ಚಾಮರಾಜನಗರ: ಬಿಜೆಪಿ ಕರ್ನಾಟಕ ಘಟಕದ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಮಲ್ಲೇಶ್ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಾರ್ವತಿ ಬೆಟ್ಟದ ದೇಗುಲದಲ್ಲಿ ಮಗ ಮಲ್ಲೇಶ್ನ ಮದುವೆ ಮಾಡಿದ್ದಾರೆ. ಕೊವಿಡ್ ನಿಯಮ ಉಲ್ಲಂಘಿಸಿ ಮದುವೆ ನಡೆಸಲಾಗಿದೆ. ಮದುವೆಯಲ್ಲಿ 200ಕ್ಕೂ ಹೆಚ್ಚು ಜನರು ಸೇರಿದ್ದರು. ಈ ವೇಳೆ ಗುಂಡ್ಲುಪೇಟೆ ಪೊಲೀಸರು ಸಹ ಹಾಜರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದೇಗುಲದ ಬೀಗ ಹಾಕಿ ಮದುವೆ ನಡೆಸಲಾಗಿದೆ. ಮಲ್ಲೇಶ್ ಪ್ರಸ್ತುತ ಗುಂಡ್ಲುಪೇಟೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಗುರುವಾರ 348 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 331 ಮಂದಿ ಗುಣಮುಖರಾಗಿದ್ದಾರೆ. ಬುಧವಾರ ಸಂಜೆ 6ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ಎಂಟು ಮಂದಿ ಮೃತಪಟ್ಟಿದ್ದರು. ಈ ಪೈಕಿ ಐವರು ಕೋವಿಡ್‌ನಿಂದ ಹಾಗೂ ಮೂವರು ಕೋವಿಡ್ಗೆ ಹೊರತಾದ ಕಾರಣಗಳಿಂದ ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 27,412 ಪ್ರಕರಣಗಳು ವರದಿಯಾಗಿದ್ದು, 24 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,840 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ 56 ಮಂದಿ ಐಸಿಯುನಲ್ಲಿದ್ದಾರೆ. 299 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್ ಕೇರ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ 1,468 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿವೆ. 1,138 ವರದಿಗಳು ನೆಗೆಟಿವ್ ಬಂದಿದ್ದರೆ 330 ಮಂದಿಗೆ ಸೋಂಕು ದೃಢವಾಗಿತ್ತು.
ವರದಿಯಾದ ಪ್ರಕರಣಗಳಲ್ಲಿ ಅತಿ ಹೆಚ್ಚು ಅಂದರೆ 146 ಪ್ರಕರಣಗಳು ಚಾಮರಾಜನಗರ ತಾಲ್ಲೂಕಿಗೆ ಸೇರಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 65, ಕೊಳ್ಳೇಗಾಲದಲ್ಲಿ 49, ಹನೂರಿನಲ್ಲಿ 66, ಯಳಂದೂರು ತಾಲ್ಲೂಕಿನಲ್ಲಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಗುಣಮುಖರಾದ 331 ಜನರಲ್ಲಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು. ಕೊವಿಡ್ ಕೇರ್ ಸೆಂಟರ್‌ನಲ್ಲಿದ್ದ 80 ಹಾಗೂ ಮನೆಯಲ್ಲೇ ಆರೈಕೆಯಲ್ಲಿದ್ದ 248 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
(BJP Leader of Gundlupet Marries his son violating covid norms)
Published On - 4:48 pm, Fri, 4 June 21