Madal Virupakshappa: ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಮಾಡಾಳ್ ವಿರೂಪಾಕ್ಷಪ್ಪ

|

Updated on: Mar 27, 2023 | 8:19 PM

ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.

ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಏಕಸದಸ್ಯ ಪೀಠ ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ವೇಳೆ  ಚನ್ನಗಿರಿಯಲ್ಲಿ ಸರ್ಕಾರಿ ಕಾರ್ಯಕ್ರಮ‌ದಲ್ಲಿ ಭಾಗಿಯಾಗಿದ್ದ ಅವರು, ಕ್ಷಣಮಾತ್ರದಲ್ಲಿ ಅಲ್ಲಿಂದ ತೆರಳಿ ನಾಪತ್ತೆಯಾಗಿದ್ದರು. ಅವರನ್ನು ಬಂಧಿಸುಚವುದಕ್ಕಾಗಿ ಲೋಕಾಯುಕ್ತ ಪೊಲೀಸರ ತಂಡ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಅಷ್ಟರಲ್ಲೇ ಅವರು ಬೆಂಗಳೂರಿಗೆ ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗಿತ್ತು. ಇದೀಗ ಕೊನೆಗೂ ಅವರನ್ನು ಬಂಧಿಸುವಲ್ಲಿ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ. ಚನ್ನಗಿರಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.

ಕ್ಯಾತಸಂದ್ರ ಟೋಲ್ ಬಳಿ ಲೋಕಾಯುಕ್ತ ಬಲೆಗೆ

ಬೆಂಗಳೂರಿಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತ್ಸಂದ್ರ ಟೋಲ್ ಲೋಕಾಯುಕ್ತ ಪೊಲೀಸರು ಬಂಧಿಸಿದರು. ನಂತರ ಬೆಂಗಳೂರಿನತ್ತ ಕರೆದೊಯ್ದರು. ಚನ್ನಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಅಲ್ಲಿರುವಾಗಲೇ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸುವುದು ತಿಳಿದುಬಂದಿತ್ತು. ತಕ್ಷಣವೇ ಅವರು ಅಲ್ಲಿಂದ ತೆರಳಿದ್ದರು. ಶಾಸಕರು ನಾಪತ್ತೆಯಾಗಿದ್ದಾರೆ ಎಂದೇ ಮೊದಲಿಗೆ ಹೇಳಲಾಗಿತ್ತು. ನಂತರ ಅವರು ಬೆಂಗಳೂರಿನತ್ತ ತೆರಳಿರುವುದಾಗಿ ಮೂಲಗಳು ತಿಳಿಸಿದ್ದವು.

ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಹೇಗೆ?

ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ದಾವಣಗೆರೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ‌ರುವ ಮಾಡಾಳ್ ಅವರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಧಾವಿಸಿದ್ದರು. ಆರು ಜನ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಇನ್ಸ್​ಪೆಕ್ಟರ್ ಹುದ್ದೆಯ ಅಧಿಕಾರಿಗಳು ಮನೆಗೆ ತೆರಳಿದ್ದರು. ಅಷ್ಟರಲ್ಲಿ ಬಿಳಿ ಇನ್ನೋವಾ ಕಾರಿನಲ್ಲಿ ಮಾಡಾಳ್ ಬೆಂಗಳೂರು ಕಡೆ ತೆರಳಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಅದರಂತೆ ಕಾರ್ಯಾಚರಣೆ ನಡೆಸಲಾಗಿತ್ತು.

ಲೋಕಾಯುಕ್ತ ಕಚೇರಿ ಮುಂಭಾಗ ಬಿಗಿ ಭದ್ರತೆ

ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಲೋಕಾಯುಕ್ತ ಕಚೇರಿ ಎದುರು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಕಚೇರಿ ಮುಂಭಾಗ 20ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಜಾಮೀನಿನ ಮೇಲೆ ಹೊರಗಿದ್ದರೂ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿ

ಜಾಮೀನಿನ ಮೇಲೆ ಹೊರಗಿದ್ದರೂ ಮಾಡಾಳ್ ವಿರೂಪಾಕ್ಷಪ್ಪ ಅವರು ಸೋಮವಾರ ಸಂಜೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. 351 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಹಾಗೂ ಶಂಕುಸ್ಥಾಪನಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ವಿವಿಧ ಕಾಮಗಾರಿಗಳ ಉದ್ಘಾಟನೆ ‌ಮಾಡಿ, ವಿವಿಧ ಫಲಾನುಭವಿಗಳಿಗೆ ಪರಿಕರಗಳ ವಿತರಣೆ ಮಾಡಿದ್ದರು. ನಮ್ಮ ಅವಧಿಯಲ್ಲಿ ನಡೆದ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಇನ್ನೆರಡು ದಿನಗಳು ಕಳೆದರೆ ನೀತಿ ಸಂಹಿತೆ ಜಾರಿಯಾಗುತ್ತದೆ. ಅದ್ದರಿಂದ ಉದ್ಘಾಟನೆ, ಶಂಕುಸ್ಥಾಪನೆ ಈಗಲೇ ಮಾಡುತ್ತಿದ್ದೇವೆ. ತರಾತುರಿಯಲ್ಲಿ ಯಾವುದೇ ಕಾಮಗಾರಿ ಉದ್ಘಾಟನೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದರು. ಚುನಾವಣೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಕೈಮುಗಿದು ಹೊರಟು ಹೋಗಿದ್ದರು.

ಇದನ್ನೂ ಓದಿ: Madal Virupakshappa: ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನ ಭೀತಿ; ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮಾಡಾಳ್ ಪುತ್ರ ಪ್ರಶಾಂತ್ ಬೆಂಗಳೂರು ಜಲಪೂರೈಕೆ ಮತ್ತು ಒಳಚರಂಡಿ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎಂಬ ಆರೋಪ ಅವರ ಮೇಲಿದೆ. ಲೋಕಾಯುಕ್ತ ದಾಳಿ ವೇಳೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್​ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿದ್ದವು. ನಂತರ ಲೋಕಾಯುಕ್ತ ಪೊಲೀಸರು ಎಫ್​ಐಆರ್ ದಾಖಲಿಸಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಿದ್ದರು. ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀರ ಬಲೆಗೆ ಬಿದ್ದಿದ್ದರು. ನಂತರ ಮಾಡಾಳ್ ವಿರೂಪಾಕ್ಷಪ್ಪ ಅವರ ದಾವಣಗೆರೆ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿತ್ತು. ಅಲ್ಲಿಯೂ ಕೋಟ್ಯಂತರ ರೂ. ನಗದು ಪತ್ತೆಯಾಗಿತ್ತು. ಬಳಿಕ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ದೊರೆತ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರಿಗೆ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಜೆಐಗೂ ಪತ್ರ ಬರೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Mon, 27 March 23