ಬೆಂಗಳೂರು: ಕೊವಿಡ್ ಲಸಿಕೆಗೆ ಕಮಿಷನ್ ಪಡೆಯುವ ಆರೋಪ ವಿಚಾರಕ್ಕೆ ಸಂಬಂಧಿಸಿ ನಗರದ ಹೊಸಕೆರೆಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿರುವ ಅನುಗ್ರಹ ವಿಠ್ಠಲ ಆಸ್ಪತ್ರೆಗೆ ಶಾಸಕ ರವಿ ಸುಬ್ರಹ್ಮಣ್ಯ ಭೇಟಿ ನೀಡಿದ್ದಾರೆ. ನೀವು ನನಗೆ ಯಾವಾಗ ಹಣವನ್ನು ಕೊಟ್ಟಿದ್ದೀರಿ. ನೇರವಾಗಿ ಹಣ ಕೊಟ್ಟಿದ್ದೀರಾ, ಇಲ್ಲಾ ಮನೆಗೆ ಕಳಿಸಿದ್ದೀರಾ. ಹೇಗೆ ಹಣ ಕೊಟ್ಟಿದ್ದೀರಿ ಹೇಳಿ ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ಶಾಸಕ ರವಿ ಸುಬ್ರಹ್ಮಣ್ಯ ಪ್ರಶ್ನೆ ಕೇಳಿದ್ದಾರೆ.
ಇದು ರಾಜಕೀಯ ಪ್ರೇರಿತವಾಗಿದೆ. ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ. ಇಂತಹ ಸಮಯದಲ್ಲಿ ಹೊಲಸು ರಾಜಕೀಯ ಮಾಡಬಾರದು. ರಾಜಕೀಯವಾಗಿ ನನ್ನನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಳಿಕ ಬಸವನಗುಡಿ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹವ್ಯಾಸಿ ಕಲಾವಿದರೊಬ್ಬರು ಇದನ್ನು ಮಾಡಿದ್ದಾರೆಂದು ಆರೋಪ ವ್ಯಕ್ತಪಡಿಸಿದ್ದಾರೆ. ಆ ಹವ್ಯಾಸಿ ಕಲಾವಿದನಿಗೆ ಇದೇ ಕೆಲಸವಾಗಿದೆ. ಆತನಿಗೆ ಬೇರೆ ಯಾವುದೇ ಕೆಲಸ ಇಲ್ಲವೆಂದು ಗೊತ್ತಾಗುತ್ತದೆ ಎಂದು ರವಿ ಸುಬ್ರಹ್ಮಣ್ಯ ಕಿಡಿಕಾರಿದ್ದಾರೆ.
ಇದರ ಹಿಂದೆ ಕಾಂಗ್ರೆಸ್ ಕೈವಾಡ ಇರುವ ಅನುಮಾನವಿದೆ. ₹1,300ಕ್ಕೆ ಸಿಗುತ್ತಿದ್ದ ಲಸಿಕೆ ₹900ಕ್ಕೆ ಸಿಗುವಂತೆ ಮಾಡಿದ್ದೆವು. ಇದನ್ನು ಸಹಿಸಲು ಆಗದೆ ಇಂತಹ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊವಿಡ್ ಲಸಿಕೆ ನೀಡಿಕೆ ಆಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ 900 ರೂಪಾಯಿ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಚಟಕ್ಕಾಗಿ ಹೇಳಿಕೆಯನ್ನು ನೀಡಬಾರದು. ಸಿದ್ದರಾಮಯ್ಯ ಅವರ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಶಾಸಕ ರವಿ ಸುಬ್ರಹ್ಮಣ್ಯ ಆಕ್ರೋಶ ಹೊರಹಾಕಿದ್ದಾರೆ.
ಕೊವಿಡ್ ಲಸಿಕೆಗೆ ಕಮಿಷನ್ ಪಡೆಯುವ ಆರೋಪ ವಿಚಾರವಾಗಿ, ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಆಡಿಯೋ, ಆಸ್ಪತ್ರೆ ನಂಬರ್ ಸಹಿತ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ಹಗರಣ: ಇಬ್ಬರನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು
ಕಾಂಗ್ರೆಸ್ನ ಕೆಲ ಬುದ್ಧಿಜೀವಿಗಳು ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ
Published On - 5:47 pm, Sat, 29 May 21