ಬಿಜೆಪಿಯ ಗೌತಮ್ ಕುಮಾರ್ ಜೈನ್ ಬಿಬಿಎಂಪಿ 53ನೇ ಮೇಯರ್

ಬಿಜೆಪಿಯ ಗೌತಮ್ ಕುಮಾರ್ ಜೈನ್ ಬಿಬಿಎಂಪಿ 53ನೇ ಮೇಯರ್

ಬೆಂಗಳೂರು: ಬಿಬಿಎಂಪಿಯ 53ನೇ ಮೇಯರ್ ಆಗಿ ಜೋಗುಪಾಳ್ಯ ವಾರ್ಡ್​ನ ಬಿಜೆಪಿ ಕಾರ್ಪೊರೇಟರ್​ ಎಂ.ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಬಿಬಿಎಂಪಿ ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್​ನ ಕಾರ್ಪೊರೇಟರ್​ ಸಿ.ಆರ್.ರಾಮ್ ಮೋಹನ್ ರಾಜು ಆಯ್ಕೆಯಾಗಿದ್ದಾರೆ. ಕೈ ಎತ್ತುವ ಮೂಲಕ ಮೇಯರ್, ಉಪಮೇಯರ್ ಆಯ್ಕೆ ಮಾಡಲಾಗಿದೆ.

ಮೇಯರ್ ಚುನಾವಣೆಯಲ್ಲಿ ದತ್ತಾತ್ರೇಯ ವಾರ್ಡ್​ನ ಕಾಂಗ್ರೆಸ್​ ಕಾರ್ಪೊರೇಟರ್ ಸತ್ಯನಾರಾಯಣ ಪರ 112 ಮತಗಳು ಬಂದಿದ್ರೆ, ಸತ್ಯನಾರಾಯಣ ವಿರುದ್ಧ 129 ಮತಗಳು ಬಂದಿವೆ. ಬಿಜೆಪಿ ಅಭ್ಯರ್ಥಿ ಗೌತಮ್‌ ಕುಮಾರ್ ಪರ 129 ಮತಗಳು ಬಂದಿದ್ದು, ಗೌತಮ್‌ ಕುಮಾರ್ ವಿರುದ್ಧ 110 ಮತಗಳು ಬಂದಿವೆ. ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮ್‌ ಮೋಹನ್ ರಾಜು ಪರ 129 ಮತಗಳು ಬಂದಿದ್ರೆ, ಜೆಡಿಎಸ್ ಅಭ್ಯರ್ಥಿ ಗಂಗಮ್ಮ ಪರ 116 ಮತಗಳು ಬಂದಿವೆ. ಈ ಮೂಲಕ ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನ ಬಿಜೆಪಿ ಪಾಲಾಗಿವೆ.

ಬಿಬಿಎಂಪಿಯ ಒಟ್ಟು 257 ಮತದಾರರ ಪೈಕಿ 249 ಸದಸ್ಯರು ಮಾತ್ರ ಹಾಜರಾಗಿದ್ದರು. ಕಾಂಗ್ರೆಸ್‌ನಿಂದ ಸಂಸದ ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯರಾದ ಕೆ.ಪಿ.ರಾಮಮೂರ್ತಿ, ಜೈರಾಮ್ ರಮೇಶ್, ಎಂ.ಎಲ್.ಸಿ ರಘು ಆಚಾರ್ ಗೈರಾಗಿದ್ರೆ, ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೈರಾಗಿದ್ದರು. ಜೆಡಿಎಸ್​ ಪಕ್ಷದಿಂದ ದಾಸರಹಳ್ಳಿಯ ಶಾಸಕ ಮಂಜುನಾಥ್ ಸಹ ಗೈರು ಹಾಜರಾಗಿದ್ದರು.

ಚುನಾವಣೆ ಬಹಿಷ್ಕರಿಸಿ ಪ್ರಕ್ರಿಯೆಯಿಂದ ಜೆಡಿಎಸ್​ನ ಲಗ್ಗೆರೆ ಕಾರ್ಪೊರೇಟರ್​ ಮಂಜುಳಾ ನಾರಾಯಣ್ ಸ್ವಾಮಿ, ಬಿಟಿಎಂ ಲೇಔಟ್​ನ ದೇವದಾಸ್ ಹೊರ ನಡೆದರು. ಅನರ್ಹ ಶಾಸಕ ಗೋಪಾಲಯ್ಯ ಪತ್ನಿ ಹೇಮಲತಾ ಗೋಪಾಲಯ್ಯ ಕಾಂಗ್ರೆಸ್​ಜೆಡಿಎಸ್​ನ ಮೈತ್ರಿ ಅಭ್ಯರ್ಥಿಗೆ ಮತಹಾಕಿದ್ದಾರೆ. ಬಿಜೆಪಿಯ ಗೌತಮ್‌ ಕುಮಾರ್ ಜೈನ್ ಪರ ಪಕ್ಷೇತರ ಕಾರ್ಪೊರೇಟರ್​ಗಳಾದ ಚಂದ್ರಪ್ಪ ರೆಡ್ಡಿ, ಲಕ್ಷ್ಮೀನಾರಾಯಣ್, ಎನ್.ರಮೇಶ್, ಗಾಯಿತ್ರಿ, ಮಮತಾ ಸರವಣ ಮತ ಚಲಾವಣೆ ಮಾಡಿದ್ದಾರೆ.

ಇಂದು ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಬೇಕಿತ್ತು. ಆದ್ರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಿಕೆ ಮಾಡಿರುವುದಾಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಹೇಳಿದ್ದಾರೆ.

Click on your DTH Provider to Add TV9 Kannada