ಬೆಂಗಳೂರು: ಸ್ವತಃ ಅವರೇ ಹೇಳಿಕೊಂಡಿರುವಂತೆ ಹಠವಾದಿ ಸಚಿವ ಆನಂದ್ ಸಿಂಗ್ ಅವರು ರಾಜೀನಾಮೆ ಅಸ್ತ್ರ ಪ್ರಯೋಗಕ್ಕೆ ಸನ್ನದ್ಧವಾಗಿರುವುದು ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ರಾಜಕೀಯ ಬಿರುಗಾಳಿಗೆ ಮೂಲವಾಗಿದೆ. ಒಂದೆಡೆ ಸಚಿವ ಆನಂದ್ ಸಿಂಗ್ ರಾಜೀನಾಮೆ ಕೊಡಲು ಮುಂದಾಗುತ್ತಿದ್ರೆ ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ‘ಸೈನಿಕ’ ಸಿ.ಪಿ. ಯೋಗೇಶ್ವರ್ ದೆಹಲಿಯಲ್ಲಿ ಕುಳಿತು ಭಾರಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಖಾತೆ ಮುನಿಸು ತೋರಿರುವ ಎಂಟಿಬಿ ನಾಗರಾಜ್ ಮೂರು ದಿನಗಳ ಹಿಂದೆ ಖಾತೆ ಬದಲಾವಣೆಗೆ ಗಡುವು ಕೊಟ್ಟಿದ್ದರು. ಈ ಮಧ್ಯೆ ಮೈಸೂರಿನ ರಾಮದಾಸ್ ಮತ್ತು ಕೊಡಗಿನ ಅಪ್ಪಚ್ಚು ರಂಜನ್ ಅವರುಗಳು ತಣ್ಣಗೆ ಬಂಡಾಯದ ಬೆಂಕಿ ಉಗುಳುತ್ತಿದ್ದಾರೆ. ಇನ್ನು ಹಾಸನದ ಪ್ರೀತಂ ಗೌಡ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಮತ್ತೆ ಮತ್ತೆ ತಿರುಗಿಬಿದ್ದಿದ್ದಾರೆ.
ರಾಮನಗರ ವರದಿ:
ಒಂದೆಡೆ ಸಚಿವ ಆನಂದ್ ಸಿಂಗ್ ರಾಜೀನಾಮೆ ಕೊಡುವ ಲಕ್ಷಣಗಳು ದಟ್ಟವಾಗಿರುವಾಗ ಮತ್ತೊಂದೆಡೆ ಸಿ.ಪಿ. ಯೋಗೇಶ್ವರ್ ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ನಡೆಸುತ್ತಿದ್ದು, ದೆಹಲಿಯಲ್ಲಿಯೇ ಕುಳಿತುಬಿಟ್ಟಿದ್ದಾರೆ. ಯೋಗೇಶ್ವರ್ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿಜೆಪಿಯ ಕೇಂದ್ರ ನಾಯಕರನ್ನ ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಯೋಗೇಶ್ವರ್ ಇಂದು ಮತ್ತಷ್ಟು ನಾಯಕರನ್ನ ಭೇಟಿ ಮಾಡಲಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಬಳಿಕ, ಉಳಿದ ಖಾತೆಗಳಲ್ಲಿ ಒಂದನ್ನ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಅನುಕೂಲವಾಗಲಿದೆ ಎಂದು ಸಿಪಿವೈ ಹೇಳುತ್ತಿದ್ದಾರೆ. ಇಂದು ಕೇಂದ್ರದ ನಾಯಕರನ್ನ ಭೇಟಿ ಮಾಡಿದ ಬಳಿಕ ಯೋಗೇಶ್ವರ್ ಬೆಂಗಳೂರಿಗೆ ವಾಪಸಾಗುವ ಪ್ರೋಗ್ರಾಂ ಇದೆ.
ಹೊಸಕೋಟೆ ವರದಿ:
ಸಚಿವ ಎಂಟಿಬಿ ನಾಗರಾಜ್ ಖಾತೆ ಕ್ಯಾತೆ ಜೋರಾಗಿಯೆ ಇದೆ. ತಮ್ಮ ಬೆಂಬಲಿಗರು ವಿಶ್ ಮಾಡುವುದಕ್ಕೆಂದು ಹೊಸಕೋಟೆಯ ಗರುಡಾಚಾರ್ ಪಾಳ್ಯದಲ್ಲಿರುವ ಎಂಟಿಬಿ ಮನೆಯ ಮುಂದೆ ಜಮಾಯಿಸಿದ್ದರೂ ಎಂಟಿಬಿ ನಾಗರಾಜ್ ಹೊರಬಂದಿಲ್ಲ. ಸಚಿವ ಸ್ಥಾನದ ಬಗ್ಗೆ ಎರಡು ಮೂರು ದಿನದಲ್ಲಿ ನಿರ್ಧಾರ ತಿಳಿಸೋದಾಗಿ ಹೇಳಿರುವ ನಾಗರಾಜ್, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಮೈಸೂರು ವರದಿ:
ಆಡಳಿತಾರೂಢ ಕರ್ನಾಟಕ ಬಿಜೆಪಿಗೆ ಒಂದು ಕಡೆ ಖಾತೆ ಕ್ಯಾತೆ ಕಾಡುತ್ತಿದ್ದರೆ ಮತ್ತೊಂದು ಕಡೆ ಸಚಿವ ಸ್ಥಾನ ಆಕಾಂಕ್ಷಿಗಳೂ ಇನ್ನೂ ಮುನಿಸು, ಬಂಡಾಯ ಸಾರುತ್ತಿದ್ದಾರೆ. ಮೈಸೂರು ಭಾಗಕ್ಕೆ ಸಚಿವ ಸ್ಥಾನ ಸಿಗದ ಕಾರಣ ಸಿಎಂ ಬೊಮ್ಮಾಯಿ ಸರ್ಕಾರದ ವಿರುದ್ಧ ಶಾಸಕ ಎಸ್ಎ ರಾಮದಾಸ್ ಆಕ್ರೋಶಗೊಂಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ಆದರೆ ತಮ್ಮ ಕೆಆರ್ ಕ್ಷೇತ್ರದಲ್ಲಿ ಪ್ರತಿದಿನ ಪಕ್ಷ ಸಂಘಟನೆ ಕಾರ್ಯಕ್ರಮ ಮುಂದಿವರಿಸಿದ್ದಾರೆ. ಸಿಎಂ ಬೊಮ್ಮಾಯಿ ಮೈಸೂರಿಗೆ ಬಂದರೂ ರಾಮದಾಸ್ ಅವರತ್ತ ಸುಳಿದಿಲ್ಲ. ತಮ್ಮ ಕೆ ಆರ್ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಎಂದು ಶಪಥ ಮಾಡಿ, ಕ್ಷೇತ್ರದಲ್ಲಿ ಶತಪಥ ಹಾಕುತ್ತಿದ್ದಾರೆ.
ನನಗೆ ಬೇಕಾದ ಖಾತೆ ಸಿಕ್ಕಿಲ್ಲ, 2-3 ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುವೆ: ನೂತನ ಸಚಿವ ಎಂಟಿಬಿ ನಾಗರಾಜ್
(cabinet dissidence in Karnataka Chief minister Basavaraj Bommai)
Published On - 8:36 am, Wed, 11 August 21