ಮಡಿಕೇರಿ ವಸತಿ ಶಾಲೆಯಲ್ಲಿ ಅಗ್ನಿ ದುರಂತ: ಓರ್ವ ಸಾವು, 51 ಮಕ್ಕಳನ್ನ ರಕ್ಷಿಸಿದ್ದು ಇವರಿಬ್ಬರು
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಿಕೇರಿ ವಸತಿ ಶಾಲೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಓರ್ವ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಇಬ್ಬರು ಬಾಲಕರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿದೆ. ಶಾರ್ಟ್ ಸರ್ಕ್ಯೂಟ್ನಿಂದ ದುರಂತ ಸಂಭವಿಸಿರುವುದಾಗಿ ಶಂಕಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಡಗು, ಅಕ್ಟೋಬರ್ 09: ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ದುರಂತ ನಡೆದಿದೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಶಾಲಾ ಕಟ್ಟಡದಲ್ಲಿ ಕಂಡು ಬಂದ ಅಗ್ನಿ ಅನಾಹುತದಲ್ಲಿ (Fire disaster) ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು (death), ಇಬ್ಬರು ಬಾಲಕರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿರುವಂತಹ ಘಟನೆ ನಡೆದಿದೆ. ದುರಂತದಲ್ಲಿ ಭಾಗಮಂಡಲ ಸಮೀಪದ ಚೆಟ್ಟಿ ಮಾನಿ ಗ್ರಾಮದ ಪುಷ್ಪಕ್ ಸಾವನ್ನಪ್ಪಿದ ಬಾಲಕ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅನಾಹುತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
51 ಮಕ್ಕಳನ್ನ ರಕ್ಷಿಸಿದ ಇಬ್ಬರು ಬಾಲಕರು: ವ್ಯಾಪಕ ಪ್ರಶಂಸೆ
ಘಟನೆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಸಾಹಸ ಪ್ರದರ್ಶಿಸಿ ಉಳಿದ ಮಕ್ಕಳನ್ನ ರಕ್ಷಿಸಿದ್ದಾರೆ. ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರಿಬ್ಬರು ಹೊಗೆಯಿಂದ ಎಚ್ಚೆತ್ತಿದ್ದಾರೆ. ತಕ್ಷಣವೇ ಕಿರುಚಾಡಿ ಎಲ್ಲಾ ಮಕ್ಕಳನ್ನ ಎಬ್ಬಿಸಿ ಬಾಗಿಲಿನತ್ತ ಓಡಿಸಿದ್ದಾರೆ. ಆದರೆ ಬಾಗಿಲು ತೆರೆದುಕೊಂಡಿಲ್ಲ. ಕಿಟಕಿಯ ಗಾಜನ್ನ ಪ್ಲಾಸ್ಕ್ನಿಂದ ಒಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಾಗಾಗಿ ತಕ್ಷಣವೇ ಮತ್ತೊಂದು ಕೋಣೆಗೆ ಓಡಿ ಅಲ್ಲಿ ಕಿಟಗಿ ಬಾಗಿಲು ತೆರೆದು ಉಳಿದ ಮಕ್ಕಳನ್ನ ಹೊರಕ್ಕೆ ದಾಟಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬಾಲಕ ಪುಷ್ಪಕ್ ಮಾತ್ರ ಹೊರ ಬರಲಾರದೆ ಸಾವನ್ನಪ್ಪಿದ್ದಾನೆ. ಸದ್ಯ ಬಾಲಕರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಗನ ಆತ್ಮವನ್ನ ಕರೆದ ತಾಯಿ
ಮಗ ಪುಷ್ಪಕ್ ನನ್ನು ಕಳೆದುಕೊಂಡ ತಾಯಿ ತ್ರಿವೇಣಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವನ್ನಪ್ಪಿದ ಮಗನ ಆತ್ಮವನ್ನ ತ್ರಿವೇಣಿ ಅವರು ಮನೆಗೆ ಬಾ ಅಣ್ಣಾ ಅಂತ ಕರೆಯುವ ಸನ್ನಿವೇಶ ಎಂತಹವರ ಕರುಳನ್ನು ಹಿಂಡುವಂತಿತ್ತು.
ಇದನ್ನೂ ಓದಿ: ದಾವಣಗೆರೆ: ಬಾಯ್ಲರ್ ಸ್ಫೋಟ; 11 ವರ್ಷದ ಬಾಲಕಿ ಸಾವು, ಮೂವರಿಗೆ ಗಂಭೀರ ಗಾಯ
ಇನ್ನು ಇದು ದೆಹಲಿ ಮೂಲದ ಇಂಡಸ್ ಕ್ವಾಲಿಟಿ ಎಜಕೇಷನ್ ಸಂಸ್ಥೆ ನಡೆಸುತ್ತಿರುವ ಖಾಸಗಿ ವಸತಿ ಶಾಲೆ. ಹಳೆಯ ಮನೆಯೊಂದರಲ್ಲಿ ಈ ಶಾಲೆ ನಡೆಸಲಾಗುತ್ತಿದೆ. ಘಟನೆಯ ಕಾರಣವನ್ನ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Thu, 9 October 25



