
ಬೆಂಗಳೂರು, ಫೆಬ್ರವರಿ 17: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ (BJP) ವಿರುದ್ಧ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ (Karnataka High Court) ಮಂಗಳವಾರ ರದ್ದುಪಡಿಸಿ ಆದೇಶಿಸಿದೆ. ಇದರೊಂದಿಗೆ ರಾಹುಲ್ ಗಾಂಧಿ ನಿರಾಳರಾದಂತಾಗಿದೆ.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ‘ಕರಪ್ಶನ್ ರೇಟ್ ಕಾರ್ಡ್’ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದರು. ಈ ವಿಚಾರವಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಬಿಜೆಪಿ ಪರವಾಗಿ ಕೇಶವಪ್ರಸಾದ್ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು.
ಖಾಸಗಿ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ, ಪ್ರಕರಣದ ಸ್ವರೂಪ ಮತ್ತು ದಾಖಲೆಗಳನ್ನು ಪರಿಗಣಿಸಿ ಖಾಸಗಿ ದೂರನ್ನು ರದ್ದುಪಡಿಸಿದೆ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರ ಘೋಷಣೆಗಳಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಲಾಗಿತ್ತು. ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ ಶೇಕಡಾ 40 ರಷ್ಟು ಕಮಿಷನ್/ಲಂಚವನ್ನು ವಿಧಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿತ್ತು. ಇದರೊಂದಿಗೆ, ಬಿಜೆಪಿ ಸರ್ಕಾರದ ‘ಕರಪ್ಶನ್ ರೇಟ್ ಕಾರ್ಡ್’ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಇದನ್ನು ರಾಹುಲ್ ಗಾಂಧಿ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಇದರ ವಿರುದ್ಧ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ (ಸಿಎಂ) ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಸಂಸದರ ಆಗ್ರಹ
ಆದರೆ, ಸರ್ಕಾರದ ವಿರುದ್ಧ ಟೀಕೆ ಮಾಡಲಾಗಿದೆಯೇ ವಿನಃ ನೇರವಾಗಿ ಬಿಜೆಪಿ ವಿರುದ್ಧ ಅಲ್ಲ. ಸರ್ಕಾರದ ವಿರುದ್ಧ ಮಾಡುವ ಟೀಕೆಗಳು ಮಾನನಷ್ಟ ಮೊಕದ್ದಮೆ ಅಡಿ ಬರುವುದಿಲ್ಲ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧದ ಕ್ರಮಗಳು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು.
Published On - 2:06 pm, Tue, 17 February 26