AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ದುಬಾರಿ ದುನಿಯಾ; ಟೊಮೆಟೊ ದರ ಬರೆಯ ಮೇಲೆ ಮತ್ತೊಂದು ಬರೆ, ಹಾಲು-ಹೋಟೆಲ್ ದರ ಹೆಚ್ಚಳ

ಟೊಮೆಟೊ ದರ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದಿನಿಂದ ನಂದಿನಿ ಹಾಲಿನ ಮೇಲೆ ಮೂರು ರೂಪಾಯಿ ದರ ಏರಿಕೆಯಾಗ್ತಿದ್ದು ಹೋಟೆಲ್ ಊಟ ತಿಂಡಿ ಕಾಫಿ‌ ಟೀ ಮೇಲೆ ಹತ್ತರಷ್ಟು ದರ ಏರಿಕೆಯಾಗ್ತಿದೆ.

ಇಂದಿನಿಂದ ದುಬಾರಿ ದುನಿಯಾ; ಟೊಮೆಟೊ ದರ ಬರೆಯ ಮೇಲೆ ಮತ್ತೊಂದು ಬರೆ, ಹಾಲು-ಹೋಟೆಲ್ ದರ ಹೆಚ್ಚಳ
ದುಬಾರಿ ದುನಿಯಾ
TV9 Web
| Updated By: ಆಯೇಷಾ ಬಾನು|

Updated on:Aug 01, 2023 | 7:40 AM

Share

ಬೆಂಗಳೂರು, ಆಗಸ್ಟ್ 01: ಇಂದಿನಿಂದ ದುಬಾರಿ ದುನಿಯಾ ಶುರು. ಟೊಮೆಟೊ ದರ(Tomato Rate) ಏರಿಕೆಗೆ ರಾಜ್ಯದ ಜನ ರೋಸಿ ಹೋಗಿದ್ದು ಇಂದಿನಿಂದ ಜನರ ಮೇಲೆ ಮತ್ತೊಂದು ದರ ಏರಿಕೆ ಬರೆ ಬೀಳಲಿದೆ. ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಈಗ ಏಕಾಏಕಿ ಡಬಲ್ ಆಗಿದ್ದು ಕೆ.ಆರ್ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 140-160 ರೂ. ಇದೆ. ಇನ್ನು ಇಂದಿನಿಂದ ನಂದಿನಿ ಹಾಲಿನ(Milk Rate Hike) ಮೇಲೆ ಮೂರು ರೂಪಾಯಿ ದರ ಏರಿಕೆಯಾಗ್ತಿದ್ರೆ ಇದರಿಂದ ಹೋಟೆಲ್ ಊಟ ತಿಂಡಿ ಕಾಫಿ‌ ಟೀ ಮೇಲೆ(Hotel Food Rate) ಹತ್ತರಷ್ಟು ದರ ಏರಿಕೆಯಾಗ್ತಿದೆ. ಹೀಗಾಗಿ ಇಂದಿನಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ.

ಕೆಜಿ ಟೊಮೆಟೊ ಬೆಲೆ 140 ರಿಂದ 160 ರೂಪಾಯಿ ವರೆಗೂ ತಲುಪಿದೆ. ಕಳೆದ ಒಂದು ವಾರದ ಹಿಂದೆ 100ರ ಗಡಿಯಲ್ಲಿದ್ದ ಟೊಮೆಟೊ ಈಗ ದಿಢೀರ್ ಏರಿಕೆಯಾಗಿದೆ. ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ಟೊಮೆಟೊ ದರ ಏರಿಕೆಯ ಬಿಸಿ ತಟ್ಟಿದೆ. ಏಕಾಏಕಿಯಾಗಿ ದರ ಏರಿಕೆಯಿಂದ ಕಂಗಲಾದ ಸಿಟಿ ಮಂದಿ ಟೊಮೆಟೊ ಖರೀದಿಗೆ ಹಿಂಜರಿಯುವಂತಾಗಿದೆ. ಈ ಹಿಂದೆ ಬಹುತೇಕ ಎಲ್ಲಾ ಅಂಗಡಿಗಳಲ್ಲೂ ಇರುತ್ತಿದ್ದ ಟೊಮೆಟೊ ಕೇವಲ ಎರಡ್ಮೂರು ಅಂಗಡಿಗಳಲ್ಲಿ ಮಾತ್ರ ‌ಮಾರಾಟ ಮಾಡಲಾಗುತ್ತಿದೆ. ಹಾಪ್ ಕಾಮ್ಸ್​ನಲ್ಲಿ ಟೊಮೆಟೊ ಕೆಜಿಗೆ 140 ರೂಪಾಯಿ ಇದ್ದು ಬೆಳ್ಳುಳ್ಳಿ ಕೆಜಿಗೆ 248 ರೂ ಇದೆ. ಹಾಗೂ ಶುಂಠಿ ಕೆಜಿಗೆ 360 ರೂ ಇದೆ.

ಇನ್ನೂ ಇಂದಿನಿಂದ ಗ್ರಾಹಕರ ಜೇಬು ಸುಡಲಿದೆ. ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಹೆಚ್ಚಿಸಲಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀ. ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಿದ್ದ ಸರ್ಕಾರ ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು., ಹೀಗಾಗಿ ಇಂದಿನಿಂದ ಅಧಿಕೃತವಾಗಿ ಪ್ರತಿ ಲೀ ಹಾಲಿನ ಮೇಲೆ 3 ರೂಪಾಯಿ ಹೆಚ್ಚಿಸಲಾಗಿದೆ.

ಆಗಿದ್ರೆ ಯಾವ ಯಾವ ಪ್ಯಾಕೇಜ್ ಹಾಲು ಎಷ್ಟಿದೆ ಈಗ ಎಷ್ಟಾಗಲಿದೆ?

  • ಟೋಲ್ಡ್ ಮಿಲ್ಕ್ – ಹಿಂದಿನ ದರ 39 ರೂ (ಲೀ) – ಪರಿಷ್ಕೃತ ದರ 42 ರೂ
  • ಹೋಮೋಜೆನೈಸ್ಡ್ 40 ಹಿಂದಿನ ದರ – ಪರಿಷ್ಕೃತ ದರ 43 ರೂ
  • ಹಸುವಿನ ಹಾಲು ( ಹಸಿರು ಪೊಟ್ಟಣ ) ಹಿಂದಿನ ದರ 43 ರೂ – ಪರಿಷ್ಕೃತ ದರ 46 ರೂ.
  • ಶುಭಂ ಹಾಲು – ಹಿಂದಿನ ದರ 45 ರೂ – ಇಂದಿನ ದರ 48 ರೂ
  • ಮೊಸರು ಪ್ರತಿ ಕೆಜಿ – 47 ರೂ. ಹಿಂದಿನ ದರ – ಈಗಿನ ದರ 50 ರೂ
  • ಮಜ್ಜಿಗೆ 200ml – ಹಿಂದಿನ ದರ 8 ರೂ – ಪರಿಷ್ಕೃತ 9 ರೂ

ಅತ್ತ ಹಾಲಿನ ದರ, ಇತ್ತ ಹೊಟೇಲ್ ತಿಂಡಿ ತಿನಿಸಿನ ಮೇಲೆ ಹತ್ತರಷ್ಟು ದರ ಏರಿಕೆಯಾಗಲಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಹೋಟೆಲ್ ತಿಂಡಿಗಳ ಬೆಲೆ ಶೇಕಡಾ 10ರಷ್ಟು ದರ ಏರಿಕೆ ಮಾಡಲಾಗಿದೆ. ಕಾಫಿ, ಟೀ, ತಿಂಡಿ ದರ ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದ್ದು ಆಗಸ್ಟ್ 1ರಿಂದಲೇ ದರ ಏರಿಕೆಯಾಗಲಿದೆ.

ಇದನ್ನೂ ಓದಿ: ಕೋಲಾರದ ಹೋಲ್ ಸೇಲ್ ಮಾರ್ಕೆಟ್ ನಲ್ಲೇ ಒಂದು ಕ್ರೇಟ್ ಟೊಮೆಟೊ ಬೆಲೆ ರೂ. 2,500; ಅಂದರೆ ಕೇಜಿಗೆ ರೂ.170!

ಈ ಬಗ್ಗೆ ಮಾತಾನಾಡಿದ ಹೋಟೆಲ್ ಮಾಲೀಕ ಮಂಜುನಾಥ್ ‌ಪೂಜಾರಿ ಎಂಬುವವರು, ನೂರಕ್ಕೆ ನೂರರಷ್ಟು ದರ ಹೆಚ್ಚಳ ಮಾಡ್ತಿವಿ. ಈಗಾಗಲೇ ಎಲ್ಲಾ ವಸ್ತುಗಳ ದರ ಹೆಚ್ವಳ ಆಗಿದೆ. ಇದರಿಂದ ದರ ಹೆಚ್ಚಳ‌ ಮಾಡಲೇಬೇಕು ಇಲ್ಲಾಂದ್ರೆ ಹೋಟೆಲ್ ನಡೆಸುವುದು ಕಷ್ಟ ಆಗುತ್ತದೆ. ಕಾಫಿ, ಟೀ ಊಟ ತಿಂಡಿ ಮೇಲೆ ಹತ್ತರಷ್ಟು ದರ ಏರಿಕೆ ‌ಮಾಡ್ತಿವಿ ಈಗಾಗಲೇ ಗ್ರಾಹಕರಿಗೆ ಹೇಳಿದ್ದೀವಿ ಎಂದರು.

ಗ್ರಾಹಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಫ್ರೀ ಫ್ರೀ ಅಂದ್ರು ಅದರ ಎಫೆಕ್ಟ್ ಇದು. ಪ್ರತಿ ದಿನ ನಾವು ಹೋಟೆಲ್ ನಂಬಿಕೊಂಡು ಜೀವನ ಮಾಡ್ತಿವಿ ಆದರೆ ಏಕಾಏಕಿ ದರ ಹೆಚ್ಚಳ ಮಾಡಿದ್ರೆ ನಮಗೆ ಕಷ್ಟ ಆಗುತ್ತದೆ. ನಾವು ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರದಿಂದ ಎಲ್ಲಾ ಅಗತ್ಯವಾದ ವಸ್ತುಗಳನ್ನು ಕಡಿಮೆ ಮಾಡಬೇಕು. ಆವಾಗ ಹೋಟೆಲ್ ಮಾಲೀಕರು ‌ದರ‌ ಕಡಿಮೆ ಮಾಡುತ್ತಾರೆ. ಪ್ರತಿದಿನ ಎರಡ್ಮೂರು ಕಾಫಿ ಕುಡಿತಿದ್ವಿ. ಈಗ ಒಂದು ಕುಡಿತಿವಿ ಅಷ್ಟೇ. ಈಗಾಗಲೇ ‌ಕಾಫಿ ಟೀ ದರ ತುಂಬಾ ಹೆಚ್ಚಳವಾಗಿದೆ. ಒಂದೊಂದು ‌ಕಡೆ 10, 20, 30 ರುಪಾಯಿ ದರ ಆಗಿದೆ. ಇದಕ್ಕೆ ಪರಿಹಾರ ಸರ್ಕಾರವೇ ಕೊಡಬೇಕು. ಸರ್ಕಾರವೇ ದರ ಹೆಚ್ವಳ ಮಾಡಿದ್ರೆ ನಾವು ಯಾರನ್ನು ಕೇಳುವುದು. ಊರು ಬಿಟ್ಟು ಇಲ್ಲಿಗೆ ಬಂದಿರುತ್ತೆವೆ. ಹೋಟೆಲ್ ಊಟ ತಿಂಡಿ ನಂಬಿರುತ್ತೇವೆ. ದರ ಹೆಚ್ಚಳದಿಂದ ಕೆಟ್ಟ ಅನುಭವ ಅನುಭವಿಸಬೇಕಾಗುತ್ತದೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:16 am, Tue, 1 August 23