ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್‌, ರಿಕ್ಷಾ ಸಂಚಾರ ಬಂದ್, ನಿಯಮ ಮೀರಿದ್ರೆ ದಂಡ

ಇಂದಿನಿಂದ ಮೈಸೂರು ಬೆಂಗಳೂರು ಹೈವೇ ರಸ್ತೆಯಲ್ಲಿ ಬೈಕ್ ಆಟೋ ಹಾಗೂ ಟ್ರ್ಯಾಕ್ಟರ್‌ಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್‌, ರಿಕ್ಷಾ ಸಂಚಾರ ಬಂದ್, ನಿಯಮ ಮೀರಿದ್ರೆ ದಂಡ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ
Updated By: ರಮೇಶ್ ಬಿ. ಜವಳಗೇರಾ

Updated on: Aug 01, 2023 | 7:12 AM

ಬೆಂಗಳೂರು/ಮೈಸೂರು, (ಆಗಸ್ಟ್ 1): ಇಂದಿನಿಂದ ಅಂದ್ರೆ ಆಗಸ್ಟ್ 01ರಿಂದ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ(Bengaluru-Mysuru expressway) ದ್ವಿಚಕ್ರ (Bike) ತ್ರಿಚಕ್ರ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.  ಬದಲಿಗೆ ಸರ್ವಿಸ್ ರಸ್ತೆಯಲ್ಲಿ ಮಾತ್ರ ಈ ವಾಹನಗಳು ಸಂಚರಿಸಬಹುದು. ಇದಕ್ಕೆ ಕಾರಣ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಪ್ರತಿನಿತ್ಯ ಆಗುತ್ತಿರುವ ಅಪಘಾತಗಳು. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟನೆಯಾದ ದಿನದಿಂದಲೂ ಇದು ಅಪಘಾತಕ್ಕೆ ಕುಖ್ಯಾತಿ ಪಡೆದಿದೆ. ನಿತ್ಯ ಒಂದಲ್ಲ ಒಂದು ಅಪಘಾತ ವಾಹನ ಸವಾರರ ನಿದ್ದೆಗೆಡಿಸಿದೆ. ಹೀಗಾಗಲೇ 290ಕ್ಕೂ ಹೆಚ್ಚು ಅಪಘಾತವಾಗಿದ್ದು, 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ಹೊಸ ನಿಯಮ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಯೂ ಟರ್ನ್ ಹೊಡೆದ ಕೆಎಸ್​ಆರ್​ಟಿಸಿ ಬಸ್​: ಟೋಲ್​ನಿಂದ ಬಚಾವ್​ ಆಗಲು ಪ್ರಯಾಣಿಕರ ಪ್ರಾಣ ಸಂಕಟಕ್ಕೆ ದೂಡಿದ ಡ್ರೈವರ್​​

ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗೆ ನಿಷೇಧ ಹೇರಿದ್ದು ಸ್ಥಳೀಯರು ಮತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ಪ್ರೆಸ್ ಹೈವೇಗಾಗಿ ನಮ್ಮ ಜಮೀನು ಕೊಟ್ಟಿದ್ದೇವೆ. ನಮಗೂ ಇಂತಹ ರಸ್ತೆಯಲ್ಲಿ ಓಡಾಡಬೇಕು ಅಂತ ಆಸೆ ಇರುತ್ತೆ. ಇನ್ನು ನಮ್ಮ ಹೆಂಡತಿ ಮಕ್ಕಳು ಈ ರಸ್ತೆಯಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅಂದ್ರೆ ನಾವು ಏನು ಮಾಡೋದು? ನಮಗೆ ಕಾರು ಕೊಳ್ಳಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಆದೇಶದ ಬಗ್ಗೆ ಪರ ವಿರೋಧಗಳು ಕೇಳಿಬಂದಿದೆ. ಪರ ವಿರೋಧಗಳ ನಡುವೆಯೇ ಇವತ್ತಿನಿಂದ ಆದೇಶ ಜಾರಿಯಾಗುತ್ತಿದೆ. ಒಂದು ವೇಳೆ ಆದೇಶವನ್ನು ಉಲ್ಲಂಘನೆ ಮಾಡಿದ್ರೆ ದಂಡ ಸಹ ವಿಧಿಸಲಾಗುತ್ತಿದೆ. ಮೈಸೂರಿನಲ್ಲಿ ಆರಂಭವಾಗುವ ಹೈವೇ ಮತ್ತು ಬೆಂಗಳೂರು ಹೈವೇ ಆರಂಭದಲ್ಲಿ ಪೊಲೀಸರು ಹಾಗೂ ಪ್ರಾಧಿಕಾರದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅದೇನೆ ಇರಲಿ ಮೈಸೂರು ಬೆಂಗಳೂರು ರಸ್ತೆಯಲ್ಲಿ ಇನ್ನಾದ್ರೂ ಅಪಘಾತಗಳು ಕಡಿಮೆಯಾಗುತ್ತಾ ಕಾದು ನೋಡಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:57 am, Tue, 1 August 23