ಹಾಸನ, ನ.24: ಕಾಂತರಾಜು ಅವರ ವರದಿಯನ್ನು ಕುಮಾರಸ್ವಾಮಿ ಅವರು ಸ್ವೀಕಾರ ಮಾಡಲಿಲ್ಲ ಎನ್ನುವ ಸಿದ್ದರಾಮಯ್ಯ (Siddaramaiah) ಈಗ ಮುಖ್ಯಮಂತ್ರಿ. ಈಗ ಅವರೇ ಆ ವರದಿಯನ್ನು ಸ್ವೀಕರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಅವರು ಸವಾಲು ಹಾಕಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, 2018ರಲ್ಲಿ ಕಾಂತರಾಜು ವರದಿ ಸ್ವೀಕಾರ ಮಾಡಲು ಕುಮಾರಸ್ವಾಮಿ ಒಪ್ಪಿಲ್ಲ ಎಂದು ನೀವು ಆರೋಪ, ಆಪಾದನೆ ಮಾಡುತ್ತಿದ್ದೀರಿ. ಈಗ ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ. ನೀವು ಯಾಕೆ ವರದಿ ಸ್ವೀಕಾರ ಮಾಡಿಲ್ಲ? ಎಂದು ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸಿದರು.
ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದಕ್ಕಿಂತ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಸಮಾಜದಲ್ಲಿ ಸಂಘರ್ಷ ಸೃಷ್ಟಿ ಮಾಡಲು ವೇದಿಕೆ ಮಾಡಲು ಹೊರಟಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಗುರುವಾರದ ಕ್ಯಾಬಿನೆಟ್ನಲ್ಲಿ ಮಾಡಿದ ತೀರ್ಮಾನಕ್ಕೆ ಇದೇ ಅರ್ಥವೇ ಎಂದು ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸಿದ್ದರಾಮಯ್ಯ ಸಂಪುಟ ಡಿಕೆಶಿ ಪಾದದಡಿಯಲ್ಲಿದೆ ಎಂದ ಕುಮಾರಸ್ವಾಮಿ
ಕಾಂತರಾಜು ವರದಿಯ ಮೂಲ ಪ್ರತಿ ಕಳ್ಳತನವಾಗಿರುವುದು ಗೊತ್ತಿಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಅವರಲ್ಲೇ ದ್ವಂದ್ವವಿದೆ. ಜಾತಿಗಣತಿಯನ್ನು ಮನೆಗಳಿಗೆ ಹೋಗಿ ಮಾಡಿಲ್ಲ, ವಿದ್ಯಾರ್ಥಿಗಳಿಂದ ಮಾಡಿಸಿದ್ದಾರೆ ಎಂಬ ಆರೋಪವಿದೆ. ಕಾಂತರಾಜು ವರದಿ ಸಿದ್ಧವಾಗಿ 9 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದನ್ನು ಆಧಾರವಾಗಿ ಇಟ್ಟುಕೊಂಡು ಯಾರಿಗೆ ನ್ಯಾಯ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.
ತಮ್ಮ ಹೆಮ್ಮೆಯ ನಾಯಕ ರಾಹುಲ್ ಗಾಂಧಿಯವರ ಅಪೇಕ್ಷೆಯಂತೆ ಅವರನ್ನು ತೃಪ್ತಿಪಡಿಸಲು ಜಾತಿ ಗಣತಿ ವರದಿ ಸ್ವೀಕಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ, ಈ ವರದಿಯನ್ನು ಯಾವ ರೀತಿ ಕಾರ್ಯರೂಪಕ್ಕೆ ತರುತ್ತಾರೆ ಎಂದು ಕಾದು ನೋಡೊಣ ಎಂದರು.
ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಮ್ಮ ಸಮುದಾಯದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಕೊಡಲಾಗಿರುವ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಎಲ್ಲರೂ ಕೂಡ ಸಹಿ ಹಾಕಿದ್ದಾರೆ. ಹಿಂದುಳಿದ ಆಯೋಗದ ಈಗಿನ ಅಧ್ಯಕ್ಷರು ಫೆಬ್ರವರಿಗೆ ವರದಿ ಕೊಡುವುದಾಗಿ ಹೇಳಿದ್ದಾರೆ. ಮುಂದೆ ಏನಾಗುತ್ತದೋ ಕಾದು ನೋಡೋಣ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ