ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು 22 ವರ್ಷದ ಹುಸೇನ್ ಸಾಬ್ ನಾಯಕವಾಲೆ ಎಂಬುವರ ಕೈ ಕಟ್ ಆಗಿರುವ ಘಟನೆ ನಡೆದಿದೆ.
ಬಿರಿಯಾನಿ ಮಾರುತ್ತಿದ್ದವನ ಕೈ ಕಟ್:
ವಿಜಯವಾಡ-ಹುಬ್ಬಳ್ಳಿ ಮಾರ್ಗದ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 10 ಬಾಕ್ಸ್ಗಳು ಪಾರ್ಸೆಲ್ ಬಂದಿದ್ದವು. ಹುಬ್ಬಳ್ಳಿ ಕೊನೆಯ ನಿಲ್ದಾಣವಾದ ಕಾರಣ ರೈಲು ಕ್ಲೀನಿಂಗ್ ಮಾಡುವ ವೇಳೆ ಹತ್ತು ಬಾಕ್ಸ್ಗಳು ಪತ್ತೆಯಾಗಿವೆ. ಅನುಮಾನ ಬಂದು ಆರ್ಪಿಎಫ್ ಸಿಬ್ಬಂದಿ ಬಾಕ್ಸ್ ಓಪನ್ ಮಾಡುವಂತೆ ರೈಲ್ವೆ ನಿಲ್ದಾಣದಲ್ಲಿ ಕ್ಯಾಂಟೀನ್ ಗುತ್ತಿಗೆ ಪಡೆದಿದ್ದ ಹುಸೇನ್ಗೆ ಸೂಚಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಬಿರಿಯಾನಿ ಮಾರುತ್ತಿದ್ದ ಹುಸೇನ್ ಸಾಬ್ ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಸ್ಫೋಟಗೊಂಡು, ಆತನ ಕೈ ಕಟ್ ಆಗಿದೆ. ತಕ್ಷಣ ಗಾಯಾಳುವಿಗೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ಗೆ ದಾಖಲಿಸಿದ್ದಾರೆ.
ಬಾಕ್ಸ್ ಮೇಲೆ ಬರಹ ಪತ್ತೆ:
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸ್ಫೋಟಗೊಂಡ ಬಾಕ್ಸ್ ಮೇಲೆ ಬರಹ ಪತ್ತೆಯಾಗಿದೆ. ನೋ ಬಿಜೆಪಿ ನೋ ಕಾಂಗ್ರೆಸ್ ಓನ್ಲಿ ಶಿವಸೇನೆ, ಕೊಲ್ಹಾಪುರ ಎಂಎಲ್ಎ ಗರಗಟ್ಟಿ ಎಂಬ ಬರಹ ಪತ್ತೆಯಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಖಾನಾಪುರ ಶಾಸಕರ ಹೆಸರಿಗೆ ಬಾಕ್ಸ್ಗಳು ಬಂದಿವೆ ಎಂದು ರೈಲ್ವೇ ನಿಲ್ದಾಣದ ಸಿಬ್ಬಿಂದ ಮಾಹಿತಿ ನೀಡಿದ್ದಾರೆ.
ಸ್ಫೋಟದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ನುಗ್ಗಿದ್ದಾರೆಂದು ಹೇಳಿದ್ದೇವೆ. ಆದ್ರೆ ಹಿಂದಿನ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಕೊಪ್ಪಳದಲ್ಲಿ ಸಚಿವ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಬಾಕ್ಸ್ ಸ್ಫೋಟಗೊಳ್ಳುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಹುಬ್ಬಳ್ಳಿ- ಧಾರವಾಡ ನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸರ ತನಿಖೆಗೆ ರೈಲ್ವೇ ಇಲಾಖೆ ಅಧಿಕಾರಿಗಳೂ ಸಾಥ್ ನೀಡಿದ್ದಾರೆ.
ಸ್ಫೋಟವಾಗಿರುವುದು ಐಇಡಿ ಅಲ್ಲ, ಫೀಲ್ಡ್ ಬಾಂಬ್!
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸ್ಫೋಟಗೊಂಡಿರುವುದು ಫೀಲ್ಡ್ ಬಾಂಬ್ ಅಥವಾ ಬೆಳ್ಳುಳ್ಳಿ ಪಟಾಕಿ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢವಾಗಿದೆ. ಸಾಮಾನ್ಯವಾಗಿ ಇವುಗಳನ್ನು ತೋಟಕ್ಕೆ ಬರುವ ಪ್ರಾಣಿಗಳನ್ನು ಓಡಿಸಲು ಬಳಸುವ ಸ್ಫೋಟಕವಾಗಿದೆ. ಇವುಗಳನ್ನು ಏಕಕಾಲಕ್ಕೆ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಆದ್ರೆ, ಸ್ಥಳದಲ್ಲಿ ಐಇಡಿಗೆ ಬಳಸುವ ಉಪಕರಣಗಳು ಲಭ್ಯವಾಗಿಲ್ಲ. ಐಇಡಿ ಆಗಿದ್ರೆ ಅದಕ್ಕೆ ಬಳಸುವ ಉಪಕರಣಗಳು ಸಿಗಬೇಕಿತ್ತು. ಹೀಗಾಗಿ ಇದು ಫೀಲ್ಡ್ ಬಾಂಬ್ ಎನ್ನುವುದು ದೃಢವಾಗಿದೆ ಎಂದು ಗುಪ್ತಚರ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Published On - 3:43 pm, Mon, 21 October 19