ಮೇಕೆ ಕುರಿ ಕಳ್ಳರ ಹಾವಳಿಂದಾಗಿ ಆ ಗ್ರಾಮದ ರೈತರು ಹೈರಾಣಾಗಿದ್ದಾರೆ. ಎಷ್ಟೇ ಎಚ್ಚರಿಕೆ ವಹಿಸಿದರು ತಿಂಗಳಿಗೆ ಐದಾರು ಆಡು, ಕುರಿ ಕಳ್ಳತನವಾಗುತ್ತಿದ್ದು ಆಡು ಸಾಕಾಣಿಕೆದಾರರ ಆತಂಕ ಹೆಚ್ಚಿಸಿದೆ. ಕಳ್ಳತನವಾದಾಗ (theft) ಗ್ರಾಮಕ್ಕೆ ಬರುವ ಪೊಲೀಸರು ಕಳ್ಳರನ್ನ ಹಿಡಿಯುವ ಮಾತು ಕೊಟ್ಟು ಹೋಗುತ್ತಾರೆ. ಆದರೆ ಮತ್ತೆ ಗ್ರಾಮದಲ್ಲಿ ಪದೇ ಪದೇ ಆಡು, ಕುರಿ (goat, sheep) ಕಳ್ಳತನವಾಗುತ್ತಿದ್ದು ಗ್ರಾಮಸ್ಥರನ್ನ ಹೈರಾಣಾಗಿಸಿದೆ. ಕುರಿ, ಆಡು ಕಳ್ಳರ ಆವಳಿಂದಾಗಿ ನಿದ್ದೆಯನ್ನೇ ಮರೆತ ಗ್ರಾಮಸ್ಥರು…. ಗ್ರಾಮದ ಎಲ್ಲ ಮನೆಗಳಲ್ಲಿಯೂ ಇವೆ ಆಡು ಕುರಿಗಳು, ತಿಂಗಳಿಗೆ ಒಂಡೆರಡು ಕಳ್ಳತನ… ಕಳ್ಳರನ್ನ ಹಿಡಿದುಕೊಡಿ ಎಂದು ಪೊಲೀಸರಿಗೆ (bidar police) ಗ್ರಾಮಸ್ಥರಿಂದ ಹತ್ತಾರು ಸಲ ದೂರು ನೀಡಿದರೂ ಆಗದ ಪ್ರಯೋಜನ… ಐದು ತಿಂಗಳಲ್ಲಿ ಗ್ರಾಮದ 60ಕ್ಕೂ ಹೆಚ್ಚು ಬೆಲೆ ಬಾಳುವ ಆಡು ಕುರಿ ಕಳ್ಳತನ… ಹೌದು ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬಸೀರಾಪುರ ಗ್ರಾಮಸ್ಥರು ಕಳ್ಳರ ಕಾಟದಿಂದಾಗಿ ಆತಂಕದಲ್ಲಿದ್ದಾರೆ.
ಬಸೀರಾಪುರ ಗ್ರಾಮದಲ್ಲಿ ತಿಂಗಳಲ್ಲಿ ಏನಿಲ್ಲವೆಂದರು ಐದಾರು ಕುರಿ ಮೇಕೆ ಕಳ್ಳತನವಾಗುತ್ತಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಒಂದೇ ಮನೆಯನ್ನ ಪದೇ ಪದೇ ಟಾರ್ಗೆಟ್ ಮಾಡುವ ಕಳ್ಳರ ಗ್ಯಾಂಗ್ ಆವರು ಸಾಕಿರುವ ಎಲ್ಲಾ ಮೇಕೆಯನ್ನ ಕದ್ದುಕೊಂಡು ಹೋಗಿದ್ದಾರೆ! ಹೀಗೆ ತಿಂಗಳಿಗೆ ಐದಾರು ಸಲ ಕಳ್ಳತನ ನಡೆಯುತ್ತಿದೆ, ಆದರೆ ಕಡಿಮೆ ಮಾತ್ರ ಆಗುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಎಷ್ಟೋ ಸಲ ಮನವಿ ಮಾಡಿದರೂ ಕಳ್ಳತನ ಮಾತ್ರ ಕಡಿಮೆಯಾಗಿಲ್ಲ.
ಇನ್ನು ಈ ಬಸೀರಾಪುರ ಗ್ರಾಮದಲ್ಲಿ ಮನೆ ಮನೆಗೂ ಆಡು ಕುರಿಗಳು ಇವೆ. ತಾವು ಸಾಕಿದ ಕುರಿ ಮೇಕೆಯನ್ನ ತಮ್ಮ ಮನೆಯ ಬಾಗಿಲಿನಲ್ಲಿ ಕಟ್ಟಿ ರಾತ್ರಿ ನಿದ್ರೆಗೆ ಜಾರುತ್ತಾರೆ. ಆ ಸಮಯವನ್ನೇ ಬಂಡಾವಾಳ ಮಾಡಿಕೊಂಡಿರುವ ಕಳ್ಳರ ಗ್ಯಾಂಗ್ ಕುರಿಗಳನ್ನ ಕದ್ದು ಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ! ಇದರಿಂದ ಬಡ ರೈತರಿಗೆ ಭಾರಿ ನಷ್ಟವಾಗುತ್ತಿದೆ. ಒಂದು ಬೆಳೆದ ಕುರಿ ಏನಿಲ್ಲವೆಂದರೂ 15 ಸಾವಿರ ರೂಪಾಯಿಗೆ ಮಾರಾಟ ವಾಗುತ್ತದೆ. ಅದನ್ನ ಕದ್ದುಕೊಂಡು ಹೋಗುತ್ತಿರುವುದರಿಂದ ರೈತರಿಗೆ ನಷ್ಷವಾಗುತ್ತಿದ್ದು ಕಳ್ಳರಿಂದ ನಮ್ಮ ಕುರಿಗಳಿಗೆ ರಕ್ಷಣೆ ಕೊಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಗ್ರಾಮದ ಒಬ್ಬರದೇ ಮನೆಯ ಆಡು ಕುರಿಗಳನ್ನ ಕಳ್ಳತನ ಮಾಡುತ್ತಿಲ್ಲ. ಕಳೆದ ಐದು ತಿಂಗಳಲ್ಲಿ 40 ಕ್ಕೂ ಹೆಚ್ಚು ಮನೆಯ ಮುಂದೆ ಕಟ್ಟಿರುವ 60 ಕ್ಕೂ ಹೆಚ್ಚು ಮೇಕೆಗಳನ್ನ ಕದ್ದು ಕೊಂಡು ಹೋಗಿದ್ದಾರೆ. ಇನ್ನು ನಿನ್ನೆ ಗ್ರಾಮದಲ್ಲಿ ಒಂದು ಕುರಿಯನ್ನ ಕದ್ದುಕೊಂಡು ಹೋಗುವಾಗ ಗ್ರಾಮದ ಜನರು ಕಳ್ಳನನ್ನ ಹಿಡಿಯಲು ಪ್ರಯತ್ನಪಟ್ಟಿದ್ದಾರೆ. ಅವ ಸಿಕ್ಕಿಲ್ಲ. ಆದರೂ ಅವನ ಬಳಿಯಿದ್ದ ಮೊಬೈಲ್ ಹಾಗೂ ಬೈಕ್ ಸಿಕ್ಕಿದೆ.
ಅದನ್ನ ಪೊಲೀಸರಿಗೆ ಕೊಟ್ಟು ಕಳ್ಳನನ್ನ ಹಿಡಿಯುವಂತೆ ಮನವಿ ಮಾಡಿದ್ದೂ ಆಯ್ತು. ಆದರೂ ಈವರೆಗೂ ಕೂಡಾ ಆ ಕಳ್ಳನನ್ನ ಹಿಡಿದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ತಾವು ಸಾಕಿರುವ ಮೇಕೆಯನ್ನ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ತಮ್ಮ ಕಷ್ಟವನ್ನ ಬಗೆಹರಿಕೊಳ್ಳಬಹುದೆಂದು ಕೊಂಡಿರುವ ಜನರಿಗೆ ಪದೆ ಪದೆ ಮೇಕೆಗಳು ಕಳ್ಳತನವಾಗುತ್ತಿದ್ದು ಏನು ಮಾಡಬೇಕು ಅನ್ನೋದೆ ಗೊತ್ತಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನು ಪದೇ ಪದೇ ಕಳ್ಳತನವಾಗುವುದರ ಬಗ್ಗೆ ಪೊಲೀಸರಿಗೆ ಹೇಳಿದರೆ ನಿಮ್ಮ ಮನೆಯ ಜವಾಬ್ದಾರಿ ನಿಮ್ಮದಾಗಿದ್ದು, ಗ್ರಾಮದ ಎಲ್ಲರೂ ಸಿಸಿಟಿವಿಯನ್ನ ಅಳವಡಿಸಿಕೊಳ್ಳಿ ಎಂದು ಸಲಹೇ ನೀಡುತ್ತಾರೆ. ಆದರೆ ಕಳ್ಳರನ್ನ ಯಾಕೆ ಹಿಡಿಯುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕುರಿ, ಮೇಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಜನರು ಒಬ್ಬಂಟಿಯಾಗಿ ಎಲ್ಲಿಯೂ ಹೋಗದಂತಹ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲೆಯ ಪೊಲೀಸರು ಎಚ್ಚೆತ್ತುಕೊಂಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನ ಪತ್ತೆ ಹಚ್ಚಿ ಕಳ್ಳತನ ಪ್ರಕರಣಗಳಿಗೆ ಮಂಗಳ ಹಾಡಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.
ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್