ಬರಲಿದೆ ಬುಲೆಟ್ ಟ್ರೈನ್: ಚೆನ್ನೈ ಮೈಸೂರು ಮಧ್ಯೆ ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣ

|

Updated on: Jul 26, 2024 | 11:41 AM

Chennai To Mysuru Bullet Train: ಮೈಸೂರು ಚೆನ್ನೈ ಮಧ್ಯೆ ವಂದೇ ಭಾರತ್ ರೈಲು ಪ್ರಯಾಣದಿಂದ ಖುಷಿಯಾಗಿರುವ ಪ್ರಯಾಣಿಕರಿಗೆ ಇದೀಗ ಭಾರತೀಯ ರೈಲ್ವೆ ಮತ್ತೊಂದು ಶುಭ ಸುದ್ದಿ ನೀಡಿದೆ. ಉಭಯ ನಗರಗಳ ಮಧ್ಯೆ ಕೇವಲ 90 ನಿಮಿಷಗಳಲ್ಲಿ ಸಂಚರಿಸಬಲ್ಲ ಬುಲೆಟ್ ಟ್ರೈನ್ ಯೋಜನೆಯ ಪ್ರಸ್ತಾವ ಇದೀಗ ಇಲಾಖೆಯ ಮುಂದಿದೆ. ಈ ಯೋಜನೆಯ ವಿವರ, ವಿಶೇಷಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬರಲಿದೆ ಬುಲೆಟ್ ಟ್ರೈನ್: ಚೆನ್ನೈ ಮೈಸೂರು ಮಧ್ಯೆ ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣ
ಚೆನ್ನೈ ಬೆಂಗಳೂರು ಮೈಸೂರು ಮಧ್ಯೆ ಬುಲೆಟ್ ರೈಲು (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೆಂಗಳೂರು, ಜುಲೈ 26: ಮುಂಬೈ – ಅಹಮದಾಬಾದ್ ಹೈಸ್ಪೀಡ್ ಬುಲೆಟ್ ಟ್ರೈನ್ ಆರಂಭಗೊಂಡ ಬೆನ್ನಲ್ಲೇ ಮೈಸೂರು ಹಾಗೂ ಚೆನ್ನೈ ಮಧ್ಯೆ ಬುಲೆಟ್ ರೈಲು ಸಂಚಾರ ಆರಂಭಿಸುವ ಪ್ರಸ್ತಾವವನ್ನು ರೈಲ್ವೆ ಇಲಾಖೆ ಹೊಂದಿದ್ದು, ಇದು ಸಾಕಾರಗೊಂಡರೆ ಉಭಯ ನಗರಗಳ ಮಧ್ಯೆ ಪ್ರಯಾಣದ ಅವಧಿ ಕೇವಲ ಒಂದೂವರೆ ಗಂಟೆಗೆ ಇಳಿಕೆಯಾಗಲಿದೆ. ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಪರ್ಕ ಬೆಸೆಯಲಿರುವ ಈ ರೈಲು ಒಟ್ಟು ಮೂರು ರಾಜ್ಯಗಳಲ್ಲಿ ಸಂಚರಿಸಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯು ಮೂರು ರಾಜ್ಯಗಳಾದ್ಯಂತ 463 ಕಿಲೋಮೀಟರ್‌ಗಳನ್ನು ವ್ಯಾಪಿಸುತ್ತದೆ. ಅವುಗಳೆಂದರೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ. ಈ ಬುಲೆಟ್ ರೈಲು ಬೆಂಗಳೂರಿನಲ್ಲಿ ಮೂರು ಸೇರಿದಂತೆ ಒಟ್ಟು 11 ನಿಲ್ದಾಣಗಳನ್ನು ಹೊಂದಿರುತ್ತದೆ.

ಗಂಟೆಗೆ 350 ಕಿಮೀ ಗರಿಷ್ಠ ವೇಗ

ಗಂಟೆಗೆ 350 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವಿರುವ ಬುಲೆಟ್ ರೈಲು ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸಲಿದೆ. ಉಭಯ ನಗರಗಳ ನಡುವಣ ಪ್ರಯಾಣದದಲ್ಲಿ ಗಂಟೆಗೆ ಸರಾಸರಿ 250 ಕಿಮೀ ವೇಗದಲ್ಲಿ ಸಂಚರಿಸಲಿದೆ. ಹೈಸ್ಪೀಡ್ ರೈಲು ಎರಡೂ ನಗರಗಳ ನಡುವಣ ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಉಲ್ಲೇಖಿಸಿದೆ. ಈ ಮಾರ್ಗವು ಚೆನ್ನೈ, ಪೂನಮಲ್ಲಿ, ಚಿತ್ತೂರು, ಕೋಲಾರ, ಕೋಡಹಳ್ಳಿ, ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೆಂಗೇರಿ, ಮಂಡ್ಯ ಮತ್ತು ಮೈಸೂರುಗಳಲ್ಲಿ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.

ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ ಪೂರ್ಣಗೊಂಡ ನಂತರ ಮೈಸೂರು ಚೆನ್ನೈ ಬುಲೆಟ್ ರೈಲು ಯೋಜನೆ ಪ್ರಾರಂಭವಾಗಲಿದೆ. ಈ ರೈಲಿನಿಂದ ಮೈಸೂರು, ಬೆಂಗಳೂರು, ಚೆನ್ನೈ ಕಾರಿಡಾರ್ ಪ್ರಾದೇಶಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಗಮನಾರ್ಹ ಪ್ರಯೋಜನಗಳು ದೊರೆಯಲಿದೆ.

ಎಲ್ಲೆಲ್ಲಿ ಸುರಂಗ ಮಾರ್ಗ?

ಈ ಬುಲೆಟ್ ರೈಲು ಯೋಜನೆಯು 30 ಕಿಲೋಮೀಟರ್ ಸುರಂಗ ಮಾರ್ಗವನ್ನೂ ಒಳಗೊಂಡಿದೆ. ಈ ಪೈಕಿ ಚೆನ್ನೈನಲ್ಲಿ 2.5 ಕಿಲೋಮೀಟರ್, ಚಿತ್ತೂರಿನಲ್ಲಿ 11.8 ಕಿಲೋಮೀಟರ್, ಬೆಂಗಳೂರು ಗ್ರಾಮಾಂತರದಲ್ಲಿ 2 ಕಿಲೋಮೀಟರ್ ಮತ್ತು ಬೆಂಗಳೂರು ನಗರದಲ್ಲಿ 14 ಕಿಲೋಮೀಟರ್ ಸುರಂಗ ಮಾರ್ಗಗಳು ಇರಲಿವೆ.

ಇದನ್ನೂ ಓದಿ: ಬೆಂಗಳೂರು-ಕಲಬುರಗಿ ವಂದೇ ಭಾರತ್​ ಟ್ರೈನ್​ ಯಾದಗಿರಿಯಲ್ಲೂ ನಿಲ್ಲುತ್ತೆ, ಇಲ್ಲಿದೆ ರೈಲಿನ ಹೊಸ ವೇಳಾಪಟ್ಟಿ

ಯೋಜನೆಯ ಮೊದಲ ಹಂತವು ಚೆನ್ನೈನಿಂದ ಬೆಂಗಳೂರಿಗೆ 306 ಕಿಲೋಮೀಟರ್‌ಗಳನ್ನು ಒಳಗೊಂಡಿರುತ್ತದೆ. ಎರಡನೇ ಹಂತ ಬೆಂಗಳೂರಿನಿಂದ ಮೈಸೂರಿನವರೆಗೆ 157 ಕಿಲೋಮೀಟರ್‌ಗಳನ್ನು ವ್ಯಾಪಿಸಿರಲಿದೆ.

ಒಟ್ಟು ಮಾರ್ಗದ ಪೈಕಿ ಕರ್ನಾಟಕದಲ್ಲಿ 258 ಕಿಲೋಮೀಟರ್, ತಮಿಳುನಾಡಿನಲ್ಲಿ 132 ಕಿಲೋಮೀಟರ್ ಮತ್ತು ಉಳಿದವು ಆಂಧ್ರಪ್ರದೇಶದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Fri, 26 July 24