ಕೊಡಗು: ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹಂತಕ ಹುಲಿಯ ಹಾವಳಿ ಮಿತಿ ಮೀರಿದ್ದು, ಬೆಳಂಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ತಾತನ ಜೊತೆ ಹೊಗಿದ್ದ ಮಗು ಚಿರತೆ ಪಾಲಾದ ಘಟನೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಸದ್ಯ ಈ ವ್ಯಾಘ್ರನ ಉಪಟಳವನ್ನ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
ಗ್ರಾಮದ ಚಕ್ಕೇರ ಸನ್ನಿ ಸುಬ್ಬಯ್ಯ ಎಂಬುವವರ ತೋಟದಲ್ಲಿ ಕೆಲಸಕ್ಕಿದ್ದ ಕಾರ್ಮಿಕರ ಕುಟುಂಬ ಹುಲಿ ಭಯದಿಂದ ಕಳೆದೊಂದು ವಾರದಿಂದ ತೋಟದತ್ತ ಮುಖ ಮಾಡಿರಲಿಲ್ಲ. ಆದರೆ ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಮೋಟಾರ್ ಆನ್ ಮಾಡುವಂತೆ 8 ವರ್ಷದ ಬಾಲಕ ರಂಗ ಸ್ವಾಮಿಯನ್ನ ಕಳುಹಿಸಿದ್ದಾರೆ. ಆತ ತೆರಳಿ ಎಷ್ಟು ಹೊತ್ತಾದರೂ ಮರಳಿಲ್ಲ. ಹಾಗಾಗಿ ಆತನನ್ನ ಹುಡುಕುತ್ತಾ ತಾತ ಕೆಂಚ ಅಲ್ಲಿಗೆ ತೆರಳಿದ್ದಾರೆ. ಆದರೆ, ತಾತ ಕೂಡ ಮರಳುವುದಿಲ್ಲ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ತಾತ ಮತ್ತು ಮಗುವನ್ನು ಹುಡುಕುತ್ತಾ ತೋಟಕ್ಕೆ ತೆರಳಿದ್ದಾರೆ. ಆದರೆ ಅವರಿಗೆ ತೋಟದಲ್ಲಿ ಕಂಡಿದ್ದು, ಮಗು ರಂಗಸ್ವಾಮಿ ಮೆದುಳು ಹೊರಬಂದು ಅಪ್ಪಚ್ಚಿಯಾಗಿ ಹೆಣವಾಗಿ ಹೋಗಿರುವುದು ಮತ್ತು ತಾತ ಕೆಂಚ ತೀವ್ರವಾಗಿ ಗಾಯಗೊಂಡು ನರಳುತ್ತಾ ಬಿದ್ದಿದ್ದ ದೃಶ್ಯ. ಕಳೆದ ರಾತ್ರಿಯಷ್ಟೇ ಇದೆ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಈಗ ಈ ವ್ಯಾಘ್ರಕ್ಕೆ ಸುಲಭವಾಗಿ ಸಿಕ್ಕಿದ್ದು ಇದೇ ಬಾಲಕ ರಂಗಸ್ವಾಮಿ ಮತ್ತು ತಾತ ಕೆಂಚ.
ಯಾವಾಗ ಈ ಘಟನೆ ನಡೆಯಿತೋ ಇಡೀ ಬೆಳ್ಳೂರು ಗ್ರಾಮ ರೊಚ್ಚಿಗೆದ್ದಿತ್ತು. 15 ದಿನಗಳ ಹಿಂದಷ್ಟೇ ಓರ್ವ ಬಾಲಕ ಹಾಗೂ ಮತ್ತೋರ್ವ ಮಹಿಳೆಯನ್ನ ಇದೇ ಹುಲಿ ಕೊಂದು ಹೋಗಿತ್ತು. ಜೊತೆಗೆ 13 ಹಸುಗಳನ್ನೂ ಬಲಿ ಪಡೆದಿತ್ತು. ಈ ಅರಣ್ಯ ಇಲಾಖೆ ಮಾತ್ರ ಹುಲಿ ಸೆರೆ ಹಿಡಿಯದೆ ಕಾಲ ಹರಣ ಮಾಡ್ತಾ ಇದೆ ಎಂದು ಆರೋಪಿಸಿದ ಗ್ರಾಮಸ್ಥರು ಗೋಣಿಕೊಪ್ಪ-ಕೇರಳ ಮುಖ್ಯ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಹುಲಿಗೆ ನೀವೇ ಗುಂಡಿಕ್ಕಿ ಇಲ್ಲಾ, ನಾವು ಗ್ರಾಮಸ್ಥರೇ ಗುಂಡಿಕ್ಕುತ್ತೇವೆ ಎಂದು ಆಗ್ರಹಿಸಿದ್ದು, ಗ್ರಾಮಸ್ಥರ ಆಗ್ರಹಕ್ಕೆ ಮಣಿದಿರುವ ಅರಣ್ಯ ಇಲಾಖೆ ಕೊನೆಗೂ ಹುಲಿಯನ್ನು ಕೊಲ್ಲುತ್ತೇವೆ ಎಂದು ಕಾರ್ಯಾಚರಣೆಗೆ ಇಳಿದಿದೆ.
ಇದನ್ನೂ ಓದಿ: ಮಡಿಕೇರಿ ಹುಲಿ ಉಪಟಳ: 15ಕ್ಕೇರಿದ ಸಾವಿನ ಸಂಖ್ಯೆ.. ಇಂದು ಸಹ ಬಾಲಕ ಹುಲಿ ಬಾಯಿಗೆ ತುತ್ತು
Published On - 7:33 pm, Tue, 9 March 21