ಶಿವಮೊಗ್ಗ: ಮಾರ್ಚ್ 8ಕ್ಕೆ ಕರ್ನಾಟಕ ರಾಜ್ಯ ಬಜೆಟ್ ಮಂಡಿಸಲಾಗುತ್ತದೆ ಎಂದು ತಿಳಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಬಜೆಟ್ಗೆ ಸಂಬಂಧಿಸಿದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಲವು ಮೂಲಗಳಿಂದ ಹಣಕಾಸಿನ ಸಂಗ್ರಹ ಮಾಡಿರುವೆ. ಬಜೆಟ್ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುತ್ತೇವೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಮೂಗೂರು ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಲೋಕಾರ್ಪಣೆ ಮಾಡಲು ಸೊರಬ ತಾಲೂಕಿನ ಆನವಟ್ಟಿಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಯೋಜನೆಗೆ ಹಣಕಾಸು ಒದಗಿಸುವ ಜವಾಬ್ದಾರಿ ನನ್ನದು. ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗುವುದು. ಸೊರಬ ತಾಲೂಕಿಗೆ ಇನ್ನೂ ಹೆಚ್ಚು ಆದ್ಯತೆ ನೀಡುತ್ತೇವೆ. ಹಣಕಾಸಿನ ಇತಿಮಿತಿಯಲ್ಲಿ ಅನುದಾನ ನೀಡಲಾಗುತ್ತದೆ. ಅಲ್ಲದೇ ಬಜೆಟ್ಗೆ ಸಂಬಂಧಿಸಿದಂತೆ ಎಲ್ಲ ಚರ್ಚೆಗಳು ಮುಗಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ₹ 234 ಕೋಟಿ ಮೊತ್ತದ ಕಾಮಗಾರಿಗಳಿಗೆ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿ, ಚಾಲನೆ ನೀಡಿದರು.
ರಾಜ್ಯದ ಆದಾಯ ಖೋತಾ
ಇತ್ತೀಚಗೆ ಕೊಪ್ಪಳದಲ್ಲಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ರಾಜ್ಯದ ಆರ್ಥಿಕ ಸ್ಥಿತಿಯ ಚಿತ್ರಣವನ್ನು ಬಿಚ್ಚಿಟ್ಟಿದ್ದರು. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೊರೊನಾ, ಅತಿವೃಷ್ಟಿ, ಬರಗಾಲದಿಂದ ಆರ್ಥಿಕತೆ ನಲುಗಿ ಹೋಗಿದೆ. ಇದರಿಂದ ನಿರೀಕ್ಷೆಯಂತೆ ನಾನು ಯಾವ ಕೆಲಸವನ್ನು ಮಾಡಿಲ್ಲ. ಬಜೆಟ್ನಲ್ಲಿಯೂ ಸುಮಾರು 40 ರಿಂದ 50 ಸಾವಿರ ಕೋಟಿ ರೂಪಾಯಿ ಖೋತಾ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಸದನದಲ್ಲೂ ಆರ್ಥಿಕ ಪರಿಸ್ಥಿತಿಯ ಬಿಸಿಬಿಸಿ ಚರ್ಚೆ
ನಾನು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿಲ್ಲಿಸುತ್ತಿದ್ದಾರೆ. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿಯೇ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಮಹಿಳೆಯರಿಗೆ ಶೇ 1ರ ಬಡ್ಡಿದರಲ್ಲಿ 2 ಲಕ್ಷ ರೂ.ವರೆಗೆ ಸಾಲ, ವಿವಾಹವಾಗುವ ಹೆಣ್ಣುಮಕ್ಕಳಿಗೆ 3 ಗ್ರಾಂ ಚಿನ್ನದ ತಾಳಿ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಕೊಡುವ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಯಡಿಯೂರಪ್ಪ ನಿಲ್ಲಿಸಿದ್ದಾರೆಂದು ಸಿದ್ದರಾಮಯ್ಯ ಹರಿಹಾಯ್ದಿದ್ದರು.
ಸಿದ್ದರಾಮಯ್ಯ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ ಎನ್ನುವುದು ನಿಜ. ಆದರೆ ಯೋಜನಾ ವೆಚ್ಚಕ್ಕೆ ಮತ್ತು ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ಕೊರತೆ ಮಾಡುವುದಿಲ್ಲ ಎಂದಿದ್ದರು.
ಕಾರು ಖರೀದಿಯ ಮೊತ್ತವನ್ನು ಹೆಚ್ಚಿಸಿ ವಿವಾದಕ್ಕೆ ಸಿಲುಕಿದ್ದ ಯಡಿಯೂರಪ್ಪ
ರಾಜ್ಯದ ಸಂಸದರು ಮತ್ತು ಶಾಸಕರ ಕಾರು ಖರೀದಿಯ ಮೊತ್ತವನ್ನು ಹೆಚ್ಚಿಸುವ ಮೂಲಕ ಬಿ.ಎಸ್.ಯಡಿಯೂರಪ್ಪ ಈಚೆಗೆ ಚರ್ಚೆಗೆ ಆಹಾರವಾಗಿದ್ದರು. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಪ್ರಸಕ್ತ ಪರಿಸ್ಥಿತಿಯಲ್ಲಿ ಇಂಥ ಕ್ರಮ ಅಗತ್ಯವಿತ್ತೇ ಎಂದು ಹಲವರು ಪ್ರಶ್ನಿಸಿದ್ದರು.
ಕಾರು ಖರೀದಿಗೆ ಈ ಮೊದಲು ರಾಜ್ಯ ಸರ್ಕಾರ 22 ಲಕ್ಷ ರೂಪಾಯಿಯನ್ನು ನೀಡುತ್ತಿತ್ತು. ಇನ್ನು ಮುಂದೆ 23 ಲಕ್ಷ ರೂಪಾಯಿ ನೀಡಲು ತೀರ್ಮಾನಿಸಿದೆ. ಕಾರನ್ನು ಖರೀದಿಸಲು ನೀಡುತ್ತಿದ್ದ ಹಣವನ್ನು ಹೆಚ್ಚಿಸಬೇಕೆಂದು ಸಂಸದರು ಹಾಗೂ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದ್ದ ಹಿನ್ನೆಲೆ ಕಾರು ಖರೀದಿಯ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
Karnataka Budget 2021: ಕರ್ನಾಟಕ ಬಜೆಟ್ ಇತಿಹಾಸ, 10 ಆಸಕ್ತಿಕರ ಸಂಗತಿ
Karnataka Budget 2021 ಮಾರ್ಚ್ 4ರಿಂದ ಬಜೆಟ್ ಅಧಿವೇಶನ ಆರಂಭ; ಮಾರ್ಚ್ 8ರಂದು ಕರ್ನಾಟಕ ಬಜೆಟ್ ಮಂಡನೆ