ಗ್ಯಾರಂಟಿ ಜಾರಿಗೆ ಎಸ್‌ಸಿ, ಎಸ್‌ಟಿ ಅನುದಾನದಿಂದ 11000 ಕೋಟಿ ರೂ. ಬಳಸಲು ತಂತ್ರ ಹೆಣೆದ ಸಿದ್ದರಾಮಯ್ಯ ಸರ್ಕಾರ; ಏನದು?
ಐದು ಖಾತರಿಗಳಿಗೆ ಪರಿಶಿಷ್ಟ ಜಾತಿಗಳ ಉಪ ಯೋಜನೆ ಅಡಿಯಲ್ಲಿ 7,700 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಅಡಿಯಲ್ಲಿ 3,430 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ತಿಳಿಸಿದ್ದಾರೆ.
ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಉಚಿತ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್, ಎಸ್‌ಟಿ ಕಲ್ಯಾಣಕ್ಕೆ ಮೀಸಲಾದ ನಿಧಿಯಿಂದ (SC/ST welfare fund) 11,000 ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ಕುರಿತು, ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆ (SCSP-TSP) ಅಡಿಯಲ್ಲಿ 34,293 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಎಸ್‌ಸಿ, ಎಸ್‌ಟಿ ಉಪಯೋಜನೆಯ ಹಣವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು. ಇದನ್ನು ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ಆರಂಭದಲ್ಲಿ ತಳ್ಳಿಹಾಕಿದ್ದರು. ಆದಾಗ್ಯೂ, ಅವರು ಸುಮಾರು 11,000 ಕೋಟಿ ರೂ.ಗಳನ್ನು ಬಳಸಿಕೊಳ್ಳ,ಲು ನಿರ್ಧರಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.
ಐದು ಖಾತರಿಗಳಿಗೆ ಪರಿಶಿಷ್ಟ ಜಾತಿಗಳ ಉಪ ಯೋಜನೆ ಅಡಿಯಲ್ಲಿ 7,700 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಅಡಿಯಲ್ಲಿ 3,430 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಎಸ್, ಎಸ್‌ಟಿ ಅನುದಾನದ ಹಣ ಗ್ಯಾರಂಟಿಗೆ ಬಳಸುವುದು ಹೇಗೆ?
ಎಸ್‌ಸಿ, ಎಸ್‌ಟಿ ಸಮುದಾಯದ ಫಲಾನುಭವಿಗಳ ಸಂಖ್ಯೆಯನ್ನು ಗುರುತಿಸುವ ಮೂಲಕ ಖಾತರಿಗಾಗಿ ಉಪ ಯೋಜನೆಗಳ ಹಣವನ್ನು ಬಳಸುವುದನ್ನು ಸಮರ್ಥಿಸಲು ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಖಾತರಿಗಳ ಅಡಿಯಲ್ಲಿ ಎಷ್ಟು ಮಂದಿ ಎಸ್‌ಸಿ, ಎಸ್‌ಟಿ ಜನರು ಪ್ರಯೋಜನ ಪಡೆಯುತ್ತಾರೆ ಎಂಬುದರ ಕುರಿತು ವಿವರಗಳನ್ನು ನೀಡಲು ನಾವು ಇಲಾಖೆಗಳನ್ನು ಕೇಳಿದ್ದೇವೆ ಎಂದು ಮಹದೇವಪ್ಪ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಉದಾಹರಣೆಯನ್ನು ಉಲ್ಲೇಖಿಸಿದ ಸಚಿವರು, ಎಷ್ಟು ಮಂದಿ ಎಸ್‌ಸಿ, ಎಸ್‌ಟಿ ಜನ ಉಚಿತ ಬಸ್ ಪ್ರಯೋಜನ ಪಡೆಯುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಒಬ್ಬರು (ಮಹಿಳೆ) 30 ಬಾರಿ ಪ್ರಯಾಣಿಸಿದರೆ, ನಾವು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆ ಮಾಡಿ ಅಂತಾ ರಾಜ್ಯದ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ: ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಸಿಟಿ ರವಿ ಕಿಡಿ
ಐದು ಗ್ಯಾರಂಟಿಗಳಿಗೆ ಪ್ರತಿ ವರ್ಷ 52,000 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡಗಳ ಉಪ ಯೋಜನೆ (ಯೋಜನೆ, ಹಂಚಿಕೆ ಮತ್ತು ಹಣಕಾಸು ಸಂಪನ್ಮೂಲಗಳ ಬಳಕೆ) ಕಾಯ್ದೆಯು ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕಾಗಿ ಸರ್ಕಾರವು ತನ್ನ ಒಟ್ಟು ಬಜೆಟ್‌ನ ಶೇ 24.1 ರಷ್ಟನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಉಲ್ಲೇಖಿಸಿದೆ. ಐದು ಗ್ಯಾರಂಟಿಗಳಿಗೆ ಉಪಯೋಜನೆಯಡಿ ಹೆಚ್ಚುವರಿ ಹಂಚಿಕೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಿಂತಿರುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 pm, Mon, 31 July 23