
ಬೆಂಗಳೂರು, ಅಕ್ಟೋಬರ್ 24: ಹಳದಿ ಮಾರ್ಗದ ಕಾರ್ಯಚರಣೆಯ ಆರಂಭದ ಬೆನ್ನಲ್ಲೇ ಪ್ರಯಾಣಿಕರಿಗೆ ನಮ್ಮ ಮೆಟ್ರೋ (Namma Metro) ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಬೆಂಗಳೂರಿಂದ 8 ಏರಿಯಾ, ಊರುಗಳಿಗೆ ಮೆಟ್ರೋ ವಿಸ್ತರಣೆಗೆ ನಿರ್ಧರಿಸಲಾಗಿದ್ದು, 3A, 4ನೇ ಹಂತದಲ್ಲಿ 236 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಗೆ BMRCL ಮುಂದಾಗಿದೆ. ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ ಗಳು ಸೇರಿ ಪಿಂಕ್, ಆರೆಂಜ್ ಬ್ಲ್ಯೂ ಲೈನ್ನಿಂದ 203.67 ಕಿಮೀ ಮೆಟ್ರೋ ಜಾಲವಿದೆ. ಇದನ್ನು ಮತ್ತೆ 236 ಕಿಲೋ ಮೀಟರ್ ವಿಸ್ತರಣೆ ಮಾಡುವ ಮೂಲಕ ಒಟ್ಟು 450 ಕಿ.ಮೀ.ಗೆ ಹೆಚ್ಚಿಸಲು ವರದಿ ರೆಡಿಯಾಗಿದೆ. ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಎಂಆರ್ಸಿಎಲ್ ವರದಿ ಸಲ್ಲಿಸಲಿದೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡ್ತಿದ್ದಂತೆ DPR ಸಿದ್ಧವಾಗಲಿದ್ದು, ಅದನ್ನುರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಲಿದೆ.
ಇದನ್ನೂ ಓದಿ: ಪೆಟ್ರೋಲ್ ಕದಿಯುವಾಗ ಸಿಕ್ಕಿಬಿದ್ದ ವ್ಯಕ್ತಿ, ಮೆಟ್ರೋ ಸಿಬ್ಬಂದಿಗಳ ಮೇಲೆ ಚಾಕುವಿನಿಂದ ಹಲ್ಲೆ
ಮತ್ತೊಂದೆಡೆ ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರು ನಡುವೆ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಈಗಾಗಲೇ BMRCL ಸ್ಪಷ್ಟನೆ ನೀಡಿದ್ದು, ತಾಂತ್ರಿಕವಾಗಿ ಇದು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ನಡೆಸಿದ ಅಧ್ಯಯನದ ಪ್ರಕಾರ, 23 ಕಿ.ಮೀ. ಉದ್ದದ ಹೊಸೂರು-ಬೊಮ್ಮಸಂದ್ರ ಕಾರಿಡಾರ್‌ಗೆ 25 ಕೆವಿ ಎಸಿ ಓವರ್‌ಹೆಡ್ ವಿದ್ಯುತ್ ಶಕ್ತಿ ಬಳಕೆಗೆ ಪ್ರಸ್ತಾಪವಿತ್ತು. ಆದರೆ, ನಮ್ಮ ಮೆಟ್ರೋ ಜಾಲ ಬಳಸುತ್ತಿರುವುದು 750 ಕೆವಿ ಡಿಸಿ ವಿದ್ಯುತ್ ಶಕ್ತಿಯಾದ್ದರಿಂದ ಇವುಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಈ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆ ಸಂಯೋಜನೆ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೆ BMRCL ಈಗಾಲೇ ಸ್ಪಷ್ಟಪಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Fri, 24 October 25