
ಬೆಂಗಳೂರು, ಅಕ್ಟೋಬರ್ 09: ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಬಂಧನದಿಂದ ಮಧ್ಯಂತರ ರಕ್ಷಣೆ ಪಡೆದಿರುವ ಶಾಸಕ ಭೈರತಿ ಬಸವರಾಜ್ಗೆ (Byrathi Basavaraj) ಇದೀಗ ಸಂಕಷ್ಟ ಎದುರಾಗಿದೆ. ಬಂಧನದಿಂದ ರಕ್ಷಣೆ ಆದೇಶ ತೆರವಿಗೆ ಸರ್ಕಾರದಿಂದ ಅರ್ಜಿ ಸಲ್ಲಿಸಲಾಗಿದೆ. ಸದ್ಯ ವಾದ-ಪ್ರತಿವಾದ ಆಲಿಸಿರುವ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ, ಅ.23ಕ್ಕೆ ಅಂತಿಮ ವಿಚಾರಣೆಯನ್ನು ನಿಗದಿಪಡಿಸಿದೆ. ಅಲ್ಲಿಯವರೆಗೆ ಬಂಧನದಿಂದ ರಕ್ಷಣೆ ಮುಂದುವರಿಸಿದ್ದು, ತನಿಖಾ ಸಂಸ್ಥೆಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಭೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಈ ಪ್ರಕರಣದಲ್ಲಿ ಪೊಲೀಸರು ಕೋಕಾ ಕಾಯ್ದೆ ಹಾಕಿದ್ದಾರೆ. ಸಂಘಟಿತ ಅಪರಾಧಕ್ಕೆ ಮಾತ್ರ ಕೋಕಾ ಕಾಯ್ದೆ ಹಾಕಬಹುದು. ಮಧ್ಯಂತರ ರಕ್ಷಣೆ ತೆರವುಗೊಳಿಸಿದರೆ ಕೋಕಾ ಕಾಯ್ದೆಯಡಿ ನಿರೀಕ್ಷಣಾ ಜಾಮೀನಿಗೆ ಅವಕಾಶವಿಲ್ಲ. ರಾಜಕೀಯ ದ್ವೇಷದಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಕೋರಲು ಚಿಂತಿಸುತ್ತಿದ್ದೇವೆ. ಹೀಗಾಗಿ ಮಧ್ಯಂತರ ರಕ್ಷಣೆ ತೆರವುಗೊಳಿಸದಂತೆ ಮನವಿ ಮಾಡಿದರು.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಭೈರತಿ ಬಸವರಾಜ್ಗೆ ಮಧ್ಯಂತರ ರಿಲೀಫ್
ಇನ್ನು ಭೈರತಿ ಪರ ವಕೀಲರ ವಾದಕ್ಕೆ ಎಸ್‌ಪಿಪಿ ಬಿ.ಎನ್.ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಗೆ ಹಾಜರಾದ ವೇಳೆ ಭೈರತಿ ಬಸವರಾಜು ಸುಳ್ಳು ಮಾಹಿತಿ ನೀಡಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ. ಈ ಪ್ರಕರಣದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದರು.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು! ಮತ್ತಷ್ಟು ರೋಚಕ ಅಂಶ ಬಯಲು
ಸಾಕ್ಷ್ಯಾಧಾರ ಕೋರ್ಟ್‌ಗೆ ತೃಪ್ತಿ ತರದಿದ್ದರೆ ಕೇಸ್ ರದ್ದುಪಡಿಸಬಹುದು, ಆದರೆ ಭೈರತಿ ವಿರುದ್ಧ ಗಂಭೀರ ಸಾಕ್ಷ್ಯಗಳಿವೆ ಎಂದು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಬಿ.ಎನ್.ಜಗದೀಶ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಅಂತಿಮ ವಿಚಾರಣೆ ಅ.23ಕ್ಕೆ ನಿಗದಿಪಡಿಸಿದೆ.
ಜುಲೈ 15ರ ರಾತ್ರಿ ಬಿಕ್ಲು ಶಿವ ತನ್ನ ಮನೆಯಿಂದ ಆಚೆಬಂದು ಪುಟ್ ಪಾತ್ ಮೇಲೆ ನಿಂತುಕೊಂಡಿದ್ದ. ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7 ರಿಂದ 8 ಆರೋಪಿಗಳು ಬಿಕ್ಲು ಶಿವನ ಮೇಲೆ ದಾಳಿ ಮಾಡಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಬಿಕ್ಲು ಶಿವನನ್ನು ಕವರ್ ಮಾಡಿ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:28 pm, Thu, 9 October 25