
ಬೆಂಗಳೂರು, ಆಗಸ್ಟ್ 19: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದೆ. ಇಡೀ ಪ್ರಕರಣ ಒಂದು ಷಡ್ಯಂತ್ರ ಆಗಿದ್ದು, ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ (Sasikanth Senthil) ಕೈವಾಡ ಇದೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಗಂಭೀರ ಆರೋಪ ಮಾಡಿದ್ದಾರೆ. ಸಸಿಕಾಂತ್ ಸೆಂಥಿಲ್ ಹಾಗೂ ಕಾಂಗ್ರೆಸ್ ಬಗ್ಗೆ ಮಾಡಿದ ಗಂಭೀರ ಆರೋಪದ ವಿಚಾರವಾಗಿ ‘ಟಿವಿ9’ ಜತೆ ಮಾತನಾಡಿ ಮಾಹಿತಿ ನೀಡಿದ್ದಾರೆ.
ಸಂಸದ ಸಸಿಕಾಂತ್ ಸೆಂಥಿಲ್ ಒತ್ತಡದ ಮೇರೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಕಾಂಗ್ರೆಸ್ ವರಿಷ್ಠರಿಗೆ ಸೆಂಥಿಲ್ ಆಪ್ತ. ಎಸ್ಐಟಿ ರಚನೆಗೆ ಒತ್ತಡ ಹಾಕಿದ್ದಾರೆ. ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವನಾಗಿದ್ದು, ಸಸಿಕಾಂತ್ ಸೆಂಥಿಲ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ರೆಡ್ಡಿ ಆರೋಪಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ಈ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಸಾಕಾಗುವುದಿಲ್ಲ. ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಸತ್ಯ ಹೊರಬರುವುದಿಲ್ಲ. ಸಿಬಿಐ ಅಥವಾ ಎನ್ಐಎ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಯೂಟ್ಯೂಬರ್ಗಳ ಅಪಪ್ರಚಾರದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವು ಯೂಟ್ಯೂಬರ್‌ಗಳು ಈ ಪ್ರಕರಣದ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಈ ಅಪಪ್ರಚಾರದಿಂದ ಧರ್ಮಸ್ಥಳದಂತಹ ಪುಣ್ಯಕ್ಷೇತ್ರಗಳಿಗೆ ಹಾನಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣ ಸಂಬಂಧ ಸಸಿಕಾಂತ ಸೆಂಥಿಲ್ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಸಿದ್ಧರಿರುವುದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಮಾಡಿರುವ ಆರೋಪಕ್ಕೆ ಪೂರಕ ಮಾಹಿತಿ, ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ.
ಸಸಿಕಾಂತ್ ಸೆಂಥಿಲ್ 2009ರಿಂದ 2019ರವರೆಗೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2017 ರಿಂದ ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿದ್ದು, 2019 ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ 2020 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಪ್ರಸ್ತುತ ತಮಿುನಾಡಿದ ತಿರುವಲ್ಲೂರು ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದಕ್ಷಿಣ ಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಷಡ್ಯಂತ್ರ ಎಂದ ರೆಡ್ಡಿ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೂ ಮಾಹಿತಿ ಇರಬಹುದು. ಸರ್ಕಾರ, ಗೃಹ ಸಚಿವರು ರಾಜ್ಯದ ಪವಿತ್ರ ಕ್ಷೇತ್ರದ ಬಗ್ಗೆ ಆಗುತ್ತಿರುವ ಅಪಪ್ರಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ರೆಡ್ಡಿ ಆಗ್ರಹಿಸಿದ್ದಾರೆ. ಇದೀಗ ಜನಾರ್ದನ ರೆಡ್ಡಿ ಆರೋಪದೊಂದಿಗೆ ಧರ್ಮಸ್ಥಳ ಪ್ರಕರಣಕ್ಕೆ ಹೊಸ ಹಾಗೂ ದೊಡ್ಡ ತಿರುವು ದೊರೆತಂತಾಗಿದೆ.
Published On - 2:13 pm, Tue, 19 August 25