ಬೆಂಗಳೂರು, (ಸೆಪ್ಟೆಂಬರ್ 19): ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ. ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ವಿಧಾನ ಷರಿಷತ್ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯಿಂದಾಗಿ ಇದೀಗ ಉಪ ಚುನಾವಣೆ ಎದುರಾಗಿದೆ.
ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ಗೆ ಆಯ್ಕೆಯಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಆಯೋಗ ಇಂದು (ಸೆ.19) ಉಪ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು, ಸೆಪ್ಟೆಂಬರ್ 26ರಂದು ಅಧಿಸೂಚನೆ ಪ್ರಕಟವಾಗಲಿದೆ. ಇನ್ನು ಅಕ್ಟೋಬರ್ 28ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು 3 ಅಕ್ಟೋಬರ್ ಕೊನೆಯ ದಿನ. ಅಕ್ಟೋಬರ್ 4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 7 ಕೊನೆಯ ದಿನ. ಅಕ್ಟೋಬರ್ 21ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವಧಿ 5/1/2028ರ ತನಕ ಇತ್ತು. ಜೂನ್ 24ರಂದು ಅವರು ರಾಜೀನಾಮೆ ನೀಡಿದ್ದರು. ಅವರ ಸದಸ್ಯತ್ವದ ಅವಧಿ ಪೂರ್ಣಗೊಳ್ಳದ ಕಾರಣ ಈಗ ಉಪ ಚುನಾವಣೆ ಎದುರಾಗಿದೆ. ಇದೀಗ ಈ ಉಪಚುನಾವಣೆಯಲ್ಲಿ ಗೆದ್ದವರ ಅಧಿಕಾರವಧಿ 5/1/2028ರ ವರೆಗೆ ಇರಲಿದೆ.
Published On - 6:48 pm, Thu, 19 September 24