ಬೀದರ್​: ಕಾರಂಜಾ ಜಲಾಶಯ ನಿರ್ಮಾಣದಿಂದ ಭೂಮಿ ಕಳೆದುಕೊಂಡ ರೈತರಿಗೆ 4 ದಶಕ ಕಳೆದರೂ ಸಿಗದ ಪರಿಹಾರ

| Updated By: ವಿವೇಕ ಬಿರಾದಾರ

Updated on: Feb 25, 2024 | 8:16 AM

ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಡ್ಯಾಂ ನಿರ್ಮಾಣದ ವೇಳೆ ಸುಮಾರು 26 ಹಳ್ಳಿಯ ರೈತರು ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ರೈತರು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ದಶಕಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಕಳೆದ ಎಂಟು ತಿಂಗಳಿಂದ ಮಾನವ ಸರಪಳಿ, ಕೇಶ ಮುಂಡನ, ಉರುಳು ಸೇವೆ ಹೀಗೆ ನಾನಾ ರೀತಿಯಲ್ಲಿ ಪ್ರತಿಭಟನೆ ಮಾಡಿದರು ಕೂಡ ಜಿಲ್ಲೆಯ ರಾಜಕಾರಣಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ಬೀದರ್​: ಕಾರಂಜಾ ಜಲಾಶಯ ನಿರ್ಮಾಣದಿಂದ ಭೂಮಿ ಕಳೆದುಕೊಂಡ ರೈತರಿಗೆ 4 ದಶಕ ಕಳೆದರೂ ಸಿಗದ ಪರಿಹಾರ
ಕಾರಂಜಾ ಡ್ಯಾಂನಿಂದ ಭೂಮಿ ಕಳೆದುಕೊಂಡ ರೈತರ ಪ್ರತಿಭಟನೆ
Follow us on

ಬೀದರ್​, ಫೆಬ್ರವರಿ 25: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಬೀದರ್​ (Bidar) ಜಿಲ್ಲೆಯ ಅನ್ನದಾತರು (Farmers) ಕಳೆದ ನಾಲ್ಕು ದಶಕಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಮಳೆ, ಚಳಿ, ಬಿಸಿಲು ಲೆಕ್ಕಸಿದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಪ್ರತಿಭಟನೆ ನಡೆಸುತ್ತಿರುವ ನೇಗಿಲ ಯೋಗಿಯ ಸಮಸ್ಯೆ ಕೇಳಲು ಯಾರು ಬರುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದ್ದು, ಉಗ್ರ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ರೈತರು ಪ್ರತಿಭಟನೆ ಮಾಡುತ್ತಿರುವುದು ಏಕೆ? ಈ ಸ್ಟೋರಿ ಓದಿ..

ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಡ್ಯಾಂ (Karanja Dam) ನಿರ್ಮಾಣದ ವೇಳೆ ಸುಮಾರು 26 ಹಳ್ಳಿಯ ರೈತರು ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ರೈತರು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ದಶಕಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಕಳೆದ ಎಂಟು ತಿಂಗಳಿಂದ ಮಾನವ ಸರಪಳಿ, ಕೇಶ ಮುಂಡನ, ಉರುಳು ಸೇವೆ ಹೀಗೆ ನಾನಾ ರೀತಿಯಲ್ಲಿ ಪ್ರತಿಭಟನೆ ಮಾಡಿದರು ಕೂಡ ಜಿಲ್ಲೆಯ ರಾಜಕಾರಣಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇದು ಸಹಜವಾಗಿ ರೈತರನ್ನು ಕೆರಳುವಂತೆ ಮಾಡಿದೆ.

ಬೀದರ್, ಭಾಲ್ಕಿ, ಔರಾದ್, ಹುಮ್ಮಾಬಾದ್ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 1972 ರಲ್ಲಿ ಬೀದರ್ ಬಳಿ ಕಾರಂಜಾ ಜಲಾಶಯವನ್ನ ನಿರ್ಮಿಸಲಾಯಿತು. ಜಲಾಶಯ ನಿರ್ಮಾಣದಿಂದಾಗಿ 9 ಹಳ್ಳಿಗಳು ಮುಳುಗಡೆಯಾಗಿ 10 ಸಾವಿರ ಕುಟುಂಬಗಳು ಬೀದಿಗೆ ಬಿದ್ದುವು. 26 ಗ್ರಾಮಗಳ 18 ಸಾವಿರ ಎಕರೆ ಭೂಮಿ ನೀರಿನಲ್ಲಿ ಮುಳುಗಿ ಹೋಗಿದೆ. ಇಷ್ಟೆಲ್ಲ ನಷ್ಟವಾದರೂ ಸರಕಾರ ಮಾತ್ರ ಇನ್ನೂವರೆಗೂ ರೈತರಿಗೆ ಕೊಡಬೇಕಾದ ಪರಿಹಾರವನ್ನು ಕೊಟ್ಟಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಕಳೆದ ಐದು ದಶಕದಿಂದ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದರು ನ್ಯಾಯಯುತವಾಗಿ ರೈತರಿಗೆ ಸಿಗಬೇಕಿದ್ದ ಪರಿಹಾರ ಮಾತ್ರ ಸಿಗುತ್ತಿಲ್ಲ.

ಇದನ್ನೂ ಓದಿ: ಬೇಸಿಗೆ ಆರಂಭಕ್ಕೂ ಮುನ್ನ ಬತ್ತುವ ಹಂತದಲ್ಲಿ ತುಂಗಭದ್ರಾ ಜಲಾಶಯ! ನಾಲ್ಕು ಜಿಲ್ಲೆಗಳಿಗೆ ಸಂಕಷ್ಟ

ಜಮೀನು ಕಳೆದಕೊಂಡ ರೈತರು ಸಾಕಷ್ಟು ಬಾರಿ ಪ್ರತಿಭಟನೆ ರ್‍ಯಾಲಿ, ರಸ್ತೆ ತಡೆ ಮಾಡಿದಾಗ ನೆಪ ಮಾತ್ರಕ್ಕೆ ಭೇಟಿ ನೀಡಿದ ರಾಜಕಾರಣಿಗಳು, ಸೂಕ್ತ ಪರಿಹಾರ ಕೊಡಿಸುವುದಾಗಿ ಪೊಳ್ಳು ಭರವಸೆಯನ್ನು ನೀಡದರೆ ಹೊರತು ರೈತರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿಲ್ಲ. ಈ ಹಿಂದೆ 2018 ರಲ್ಲಿ ಎರಡು ತಿಂಗಳುಗಳ ಕಾಲ ರೈತರು ಅಹೋರಾತ್ರಿ ಧರಣಿ ಮಾಡಿದರು. ರೈತರ ಹೋರಾಟಕ್ಕೆ ಮಣಿದು ಅಂದಿನ ಮುಖ್ಯಮಂತ್ರಿ ಮತ್ತು ಇತರೆ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಹೋದರು. ಆದರೆ ಪರಿಹಾರ ಮಾತ್ರ ಬಿಡುಗಡೆಯಾಗಲಿಲ್ಲ. ಕೇವಲ ಹೆಸರಿಗೆ ಮಾತ್ರ ಭೇಟಿ ನಿಡುವ ರಾಜಕಾರಣಿಗಳು ಇಲ್ಲಿಯವರೆಗೂ ರೈತರ ಸಮಸ್ಯೆಯ ಬಗ್ಗೆ ಮಾತನಾಡುತ್ತಿಲ್ಲ. ಇದು ಸಹಜವಾಗಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಡ್ಯಾಂನಿಂದ ಭೂಮಿ, ಮನೆಗಳನ್ನು ಕಳೆದುಕೊಂಡ ಕುಟುಂಬವನ್ನು ಗುರುತಿಸಿದ 1972ರಲ್ಲಿನ ಸರಕಾರ ಮೊದಲ ಹಂತದಲ್ಲಿ ಅರ್ಧ ಹಣವನ್ನ ನೀಡಿದೆ. ಆದರೆ ಇನ್ನೂಳಿದ ಹಣವನ್ನ ಮಾತ್ರ ಸರಕಾರ ಇಲ್ಲಿಯವರೆಗೂ ನೀಡಿಲ್ಲ. ಆಲಮಟ್ಟಿ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ನ್ಯಾಯ, ಕಾರಂಜಾ ಡ್ಯಾಂನಿಂದ ಭೂಮಿ ಕಳೆದುಕೊಂಡ ರೈತರಿಗೆ ಒಂದು ನ್ಯಾಯವೇ ಎಂದು ರೈತರು ಪ್ರಶ್ನೀಸುತ್ತಿದ್ದಾರೆ.

ಸುಮಾರು 9 ಸಾವಿರ ಕುಟುಂಬಗಳು ಸರಕಾರ ಕೊಡುವ ಪರಿಹಾರದ ನಿರೀಕ್ಷೆಯಲ್ಲಿ ಪ್ರತಿನಿತ್ಯ ಚಾತಕ ಪಕ್ಷೀಯಂತೆ ಕಾಯುತ್ತಿದ್ದಾವೆ. ಮನೆ, ಆಸ್ತಿ-ಪಾಸ್ತಿ ಹೋಗಿದೆ. ಸರಕಾರ ಪರಿಹಾರಕೊಟ್ಟರೆ ನಮ್ಮ ಬಾಳು ಕೂಡ ಬೆಳಕಾಗಬಹುದೆಂಬ ಆಸೆ ಇದೆ. ಪರಿಹಾರಕ್ಕಾಗಿ ನಾಲ್ಕು ದಶಕದಿಂದ ಹೋರಾಟ ಮಾಡುತ್ತಿದ್ದರೂ, ಸರಕಾರ ಮಾತ್ರ ನೊಂದ ರೈತರ ಸಮಸ್ಯೆಯನ್ನು ಪರಿಹರಿಸುವ ಕಡೆಗೆ ಒಲವು ತೋರಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:14 am, Sun, 25 February 24