ದಾವಣಗೆರೆ: ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದೆ. ಕೊರೊನಾ ಸೋಂಕಿತರನ್ನು ಸೂಕ್ತ ರೀತಿಯಿಂದ ನೋಡಿಕೊಳ್ಳಲು ಸರ್ಕಾರ ವಿವಿಧ ರೀತಿಯಲ್ಲಿ ಶ್ರಮಿಸುತ್ತಿದೆ. ಆದರೂ ಸಾಮಾಜಿಕವಾಗಿ ಕೊರೊನಾ ಸೋಂಕಿತರನ್ನು ಕಾಣುವ ವಿಧಾನ ಹಲವೆಡೆ ಅಷ್ಟೊಂದು ಉತ್ತಮವಾಗಿಲ್ಲ. ಈ ಮಧ್ಯೆ ಬಿಜೆಪಿ ಶಾಸಕ ರೇಣುಕಾಚಾರ್ಯ ಕೊರೊನಾ ಸೋಂಕಿತರಿಗೆ ವಿವಿಧ ರೀತಿಯ ಬೆಂಬಲ, ಧೈರ್ಯ ನೀಡುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಕೊರೊನಾದಿಂದ ಗುಣಮುಖರಾದವರಿಗೆ ಶಾಸಕರು ಪುಷ್ಪವೃಷ್ಟಿ ಸುರಿಸಿದ್ದಾರೆ.
ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಕೊರೊನಾದಿಂದ ಗುಣಮುಖರಾದವರಿಗೆ ಪುಷ್ಪವೃಷ್ಟಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಕೊವಿಡ್ ಕೇರ್ ಸೆಂಟರ್ನಲ್ಲಿ ಪುಷ್ಪವೃಷ್ಟಿ ಮಾಡಲಾಗಿದೆ. ಅಲ್ಲದೆ, ಕೊವಿಡ್ನಿಂದ ಗುಣಮುಖರಾದ 12 ಜನರಿಗೆ ರೇಣುಕಾಚಾರ್ಯ ಸಿಹಿ ಹಂಚಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ರೋಗಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಂದಾಗಿದ್ದರು. ಬೆಳ್ಳಂಬೆಳಿಗ್ಗೆಯೇ ತಮ್ಮ ಸ್ವಗೃಹದ ಮುಂದೆ ಸೋಂಕಿತರಿಗಾಗಿ ಇಡ್ಲಿ ತಯಾರಿಸಿ ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.
ರೇಣುಕಾಚಾರ್ಯ ದಂಪತಿ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ಸ್ವಗೃಹದ ಮುಂದೆ ಇಡ್ಲಿ ತಯಾರಿಸಿದ್ದರು. ಪ್ರತಿನಿತ್ಯವೂ ಕೂಡಾ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಗೆ ಮತ್ತು ಲಸಿಕೆ ಪಡೆಯುವವರಿಗೆ ಜೊತೆಗೆ ಸೋಂಕಿತರ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದರು. ಮೇ 16ರಂದು ಬೆಳಿಗ್ಗಿನ ಉಪಹಾರಕ್ಕೆ ಇಡ್ಲಿ ಜೊತೆಗೆ ಚಟ್ನಿ, ಸಂಬಾರ್ ತಯಾರಿಸಿದ್ದರು.
ಕೊರೊನಾ ಸೋಂಕಿತರಿಗೆ ಬಸವ ಜಯಂತಿಯಂದು ರೇಣುಕಾಚಾರ್ಯ ಹೋಳಿಗೆ ಊಟವನ್ನು ಕೂಡ ಹಾಕಿಸಿದ್ದರು. ಅಗತ್ಯ ಸಂದರ್ಭದಲ್ಲಿ ಆಕ್ಸಿಜನ್ ಒದಗಿಸುವ ಮೂಲಕವೂ ಶಾಸಕರು ಸೋಂಕಿತರ ರಕ್ಷಣೆಯ ಕೆಲಸ ಮಾಡಿದ್ದರು.
ಇದನ್ನೂ ಓದಿ: ಬಸವ ಜಯಂತಿ ಪ್ರಯುಕ್ತ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಹಾಕಿಸಿದ ಎಂ.ಪಿ.ರೇಣುಕಾಚಾರ್ಯ
Published On - 6:52 pm, Wed, 19 May 21