ಯತ್ನಾಳ್ ಭೇಟಿ ಬಗ್ಗೆ ಬಿವೈ ವಿಜಯೇಂದ್ರ ಮೊದಲ ಪ್ರತಿಕ್ರಿಯೆ! ಹೇಳಿದ್ದೇನು ಗೊತ್ತೇ? ಇಲ್ಲಿದೆ ಮಾಹಿತಿ
ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿಯಾಗಿರುವುದು ಭಾರಿ ಚರ್ಚೆಗೆ ಗ್ರಸಾವಾಗಿದೆ. ಆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸ್ನೇಹಿತರೊಬ್ಬರ ಮನೆಯಲ್ಲಿ ಭೇಟಿಯಾಗಿದ್ದು ನಿಜ. ಮುಂದೇನು ಆಗುತ್ತದೆ ಎಂಬುದನ್ನು ಕಾದುನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ಬೆಂಗಳೂರು, ಅಕ್ಟೋಬರ್ 20: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿಯಾದ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರಮದ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದ ವೇಳೆ ಜೈನ ಮುನಿಗಳ ಧಾರ್ಮಿಕ ಸಭೆಯಲ್ಲಿ ಇಬ್ಬರೂ ಭಾಗಿಯಾಗಿದ್ದೆವು. ಬಳಿಕ ಅನಿರೀಕ್ಷಿತವಾಗಿ ಸ್ನೇಹಿತರೊಬ್ಬರ ಮನೆಯಲ್ಲಿ ಭೇಟಿಯಾದೆವು. ಮುಂದೇನು ಆಗುತ್ತದೆ ಎಂಬುದನ್ನು ನೋಡೋಣ ಎಂದು ವಿಜಯೇಂದ್ರ ಹೇಳಿದ್ದಾರೆ.
ಯತ್ನಾಳ್ ಭೇಟಿ ವಿಚಾರ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಬಿಜೆಪಿ ಆಂತರಿಕ ವಲಯದಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ಯತ್ನಾಳ್ ಹಲವು ಬಾರಿ ಬಹಿರಂಗವಾಗಿ ತೀವ್ರ ಟೀಕೆಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಯತ್ನಾಳ್ ಭೇಟಿಯ ಮುಂದಿನ ಬೆಳವಣಿಗೆಗಳ ಬಗ್ಗೆ ಈಗಲೇ ಯಾವುದೇ ನಿರ್ಧಾರಕ್ಕೆ ಬರುವ ಬದಲು, ಮುಂದೇನು ಆಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರದಿಂದ ಸಮಿತಿ ರಚನೆ: ವಿಜಯೇಂದ್ರ
ರಾಜ್ಯದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ವಿಜಯೇಂದ್ರ, ರೈತರಿಗೆ ನ್ಯಾಯ ಒದಗಿಸುತ್ತಿರುವುದು ಎನ್‌ಡಿಎ ಸರ್ಕಾರ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ (MSP) ಜಾರಿಗೆ ತಂದಿದ್ದು, ಎಥೆನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಆರ್ಥಿಕ ನೆರವನ್ನೂ ನೀಡಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳಿಂದ ರೈತರಿಗೆ ಅನ್ಯಾಯ: ವಿಜಯೇಂದ್ರ ಆರೋಪ
ಕಬ್ಬಿನ ಬೆಲೆ ವಸೂಲಿ ಅಥವಾ ರಿಕವರಿ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ. ಈಗಾಗಲೇ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬದ್ಧ ವೈರಿಗಳ ಸಮಾಗಮ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ, ವಿಡಿಯೋ ನೋಡಿ
ಕಬ್ಬು ಬೆಳೆಗಾರರ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರ ಸಮಸ್ಯೆಗೆ ಯಾವ ರೀತಿಯ ಪರಿಹಾರ ನೀಡಬಹುದು ಎಂಬುದನ್ನು ಸಮಿತಿ ಚರ್ಚಿಸಲಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




