ಮತ್ತೆ ಗಮನ ಸೆಳೆಯಲಿದೆ ಕರ್ನಾಟಕದ ಜಲಿಯನ್ ವಾಲಾಬಾಗ್: ಸದ್ಯದಲ್ಲೇ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಬಸವಕಲ್ಯಾಣದ ಗೊರ್ಟಾ ಗ್ರಾಮಕ್ಕೆ, ಏನು ವಿಶೇಷ?

Sardar Vallabhbhai Patel Statue: ಬೀದರ್ ನಿಜಾಮರ ಆಡಳಿತದಿಂದ ಹೈದರಾಬಾದ್-ಕರ್ನಾಟಕದ ವಿಮೋಚನೆಗೂ ಮುನ್ನ ರಜಾಕಾರರ ದಾಳಿಯಿಂದಾದ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಬಿದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮ ಈಗ ಚರ್ಚೆಯಲ್ಲಿದೆ.

ಮತ್ತೆ ಗಮನ ಸೆಳೆಯಲಿದೆ ಕರ್ನಾಟಕದ ಜಲಿಯನ್ ವಾಲಾಬಾಗ್: ಸದ್ಯದಲ್ಲೇ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಬಸವಕಲ್ಯಾಣದ ಗೊರ್ಟಾ ಗ್ರಾಮಕ್ಕೆ, ಏನು ವಿಶೇಷ?
ಮತ್ತೆ ಗಮನ ಸೆಳೆಯಲಿದೆ ಕರ್ನಾಟಕದ ಜಲಿಯನ್ ವಾಲಾಬಾಗ್
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 17, 2023 | 12:03 PM

ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆಯೊಂದು ಗುಜರಾತ್ ನಲ್ಲಿ ನಿರ್ಮಾಣವಾಗಿದೆ. ಅದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ (Sardar Vallabhbhai Patel Statue). ಈಗ ಅದೇ ಮಾದರಿಯ ಪ್ರತಿಮೆಯೊಂದು ಬೀದರ್ ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಗೊರ್ಟಾ (ಬಿ) ಗ್ರಾಮದಲ್ಲಿ (Gorta Village) ನಿರ್ಮಾಣವಾಗುತ್ತಿದೆ. ಆ ಪ್ರತಿಮೆ ನಿರ್ಮಾಣದ ಹಿಂದೆ ಒಂದು ಐತಿಹಾಸಿಕ ಘಟನೆಯ ಸ್ವಾತ್ರಂತ್ಯಕ್ಕಾಗಿ ಬಲಿಯಾದ ವೀರ ಕನ್ನಡಿಗರ ಹೋರಾಟದ ಕಥೆಯಿದೆ. ಇತಿಹಾಸ ಪುಟಗಳಲ್ಲಿ ಮರೆಯಾಗಿರುವ ಆ ಇಂಟರಸ್ಟಿಂಗ್ ಕಥೆ ಇಲ್ಲಿದೆ. ಗೋರ್ಟಾ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ… ಏಳು ವರ್ಷದ ಹಿಂದೆ ಅಮಿತ್ ಶಾ ಇದಕ್ಕೆ ಭೂಮಿ ಪೂಜೆ ಮಾಡಿದ್ದರು. ನಾನಾ ಕಾರಣದಿಂದ ಸ್ಥಗಿತವಾಗಿದ್ದ ಕೆಲಸ ಇದೀಗ ಮರು ಆರಂಭಗೊಂಡಿದೆ. ಶೀಘ್ರವೇ ಪ್ರಧಾನಿ ನರೇಂದ್ರ ಮೋದಿಯವರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಉದ್ಘಾಟನೆ…? ಸ್ವಾತ್ರಂತ್ಯಕ್ಕಾಗಿ ಸೇಟೆದುನಿಂತ ವೀರ ಕನ್ನಡಿಗರು… ಅಲ್ಲಿ ನಡೆದಿದ್ದು 200 ಕನ್ನಡಿಗರ ಬರ್ಬರ ಹತ್ಯೆ… ಕ್ರಾಂತಿಯ ನೆಲದಲ್ಲಿ ಗುಜರಾತ್ ಮಾದರಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ… ಕನ್ನಡಿಗರ ನೆತ್ತರು ಹರಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸುತ್ತಿದ್ದಾರೆ… ಗೋರ್ಟಾ ಹುತಾತ್ಮ ಸ್ಮಾರಕ ಕೆಲಸಕ್ಕೆ ಅಂತಿಮ ಸ್ವರೂಪ… ರಾಜ್ಯದ ಜನರ ಗಮನ ಸೆಳೆಯಲಿದೆ ಕರ್ನಾಟಕದ ಜಲಿಯನ್ ವಾಲಾಬಾಗ್…

ಹೌದು ಇಡೀ ದೇಶದ ಜನತೆಗೆ 1947 ಆಗಸ್ಟ್‌‌ 15 ಬ್ರಿಟಿಷರಿಂದ ಮುಕ್ತಿ ಪಡೆದ ಸಂಭ್ರಮ. ಆದರೆ, ಹೈದರಾಬಾದ್‌-ಕರ್ನಾಟಕ ಭಾಗದ ಜನ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡರೂ ನಿಜಾಮರ ಆಡಳಿತದಿಂದ ಮುಕ್ತಿ ಪಡೆಯಲು 13 ತಿಂಗಳು ಹೋರಾಟ ಮಾಡಬೇಕಾಯಿತು. ಇದರ ಫಲವೆಂಬಂತೆ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮಕ್ಕೀಗ ರಾಜಕಳೆ ಬಂದಿದೆ.

ಗೋರ್ಟಾ ಹತ್ಯಾಕಾಂಡದಲ್ಲಿ ಮಡಿದವರ ಸವಿನೆನಪಿಗಾಗಿ ಈ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ರ ಪ್ರತಿಮೆ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ಗೊರ್ಟಾ ಗ್ರಾಮದ ಹೊರವಲಯದಲ್ಲಿರುವ 4 ಎಕರೆ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ, 30 ಅಡಿ ಪಂಚಲೋಹದ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿ, ಧ್ವಜ ಸ್ತಂಭ, ಥೀಮ್ ಪಾರ್ಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಇಚ್ಛೆಯನ್ನ ಬಿಜೆಪಿ ಹೊಂದಿದೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳುತ್ತಿದ್ದಾರೆ.

ಈಗ ಮತ್ತೆ ಚರ್ಚೆಯಲ್ಲಿದೆ… ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮ

ಬೀದರ್ ನಿಜಾಮರ ಆಡಳಿತದಿಂದ ಹೈದರಾಬಾದ್-ಕರ್ನಾಟಕದ ವಿಮೋಚನೆಗೂ ಮುನ್ನ ರಜಾಕಾರರ ದಾಳಿಯಿಂದಾದ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಬಿದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮ ಈಗ ಚರ್ಚೆಯಲ್ಲಿದೆ. ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ, ಸರ್ದಾರ್ ವಲ್ಲಭಭಾಯ್‌ ಪಟೇಲ್‌ರ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಭರದ ಸಿದ್ಧತೆ ಆರಂಭಿಸಿದೆ. ಭಾರತ ಸ್ವಾತಂತ್ರ್ಯದ ನಂತರವೂ ಅನೇಕ ತಿಂಗಳು ಹೈ-ಕ ಭಾಗ ನಿಜಾಮರ ಆಡಳಿತದಲ್ಲಿಯೇ ಉಳಿದಿತ್ತು. ಭಾರತ ಒಕ್ಕೂಟ ವ್ಯಾಪ್ತಿಗೆ ಬರಲು ನಿಜಾಮರು ಒಪ್ಪಿರಲಿಲ್ಲ. ರಜಾಕಾರರು (ಸೇವಕರು) ನಿಜಾಮರ ಪರವಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಬೇಕು ಎಂದು ಒತ್ತಾಯಿಸಿದ್ದವರ ಮೇಲೆ ದಾಳಿ ನಡೆಸಿದರು.

ಈ ಹತ್ಯಾಕಾಂಡದಲ್ಲಿ ಹಲವರು ಅಸುನೀಗಿದರು ಎಂಬುದು ಹಿನ್ನೆಲೆ. 1948ರ ಮೇ ತಿಂಗಳಲ್ಲಿ ಗೋರ್ಟಾ ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳಲ್ಲಿ ವಿಮೋಚನಾ ಹೋರಾಟದ ಭಾಗವಾಗಿ ದಾಳಿ, ಘರ್ಷಣೆಗಳು ನಡೆದಿವೆ. ಆದರೆ, ಗೋರ್ಟಾ ಗ್ರಾಮದಲ್ಲಿ ಹೆಚ್ಚಿನ ಜನರು ಮೃತಪಟ್ಟ ಕಾರಣಕ್ಕೆ ಈ ಗ್ರಾಮ ಮಹತ್ವ ಪಡೆದುಕೊಂಡಿದೆ. ಆದರೆ, ಎಷ್ಟು ಜನರು ಸತ್ತರು ಎಂಬ ಖಚಿತ ಮಾಹಿತಿ ಇಲ್ಲ.

ಆಗಿನ ಕೇಂದ್ರ ಸರ್ಕಾರದ ಸೂಚನೆಯಂತೆ ಈ ಭಾಗದಲ್ಲಿ ನಷ್ಟ, ಸಾವಿನ ಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ಕನ್ನಯ್ಯಲಾಲ್‌ ಮಕ್ಹನ್‌ಲಾಲ್‌ ಮುನ್ಷಿ ಅವರು, ‘ದ ಎಂಡ್ ಆಫ್‌ ಆ್ಯನ್‌ ಎರಾ’ ಪುಸ್ತಕದ ‘ಬಿಟ್‌ವೀನ್‌ ದ ಡೆವಿಲ್‌’ ಅಧ್ಯಾಯದಲ್ಲಿ ಗ್ರಾಮಸ್ಥರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ‘200ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ’ ಎಂದು ದಾಖಲಿಸಿದ್ದಾರೆಂದು ಇತಿಹಾಸಕಾರರು ಹೇಳುತ್ತಾರೆ.

ನಿಜಾಮರ ಆಡಳಿತದ ಪರ ಇದ್ದ ರಜಾಕಾರರ ವಿರುದ್ಧ ಹೋರಾಡಿ ಗೋರ್ಟಾ ಗ್ರಾಮದಲ್ಲಿ ಅನೇಕರು ಹುತಾತ್ಮರಾದರು. ಈ ಭಾಗದಲ್ಲಿ ಕೋಮುದಳ್ಳುರಿ ಭುಗಿಲೆದ್ದಿತ್ತು. ಪಟೇಲ್ ಅಂಥ ಪರಿಸ್ಥಿತಿಯನ್ನು ನಿಯಂತ್ರಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಕೈಗೆತ್ತಿಕೊಂಡಿದ್ದು, ಹೆಮ್ಮೆಯ ವಿಚಾರ ಎಂದು ಇಲ್ಲಿನ ಗ್ರಾಮಸ್ಥರು ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

ಗೋರ್ಟಾ ಹತ್ಯಾಕಾಂಡ ನಡೆದು ಸುಮಾರು 75 ವರ್ಷಗಳೇ ಗತಿಸಿವೆ. ಸುಮಾರು 4 ಸಾವಿರ ಜನಸಂಖ್ಯೆ ಇರುವ ಗೋರ್ಟಾ ಈಗಲೂ ಮೂಲ ಸೌಕರ್ಯಗಳ ನಿರೀಕ್ಷೆಯಲ್ಲಿದೆ. ರಸ್ತೆ, ಆರೋಗ್ಯ, ಕುಡಿಯುವ ನೀರು ಕೊರತೆ ಮತ್ತಿತರ ಸಮಸ್ಯೆಗಳಿಂದ ವಿಮೋಚನೆಯ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ. ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ದಕ್ಷಿಣದ ಜಲಿಯನ್​ ವಾಲಾಬಾಗ್‌ ಘಟನೆ ಎಂದೂ ಬಿಂಬಿಸಲಾಗುತ್ತದೆ. ಇಂಥ ಸ್ಥಳದಲ್ಲಿ ಹುತಾತ್ಮರ ಸ್ಮಾರಕವನ್ನು ಕಾರ್ಯಕರ್ತರಿಂದಲೇ ದೇಣಿಗೆ ಸಂಗ್ರಹಿಸಿ ಬಿಜೆಪಿ ಯುವ ಮೋರ್ಚಾ ಮುಂದಾಗಿರುವುದು ಹೆಮ್ಮೆಯ ವಿಚಾರ. ಇನ್ನೇನು ಕೇಲವೇ ಕೆಲವು ದಿನಗಳಲ್ಲಿ ಬೀದರ್ ನ ಗೋರ್ಟಾ ಗ್ರಾಮ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿಯುವುದರಲ್ಲಿ ಸಂಶಯವಿಲ್ಲ…

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್