ಬೀದರ್, ಅಕ್ಟೋಬರ್ 23: ಬಿಗ್ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ (Varthur Santhosh) ಅವರ ಲಾಕೆಟ್ನಲ್ಲಿ ಹುಲಿಯ ಉಗುರು ಪತ್ತೆ ಆಗಿರುವುದರಿಂದ ಅವರನ್ನು ಬಂಧಿಸಲಾಗಿದೆ. ಸದ್ಯ ಈ ಕುರಿತಾಗಿ ನಗರದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, ಸಂತೋಷ್ ಕೊರಳಲ್ಲಿ ಹುಲಿಯ ಉಗುರು ಹಾಕಿಕೊಂಡಿದಾರೆಂಬ ದೂರು ಇತ್ತು. ಆ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ವನ್ಯ ಜೀವಿಗಳ ಕಾನೂನಿನ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ. ಇದರಲ್ಲಿ ಯಾರೇ ಇದ್ದರೂ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ನನಗೆ ನಮ್ಮ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ಕೊಟ್ಟಿದಾರೆ. ತನಿಖೆ ನಡೆಸಿ ಹುಲಿಯ ಉಗುರು ಎಂದು ಗುರುತಿಸಿದ ಮೇಲೆ ಕಾನೂನು ರೀತಿ ಕ್ರಮ ಜರುಗಿಸುತ್ತಾರೆ ಎಂದರು.
ಇದನ್ನೂ ಓದಿ: ವರ್ತೂರು ಸಂತೋಷ್ ಬಂಧನದ ಹಿಂದೆ ಇದೆ ಷಡ್ಯಂತ್ರ?
ಕಳ್ಳಬೇಟೆಗಳ ಮೂಲಕ ಈ ರೀತಿ ಮಾರಾಟ ಆಗಿರಬಹುದು. ದಾಂಡೆಲಿಯಲ್ಲಿ ಇಂತಹ ಕಳ್ಳಬೇಟೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಅರಣ್ಯ ಇಲಾಖೆ ಇಂತಹ ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ. ಅಧಿಕಾರಿಗಳಿಗೆ ಸಂಪೂರ್ಣವಾದ ಅಧಿಕಾರ ಕೊಡಲಾಗಿದೆ. ಯಾವುದೇ ರೀತಿಯ ಒತ್ತಡಕ್ಕೊಳಗಾಗದೇ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಸಂತೋಷ್ ಪರ ವಕೀಲ ನಟರಾಜ್ ಟಿವಿ9 ಜೊತೆ ಮಾತನಾಡಿದ್ದು, ರಾತ್ರಿ 10.30ಕ್ಕೆ ನನಗೆ ಅವರ ದೊಡ್ಡಪ್ಪ ಕರೆ ಮಾಡಿ ತಿಳಿಸಿದರು. ಈ ರೀತಿ ಕಗ್ಗಲೀಪುರ ಅರಣ್ಯಾಧಿಕಾರಿಗಳು ಬಂಧನ ಮಾಡಿದ್ದಾರೆ ಅಂತ ತಿಳಿಸಿದರು. ರಾತ್ರಿಯೇ ತನಿಖಾಧಿಕಾರಿಯನ್ನು ಭೇಟಿ ಮಾಡಿದೆ. ಬೆಳಗ್ಗೆ 10.30 ಗೆ ಬನ್ನಿ ಎಂದು ಹೇಳಿದ್ದರು.
ರಾತ್ರಿ ಸಂತೋಷ್ರನ್ನು ಭೇಟಿ ಮಾಡಿದ್ದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ನಾನ್ ಬೇಲಬಲ್ ಸೆಕ್ಷನ್ ಆಗಿದೆ. ಎರಡು ದಿನ ಕೋರ್ಟ್ ರಜೆ ಇದೆ ಹೀಗಾಗಿ ಜಡ್ಜ್ ಮನೆಗೆ ಪ್ರೊಡ್ಯೂಸ್ ಮಾಡುತ್ತಾರೆ. ಬೆಂಗಳೂರು ಎಸಿಜೆಂಎಂ ಕೋರ್ಟ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸುತ್ತಾರೆ. ನಾನು 25 ವರ್ಷದಿಂದಲೂ ಫ್ಯಾಮಿಲಿ ಫ್ರೆಂಡ್ ಕೂಡ ಹೌದು. ಹಾಜರು ಪಡಿಸಿದ ತಕ್ಷಣವೇ ನಾವು ಕೂಡ ಬೇಲ್ಗೆ ಅಪ್ಲೈ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ರನ್ನು ಕೋರಮಂಗಲದ ಎನ್ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಕರೆದೊಯ್ದಿದ್ದಾರೆ. ಈ ವೇಳೆ ಮಾಸ್ಕ್ ಮತ್ತು ಕ್ಯಾಪ್ ಧರಿಸಿ ಅರಣ್ಯ ಇಲಾಖೆಯ ವಾಹನದಲ್ಲಿ ವರ್ತೂರು ಸಂತೋಷ್ ತೆರಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Mon, 23 October 23