ಗದಗ ಜಿಮ್ಸ್ ಆಸ್ಪತ್ರೆ ಚಿಕಿತ್ಸಾ ದರದಲ್ಲಿ ಭಾರೀ ಹೆಚ್ಚಳ; ಕಂಗಾಲಾದ ಬಡ ರೋಗಿಗಳು

ಸರ್ಕಾರಿ ಆಸ್ಪತ್ರೆ ಅಂದರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದ್ರೆ, ಈ ಸರ್ಕಾರಿ ಆಸ್ಪತ್ರೆ ಮಾತ್ರ ಬಡವರ ವಸೂಲಿಗೆ ಇಳಿದಿದೆ. ಬಿಪಿಎಲ್ ಕಾರ್ಡ್​ನ ಬಡವರಿಂದಲೂ ಹಣ ವಸೂಲಿ ಮಾಡುತ್ತಿದೆ. ದಿಢೀರ್ ಎಲ್ಲ ದರಗಳು ಏರಿಕೆ ಮಾಡಿದ್ದು, ಬಡ ರೋಗಿಗಳು ದರ ನೋಡಿ ಕಂಗಾಲಾಗಿದ್ದಾರೆ. ನಿರ್ದೇಶಕರ ಈ ನಿರ್ಧಾರ ವೈದ್ಯರಿಗೂ ತಲೆನೋವಾಗಿದೆ. ಒಪಿಡಿಗಳಲ್ಲಿ ರೋಗಿಗಳು ವೈದ್ಯರ ನಡುವೆ ಜಗಳಕ್ಕೆ ಕಾರಣವಾಗಿದೆ. ಇದೊಂದು ಹಿಟ್ಲರ್ ಆಡಳಿತ ಎಂದು ಜನರು ಕೆಂಡಕಾರಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಗದಗ ಜಿಮ್ಸ್ ಆಸ್ಪತ್ರೆ ಚಿಕಿತ್ಸಾ ದರದಲ್ಲಿ ಭಾರೀ ಹೆಚ್ಚಳ; ಕಂಗಾಲಾದ ಬಡ ರೋಗಿಗಳು
ಗದಗ ಜಿಮ್ಸ್ ಆಸ್ಪತ್ರೆ ಚಿಕಿತ್ಸಾ ದರದಲ್ಲಿ ಭಾರೀ ಹೆಚ್ಚಳ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 19, 2024 | 6:28 PM

ಗದಗ, ಸೆ.19: ಸರ್ಕಾರ ಬಿಪಿಎಲ್, ಕಡುಬಡವರಿಗೆ ಎಲ್ಲ ರೀತಿಯ ಚಿಕಿತ್ಸೆಗಳು ಉಚಿತ ಎಂದು ಹೇಳಿದೆ. ಆದ್ರೆ, ಗದಗ ಜಿಮ್ಸ್ ಆಸ್ಪತ್ರೆ(GIMS Hospital)ಯಲ್ಲಿ ಎಲ್ಲ ರೀತಿಯ ರಕ್ತ ತಪಾಸಣೆ, ಎಂಡೋಸ್ಕೋಪಿ, ಅಲ್ಟ್ರಾಸೌಂಡ್, ಸೋನೋಗ್ರಾಫಿ, ಎಕ್ಸರೇ, ದಂತ ಚಿಕಿತ್ಸೆ ಸೇರಿದಂತೆ ಎಲ್ಲ ದರಗಳಲ್ಲಿ ಎರಡು, ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಇದು ಬಡ ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಸರ್ಕಾರ ಬಡವರಿಗಾಗಿ ಗ್ಯಾರಂಟಿ ಯೋಜನೆ ಮಾಡಿದೆ. ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಂದ ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಜಿಮ್ಸ್ ನಿರ್ದೇಶಕರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ

ಇನ್ನು ಹಿರಿಯ ವೈದ್ಯರು, ಅಧಿಕಾರಿಗಳ ಗಣನೆಗೆ ತೆಗೆದುಕೊಳ್ಳದೇ ತಪಾಸಣಾ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಇದು ಜಿಮ್ಸ್ ಆಸ್ಪತ್ರೆಯ ಬಹುತೇಕ ವೈದ್ಯರು, ಸಿಬ್ಬಂದಿಗಳಿಗೂ ಇಷ್ಟವಿಲ್ಲ. ನಿತ್ಯ ರೋಗಿಗಳು ವೈದ್ಯರ ಜೊತೆ ಜಗಳ ಮಾಡುತ್ತಿದ್ದಾರಂತೆ. ಇದರಿಂದ ಓಪಿಡಿಗಳಲ್ಲಿ ವೈದ್ಯರು ಸೇವೆ ಮಾಡೋದು ಕಷ್ಟವಾಗಿದ್ದು, ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಸರ್ವಾಧಿಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಇತ್ತ ತಿರುಗಿ ನೋಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಗದಗ ಜಿಮ್ಸ್​ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವ: ಸ್ನಾನಕ್ಕೆ ಬಿಸಿ ನೀರಿಲ್ಲದೆ ಪರದಾಡುತ್ತಿರುವ ಬಾಣಂತಿಯರು

ಯಾವುದಕ್ಕೆ ಎಷ್ಟೇಷ್ಟು ದರ ಹೆಚ್ಚಳ

ರಾಜ್ಯದ ಯಾವುದೇ ವೈದ್ಯಕೀಯ ವಿಜ್ಞಾನಗಳ ಕೇಂದ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ತಪಾಸಣೆಯಲ್ಲಿ ಯಾವುದೇ ದರ ಹೆಚ್ಚಳ ಮಾಡಿಲ್ಲ. ಆದರೆ, ಗದಗ ವೈದ್ಯಕೀಯ ಆಸ್ಪತ್ರೆಯಲ್ಲಿ ಇಷ್ಟೊಂದು ದರ ಹೆಚ್ಚಳ ಮಾಡಲಾಗಿದೆ. ಯಾವುದಕ್ಕೆ ಎಷ್ಟೇಷ್ಟು ದರ ಹೆಚ್ಚಳ ಮಾಡಿದ್ದಾರೆ ನೋಡುವುದಾದರೆ. ಎಂಡೋಸ್ಕೋಪಿ- ಹಳೆ ದರ 200 ಇದ್ರೆ, ಹೊಸ ದರ 1000 ಮಾಡಲಾಗಿದೆ. ಎಕ್ಸರೇ- 50 ರಿಂದ 100-200ಕ್ಕೆ ಏರಿಕೆ ಮಾಡಲಾಗಿದೆ. ಡ್ರೇಸಿಂಗ್- 20ರಿಂದ100 ರೂಪಾಯಿ ಹೆಚ್ಚಿಸಲಾಗಿದೆ. ಅಲ್ಟ್ರಾಸೌಂಡ್- ಬಿಪಿಎಲ್ ಕಾರ್ಡ್​ದಾರರಿಗೆ 50 ರಿಂದ 200, ಎಪಿಎಲ್ ಕಾರ್ಡ್ ದಾರರಿಗೆ 300 ಹೆಚ್ಚಿಸಲಾಗಿದೆ. ಇನ್ನು ದಂತ ಚಿಕಿತ್ಸೆಗೆ 100 ರೂ. ಇದ್ದದನ್ನ ಹದಿನೈದು ಪಟ್ಟು, ಅಂದರೆ 1500 ಹೆಚ್ಚಿಸಲಾಗಿದೆ. ಹೀಗೆ ಬಹುತೇಕ ಎಲ್ಲ ತಪಾಸಣೆ ದರ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ಜಿಮ್ಸ್ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ಅವರು ಮಾತನಾಡಿ, ‘ಸ್ಪೆಷಲ್ ಟೆಸ್ಟ್ ದರದಲ್ಲಿ APL ಕಾರ್ಡ್ ದಾರರಿಗೆ ಮಾತ್ರ ಬೆಲೆ ಹೆಚ್ಚಳ ಮಾಡಿದ್ದೇವೆ. BPL, ಅಂತ್ಯೋದಯ ಕಾರ್ಡ್ ದಾರರಿಗೆ ಯಾವುದೇ ದರ ಹೆಚ್ಚಿಗೆ ಮಾಡಿಲ್ಲ. ಒಂದು ವೇಳೆ ಯಾರಾದರೂ ಹಣ ತಗೆದುಕೊಂಡಿದ್ರೆ ಕ್ರಮ ಕೈಗೊಳ್ಳುತ್ತೇನೆ. 2018 ರಲ್ಲಿ DMA (ಡೈರೆಕ್ಟರ್ ಆಫ್ ಮೆಡಿಕಲ್ ಅಡ್ಮಿನಿಸ್ಟ್ರೇಷನ್) ಯಿಂದ ಆದೇಶ ಆಗಿದೆ. ಈ ಹಿನ್ನಲೆಯಲ್ಲಿ ದರ ಹೆಚ್ಚಳ ಮಾಡಿದ್ದೇವೆ. ಆದ್ರೆ, DMA ಆದೇಶದಲ್ಲಿ ಶೇಕಡಾ 5 ರಿಂದ 10 ರಷ್ಟು ಮಾತ್ರ ಹೆಚ್ಚಿಸಲು ಆದೇಶ ಮಾಡಲಾಗಿದೆಯಂತೆ. ಆದ್ರೆ, ಗದಗ ಜಿಮ್ಸ್ ನಿರ್ದೇಶಕರು ಮಾಡಿದ್ದು, ಶೇಕಡಾ 50 ಹೆಚ್ಚಳ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುತ್ತಾರೆ. ಬಹುತೇಕರು ಬಿಪಿಎಲ್, ಅಂತ್ಯೋದಯ ಕಾರ್ಡ್​ಗಳನ್ನು ಹೊಂದಿರುತ್ತಾರೆ. ಆದ್ರೆ, ನಿರ್ದೇಶಕರು ಮಾತ್ರ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಂದ ದರ ವಸೂಲಿ ಮಾಡ್ತಿಲ್ಲ ಅಂತಿದ್ದಾರೆ. ಆದ್ರೆ, ಟಿವಿ9ಗೆ ಲಭ್ಯವಾದ ಬಿಲ್​ಗಳಲ್ಲಿ ಬಹುತೇಕ BPL ಕಾರ್ಡ್ ದಾರರಿಂದಲೇ ಹಣ ಪೀಕಿದ್ದು ಪತ್ತೆಯಾಗಿದೆ. ಇದು ಗದಗ ಜಿಲ್ಲೆಯಲ್ಲಿ ವ್ಯಾಪಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಮ್ಸ್ ಆಡಳಿತಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್​ ಅವರಿಗೆ ದರ ಹೆಚ್ಚಳ ಬಗ್ಗೆ ಗೋತ್ತಿಲ್ಲವಾ. ಸಚಿವರು ಯಾಕೇ ಮೌನವಾಗಿದ್ದಾರೆ ಎಂದು ಜನ್ರು ಕಿಡಿಕಾರಿದ್ದಾರೆ. ಸರ್ಕಾರ ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಆದೇಶ ಮಾಡಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹಣ ವಸೂಲಿ ನಡೆಯುತ್ತಿರೋದು ವಿಪರ್ಯಾಸವೇ ಸರಿ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಗದಗ ಜಿಮ್ಸ್ ಆಡಳಿತಕ್ಕೆ ಬಿಸಿ ಮುಟ್ಟಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Thu, 19 September 24