ಹಿಜಾಬ್ ತೀರ್ಪನ್ನು ಸಹಜವಾಗಿ ಸ್ವೀಕರಿಸಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ವಿನಂತಿ
ತೀರ್ಪಿನ ಬಳಿಕ ಯಾವುದೇ ಪ್ರಚೋನದನಾಕಾರಿ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು: ಹಿಜಾಬ್ ವಿವಾದ ಕುರಿತು ನ್ಯಾಯಾಲಯವು ನೀಡುವ ತೀರ್ಪನ್ನು ಸಹಜವಾಗಿ ಸ್ವೀಕರಿಸಬೇಕು. ತೀರ್ಪಿನ ಬಳಿಕ ಯಾವುದೇ ಪ್ರಚೋನದನಾಕಾರಿ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಮನವಿ ಮಾಡಿದ್ದಾರೆ. ಗೃಹ ಸಚಿವರ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಶಾಂತಿ ಕಾಪಾಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ್ಯಾಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಹಿಜಾಬ್ ವಿವಾದ ಆರಂಭವಾಗಿ ತಿಂಗಳೇ ಕಳೆದಿದೆ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ 6 ಮಂದಿ ಮುಸ್ಲಿಂ ವಿದ್ಯಾರ್ಥಿಗಳ ವಿಚಾರದಲ್ಲಿ ಶುರುವಾದ ಹಿಜಾಬ್ ಸಮಸ್ಯೆ ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿತ್ತು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ತಾವು ಕೇಸರಿ ಶಾಲು ಧರಿಸುವುದಾಗಿ ಇತ್ತ ಹಿಂದೂ ಸಮುದಾಯದ ಕೆಲ ಹುಡುಗರು ಪ್ರತಿಭಟನೆಗೆ ಇಳಿದರು. ಇದು ಶಾಲಾ- ಕಾಲೇಜು ವರ್ಗ ಹಾಗೂ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ರಾಜಕೀಯ ನಾಯಕರು, ಎರಡೂ ಸಮುದಾಯದ ಮುಖಂಡರ ಹೇಳಿಕೆ, ನಿಲುವುಗಳ ನಡುವೆ ವಿವಾದ ದೇಶಾದ್ಯಂತ ಸುದ್ದಿ ಮಾಡಿತು. ಅಷ್ಟೇ ಏಕೆ ವಿದೇಶಿ ಮಾಧ್ಯಮಗಳಲ್ಲಿ ಕೂಡ ಹಿಜಾಬ್- ಕೇಸರಿ ಶಾಲು ವಿವಾದ ಚರ್ಚೆಗೊಳಗಾಯಿತು.
ಹೀಗೆ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ವಿವಾದ, ಶಿವಮೊಗ್ಗ, ಮೈಸೂರು, ಬೀದರ್, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ತಾರಕಕ್ಕೇರಿತು. ಕೊನೆಗೆ ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತು. ಕೆಲವೆಡೆ ಶಾಲಾ ಕಾಲೇಜು ಆಡಳಿತ ಮಂಡಳಿ ಅನಿರ್ಧಿಷ್ಟಾವಧಿ ರಜೆಯನ್ನೂ ನೀಡಿತು. ಇಂತಹ ಪರಿಸ್ಥಿತಿಯಲ್ಲಿ ಜನವರಿ 31 ರಂದು ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಯಿತು. ಬಳಿಕ, ಫೆಬ್ರವರಿ 3 ರಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಫೆಬ್ರವರಿ 9 ರಂದು ಪ್ರಕರಣ ಪೂರ್ಣ ಪೀಠಕ್ಕೆ ವರ್ಗಾವಣೆ ಮಾಡಲಾಯಿತು.
Published On - 10:33 am, Tue, 15 March 22