣದ ದೀಕ್ಷೆ ಕೊಡುವ ಅಪರೂಪದ ಪ್ರಾಯೋಗಿಕ ಕಲಿಕಾ ಕೇಂದ್ರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 16, 2022 | 2:49 PM

ಅಗಸ್ತ್ಯ ಫೌಂಡೇಶನ್​ನ ಕೋರ್ ವಿಜ್ಞಾನ ಕೇಂದ್ರವು ಮಕ್ಕಳ ಅಚ್ಚುಮೆಚ್ಚಿನ ಸ್ಥಳವಾಗಿದೆ. ಈ ವಿಜ್ಜಾನ ಕೇಂದ್ರವೂ ಮಕ್ಕಳಲ್ಲಿ ವಿಜ್ಜಾನದ ಬಗ್ಗೆ ಆಸಕ್ತಿಯನ್ನು ಬಿತ್ತುತ್ತಿದೆ.

ಬೀದರ್: ಸಣ್ಣ ವಯಸ್ಸಿನಲ್ಲಿಯೇ ವಿಜ್ಞಾನ ಶಿಕ್ಷಣದ ದೀಕ್ಷೆ ಕೊಡುವ ಅಪರೂಪದ ಪ್ರಾಯೋಗಿಕ ಕಲಿಕಾ ಕೇಂದ್ರ
ಬೀದರ್​ ವಿಜ್ಞಾನ ಕೇಂದ್ರ
Follow us on

ಬೀದರ್​: ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಿಸುವ ಮಹತ್ವದ ಕಾರ್ಯವನ್ನು ಬೀದರ್‌ನ ಅಗಸ್ತ್ಯ ಫೌಂಡೇಶನ್ ಕೋರ್ ವಿಜ್ಞಾನ ಕೇಂದ್ರವು ಮಾಡುತ್ತಿದೆ. ಗಾದಿಗಿ ರಸ್ತೆಯಲ್ಲಿರುವ ಈ ಕೇಂದ್ರವು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಪ್ರಶ್ನಿಸುವ ಮನೋಭಾವ ಬೆಳೆಸಲು ಸಹಾಯ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳನ್ನು ಶಾಲಾ ಅವಧಿಯಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ವಿಜ್ಞಾನ ಕೇಂದ್ರಕ್ಕೆ ಕರೆ ತಂದು ಮಾರ್ಗದರ್ಶನ ನೀಡಿ. ವಿದ್ಯಾರ್ಥಿಗಳು ಪ್ರಾಯೋಗಿಕ ತರಬೇತಿ ಪಡೆದ ನಂತರ ಸಂಜೆ ಅವರ ಊರುಗಳಿಗೆ ಬಿಟ್ಟು ಬರಲಾಗುತ್ತಿದೆ. ಇಲ್ಲಿ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳ ಮೇಲೆ ನಿರಂತರ ನಿಗಾ ಇಟ್ಟು ಅವರಲ್ಲಿನ ವಿಜ್ಞಾನದ ಬಗೆಗಿನ ಆಸಕ್ತಿ ಹಾಗೂ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ಮಕ್ಕಳಿಗೆ ವಿಜ್ಜಾನದ ವಿಷಯದಲ್ಲಿ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ವಿಜ್ಞಾನ ಚಟುವಟಿಕಾ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವಿಜ್ಞಾನ ಕೇಂದ್ರ

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನಕ್ಕೆ ಮಾರ್ಗದರ್ಶನ ನೀಡುತ್ತಾರೆ. ಯಾವುದೇ ಗೊಂದಲಗಳಿದ್ದರೂ ತಕ್ಷಣವೇ ಬಗೆಹರಿಸುತ್ತಾರೆ. ಸೂತ್ರಗಳು ಸಿದ್ಧಾಂತಗಳ ಪ್ರತಿ ಹಂತವನ್ನು ವಿವರಣಾತ್ಮಕವಾಗಿ ತಿಳಿಸಲಾಗುತ್ತಿದೆ. ನ್ಯೂಟನ್‌ ಸಿದ್ಧಾಂತವನ್ನು ಪ್ರಯೋಗದ ಮೂಲಕ ವಿವರಿಸಿದಾಗ ಮಕ್ಕಳಿಗೆ ಚೆನ್ನಾಗಿ ಅರ್ಥವಾಗುತ್ತದೆ. ವಿಜ್ಞಾನ ಕಲಿಕೆಗೆ ಪೂರಕವಾದ ಸೌಲಭ್ಯಗಳನ್ನು ಕೇಂದ್ರದಲ್ಲಿ ಕಲ್ಪಿಸಲಾಗಿದ್ದು, ರಾಕೆಟ್‌ ಉಡಾವಣೆ ಸೂರ್ಯ ಗ್ರಹಣ ಮೊದಲಾದ ವಿಷಯಗಳನ್ನು ಕಂಪ್ಯೂಟರ್‌ನಲ್ಲಿ ತೋರಿಸಿ ವಿವರಿಸಲಾಗುತ್ತದೆ. ಅಣುಗಳು ಸೂಕ್ಷ್ಮದರ್ಶಕ ಯಂತ್ರಗಳು ನ್ಯೂಟನ್‌ ನಿಯಮಗಳು ಶಕ್ತಿ ಮತ್ತು ರಾಸಾಯನಿಕ ಕ್ರಿಯೆಗಳು ಮನುಷ್ಯನ ದೇಹದ ಅಂಗಾಂಗಗಳ ಮಾಹಿತಿ ಇಂತಹ ಅನೇಕ ವಿಷಯಗಳನ್ನು ಪ್ರಾಯೋಗಿಕ ಚಟುವಟಿಕೆ ಮೂಲಕ ಮಕ್ಕಳಿಗೆ ಸವಿಸ್ತಾರವಾಗಿ ಹೇಳಿಕೊಡಲಾಗುತ್ತಿದೆ. ಹೀಗಾಗಿ ಈ ವಿಜ್ಞಾನ ಕೇಂದ್ರಕ್ಕೆ ಬಂದಿದ್ದರಿಂದ ನಾವು ವಿಜ್ಞಾನದ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಇಲ್ಲಿನ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಗ್ರಾಮೀಣ ಮಕ್ಕಳ ಕಲಿಕೆಗೆ ನೆರವು

ಗ್ರಾಮೀಣ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ವಿದ್ಯಾರ್ಥಿಗಳಿಂದಲೇ ಪ್ರಯೋಗಗಳನ್ನು ಮಾಡಿಸಿ ವಿಷಯಗಳನ್ನು ಸರಳವಾಗಿ ಅರ್ಥ ಮಾಡಿಸಲಾಗುತ್ತದೆ. ಆ ಮೂಲಕ ವಿಜ್ಞಾನ ಅಧ್ಯಯನ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದ್ದು, ಅಗಸ್ತ್ಯ ಅಂತಾರಾಷ್ಟ್ರ್ಯೀಯ ಪ್ರತಿಷ್ಟಾನದ ಕೋರ್ ವಿಜ್ಞಾನ ಕೇಂದ್ರವು ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಗೆ ಪ್ರತಿದಿನವೂ ಸರಕಾರಿ ಶಾಲೆಯ ಮಕ್ಕಳು ಇಲ್ಲಿಗೆ ಬಂದು ವಿಜ್ಞಾನದ ಬಗ್ಗೆ ಶಾಲೆಯಲ್ಲಿ ಓದಿದ್ದನ್ನು ಪ್ರಯೋಗ ಮಾಡಿನೋಡಿ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ವಿವಿಧ ಭಾಗದಿಂದ ಮಕ್ಕಳು ಬರುತ್ತಿದ್ದು. ಒಂದು ದಿನಕ್ಕೆ ನೂರು ಮಕ್ಕಳಿಗೆ ಇಲ್ಲಿ ಕುಳಿತಿಕೊಳ್ಳಲು ಹಾಗೂ ಏಕಕಾಲದಲ್ಲಿ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಇಲ್ಲಿನ ಮುಖ್ಯಸ್ಥರು ಬಾಬುರಾವ್.

ಒಟ್ಟಾರೆಯಾಗಿ ಗ್ರಾಮೀಣ ಭಾಗದ ಹಾಗೂ ಕನ್ನಡ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನ ದೃಷ್ಠಿಯಲ್ಲಿಟ್ಟುಕೊಂಡು ಪ್ರಾದೇಶಿಕ ವಿಜ್ಜಾನ ಕೇಂದ್ರವನ್ನ ತೆರೆಯಲಾಗಿದ್ದು, ಹಲವಾರು ಮಕ್ಕಳಿಗೆ ಉಪಯುಕ್ತವಾಗಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ