ಬೀದರ್: ಕೆರೆ ನೀರು ನುಗ್ಗುವ ಆತಂಕ; ಜಲ ಕಂಟಕದಲ್ಲಿ ನಾಗನಕೇರಾ ಗ್ರಾಮಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2024 | 10:35 PM

ಆ ಕೆರೆ ತುಂಬಿದರೆ ಗ್ರಾಮದ ಜನರ ನೆಮ್ಮದಿಯೇ ಇರುವುದಿಲ್ಲ. ಯಾವಾಗ ನಮ್ಮ ಗ್ರಾಮಕ್ಕೆ ನೀರು ನುಗ್ಗುತ್ತದೆಯೋ ಎನ್ನುವ ಚಿಂತೆಯಲ್ಲಿಯೇ ದಿನದೂಡುತ್ತಿರುತ್ತಾರೆ. ಈ ಹಿನ್ನಲೆ ನಮ್ಮ ಮನೆಗಳನ್ನ ಬೆರೆಡೆಗೆ ಸ್ಥಳಾಂತರ ಮಾಡಿ ಎಂದು ಸರಕಾರಕ್ಕೆ, ಸಚಿವರುಗಳಿಗೆ ಮನವಿ ಮಾಡಿದರೂ ಕೂಡ ಏನೂ ಪ್ರಯೋಜನವಾಗುತ್ತಿಲ್ಲ. ಸರಕಾರ ಕೊಡುವ ಆಶ್ವಾಸನೆಯಲ್ಲಿಯೇ ಕುಟುಂಬಗಳು ಬದುಕು ಸವೆಸುತ್ತಿವೆ. ಎಲ್ಲಿ ಅಂತೀರಾ| ಈ ಸ್ಟೋರಿ ಓದಿ.

ಬೀದರ್: ಕೆರೆ ನೀರು ನುಗ್ಗುವ ಆತಂಕ; ಜಲ ಕಂಟಕದಲ್ಲಿ ನಾಗನಕೇರಾ ಗ್ರಾಮಸ್ಥರು
ಜಲ ಕಂಟಕದಲ್ಲಿ ನಾಗನಕೇರಾ ಗ್ರಾಮಸ್ಥರು
Follow us on

ಬೀದರ್​, ಅ.02: ತಾಲೂಕಿನ ಬೀದರ್(Bidar) ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಗನಕೇರಾ ಗ್ರಾಮದ ಕೆರೆಯ ನೀರು ಮಳೆಯಿಂದ ತುಂಬಿಕೊಂಡಿದ್ದು, ಗ್ರಾಮದ 20 ಕ್ಕೂ ಹೆಚ್ಚು ಮನೆಗಳಿಗೆ ಕೆರೆಯ ಬ್ಯಾಕ್ ವಾಟರ್ ನುಗ್ಗಿದೆ. ಇದರಿಂದ ಅಲ್ಲಿನ ವಾಸಿಗರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಳೆ ಯಾವ ವರ್ಷ ಜಾಸ್ತಿಯಾಗುತ್ತದೆಯೋ ಆ ವರ್ಷ ಕೆರೆಗೆ ನೀರು ಜಾಸ್ತಿಯಾಗುತ್ತದೆ . ಪರಿಣಾಮ ಮನೆಗಳಿಗೆ ನೀರು ನುಗ್ಗಿ, ವಾರಗಳಗಟ್ಟಲೇ ಪಂಚಾಯತಿಯಿಂದ ಗಂಜಿ ಕೇಂದ್ರವನ್ನು ತೆರೆದು ಅಲ್ಲಿನ ವಾಸಿಗರನ್ನ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡುತ್ತಾರೆ. ವಾರಗಳಗಟ್ಟಲೇ ಮನೆಯನ್ನ ತೊರೆದು ಗಂಜಿ ಕೇಂದ್ರದಲ್ಲಿ ವಾಸಮಾಡುವ ಸ್ಥಿತಿ ಗ್ರಾಮದ ಕೆಲವು ಮನೆಯವರಿಗೆ ಎದುರಾಗುತ್ತದೆ. ಹೀಗಾಗಿ ನಮ್ಮನ್ನ ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಇಲ್ಲಿನ ವಾಸಿಗರು ಜಿಲ್ಲಾಢಳಿತಕ್ಕೆ, ಸರಕಾರಕ್ಕೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತಿದ್ದಾರೆ.

ಇನ್ನು ಎರಡು ವಾರದ ಹಿಂದೆ ಮಳೆಯಿಂದ ಕೆರೆಯೆ ನೀರು ಜಾಸ್ತಿಯಾದ ಪರಿಣಾಮ ಮನೆಗಳಿಗೆ ನೀರು ನುಗ್ಗಿತ್ತು. ಆ ವೇಳೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸ್ಥಳೀಯ ಶಾಸಕರ ಶೈಲೇಂದ್ರ ಬೆಲ್ದಾಳೆ, ತಹಶಿಲ್ದಾರ್ ಸ್ಥಳಕ್ಕೆ ಭೆಟ್ಟಿ ಕೊಟ್ಟು ಬೆರೆ ಕಡೆಗೆ ಸ್ಥಳಾಂತರ ಮಾಡುವ ಭರವಸೆಯನ್ನ ಕೊಟ್ಟು ಹೋಗಿದ್ದಾರೆ. ಆದರೆ, ಈವರೆಗೂ ಏನು ಆಯಿತು ಎನ್ನುವ ವಿಚಾರವೇ ಸಂತ್ರಸ್ಥರಿಗೆ ಗೊತ್ತಾಗಿಲ್ಲ. ಕೆರೆಯ ಹಿನ್ನೀರು ಗ್ರಾಮವನ್ನ ಸುತ್ತುವರೆಯುವುದರಿಂದಾಗಿ ಜಲಚರಗಳ ಕಾಟ ಹೆಚ್ಚಾಗಿದ್ದು, ಹಾವು ಚೇಳುಗಳ ಕಾಟದಿಂದ ಗ್ರಾಮಸ್ಥರು ಭಯಭೀತಿಯಲ್ಲಿದ್ದಾರೆ.

ಇದನ್ನೂ ಓದಿ:ಜಲ ಕಂಟಕ: ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ 13 ಮಂದಿ ಜಲ ಸಮಾಧಿ!

ಈ ಕೆರೆಯ ನೀರು ಜಾಸ್ತಿಯಾದ್ರೆ, ಅದರ ಹಿನ್ನೀರು ರೈತರ ಜಮೀನಿಗೆ ನುಗ್ಗುತ್ತದೆ. ಇದರಿಂದಾಗಿ ಹತ್ತಾರು ಎಕರೆಯಷ್ಟು ಜಮೀನಿನಲ್ಲಿ ಬೆಳೆಯುವ ಬೆಳೆ ಹಾಳಾಗುತ್ತದೆ. ಜೊತೆಗೆ ತಿಂಗಳುಗಟ್ಟಲೇ ಕಬ್ಬು ಬೆಳೆಯಲ್ಲಿ ನೀರು ನಿಲ್ಲುವುದರಿಂದಾಗಿ ಕಬ್ಬು ಬೆಳೆ ಇಳುವರಿ ಕುಟುಂತವಾಗುತ್ತಿದೆ. ಇನ್ನು ಕೆಲವು ಸಲ ಕಟಾವಿಗೆ ಬಂದಿರುವ ಉದ್ದು, ಸೋಯಾಬೀನ್ ನೀರಿನಲ್ಲಿ ನಿಂತುಕೊಂಡು ಕೊಳೆತು ಹೋಗುತ್ತದೆ. ಹೀಗಾಗಿ ನಮ್ಮ ಮನೆಗಳನ್ನ ಸ್ಥಳಾಂತರ ಮಾಡುವುದರ ಜೊತೆಗೆ ಕೆರೆಗೆ ಗೇಟ್ ಅಳವಡಿಸಿ ಹೆಚ್ಚಿಗೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ನಮ್ಮ ಗ್ರಾಮದ ಕೆಲವು ಮನೆಗಳು ಸ್ಥಳಾಂತರವಾಗುತ್ತೇ, ಮುಳುಗಡೆಯಾದ ನಮ್ಮ ಜಮೀನಿಗೆ ಸೂಕ್ತ ಪರಿಹಾರ ಸಿಗುತ್ತದೆಂಬ ಭರವಸೆಯಲ್ಲಿಯೇ ಹತ್ತಾರು ವರ್ಷಗಳಿಂದ ಈ ಗ್ರಾಮದ ಜನ ಕಾಯುತ್ತಿದ್ದಾರೆ. ಆದರೆ, ನಮ್ಮನ್ನಾಳುವ ಸರಕಾರಗಳು, ಓಟು ಹಾಕಿಸಿಕೊಂಡು ಜನಪ್ರತಿನಿಧಿಗಳು ಮಾತ್ರ ಈ ಅಮಾಯಕ ಗ್ರಾಮದ ಹಾಗೂ ರೈತರ ಸಮಸ್ಯೆ ಮಾತ್ರ ಕೇಳಿಸುತ್ತಲೇ ಇಲ್ಲ. ಏನೇ ಇರಲಿ ಜನರ ಸಹನೇಯ ಕಟ್ಟೆಯೊಡೆಯುವ ಮುನ್ನ ಜಿಲ್ಲಾಢಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ