ಬಿಬಿಎಂಪಿ ಮಾರ್ಷಲ್‌ಗಳ ಉದ್ಯೋಗಕ್ಕೆ ಕತ್ತರಿ: ಆಯುಕ್ತರಿಗೆ ಡಿಕೆ ಶಿವಕುಮಾರ್ ಪತ್ರ
ಮಾರ್ಷಲ್‌ನ ಬಲವನ್ನು ಶೇಕಡಾ 70-80 ಕ್ಕೆ ಇಳಿಸಲು ಬಿಬಿಎಂಪಿ ಯೋಜಿಸುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಸುಮಾರು 250 ಮಾರ್ಷಲ್‌ಗಳನ್ನು ಮಾತ್ರ ಉಳಿಸಿಕೊಳ್ಳಲು ಇದು ಯೋಜಿಸಿದೆ ಎನ್ನಲಾಗಿದೆ. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಆಯುಕ್ತ ತುಷಾರ್ ಗಿರಿನಾಥ್ಗೆ ಪತ್ರ ಬರೆದಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಬೆಂಗಳೂರು, ನವೆಂಬರ್ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) 1,000ಕ್ಕೂ ಹೆಚ್ಚು ಮಾರ್ಷಲ್‌ಗಳನ್ನು (BBMP marshals) ಹೊಂದುವ ಅಗತ್ಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮಾರ್ಷಲ್‌ಗಳ ಸಂಖ್ಯೆ ಕಡಿಮೆ ಮಾಡುವಂತೆ ಒತ್ತಾಯಿಸಿ ಶಿವಕುಮಾರ್ ಅವರಿಗೆ ಬಿಜೆಪಿ ಮುಖಂಡ ಎನ್‌ಆರ್ ರಮೇಶ್ ಪತ್ರ ಬರೆದ ನಂತರ ಈ ಕ್ರಮಕ್ಕೆ ಅವರು ಮುಂದಾಗಿದ್ದಾರೆ.
ಈ ಕುರಿತು ಆಪ್ತ ಕಾರ್ಯದರ್ಶಿ ಮೂಲಕ ಅಗತ್ಯ ಕ್ರಮ ಕೈಗೊಳ್ಳಲು ಪರಿಶೀಲಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನವೆಂಬರ್ 21 ರಂದು ಬರೆದ ಪತ್ರದಲ್ಲಿ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಬಿಬಿಎಂಪಿಯ ಮಾರ್ಷಲ್ ವಿಭಾಗವು ಆಡಳಿತಕ್ಕೆ ಬಿಳಿ ಆನೆಯಂತಾಗಿದೆ. ಅನಗತ್ಯ ಮಾರ್ಷಲ್ ಸೇವೆಯನ್ನು ನಿಲ್ಲಿಸಬೇಕು ಎಂದು ಡಿಸಿಎಂಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕ ರಮೇಶ್ ಉಲ್ಲೇಖಿಸಿದ್ದರು.
ಬಿಬಿಎಂಪಿ ಮೂಲಗಳ ಪ್ರಕಾರ, ಸಂಸ್ಥೆಯ ವಿವಿಧ ವಿಭಾಗಗಳಲ್ಲಿ 1,000 ಕ್ಕೂ ಹೆಚ್ಚು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಘನತ್ಯಾಜ್ಯ ಇಲಾಖೆಯಲ್ಲಿ 32 ಮೇಲ್ವಿಚಾರಕರೊಂದಿಗೆ 450 ಮಾರ್ಷಲ್‌ಗಳು, ಆರೋಗ್ಯ ಇಲಾಖೆಯಲ್ಲಿ 500 ಕ್ಕೂ ಹೆಚ್ಚು ಮಾರ್ಷಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್ ಮತ್ತು ಇತರೆಡೆಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಮಾರ್ಷಲ್‌ಗಳ ಅಗತ್ಯ ಕಡಿಮೆಯಾಗಿದೆ ಮತ್ತು ವಿವಿಧ ಇಲಾಖೆಗಳ ಪ್ರಸ್ತುತ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಈ ಮಧ್ಯೆ, ಬಿಬಿಎಂಪಿಗೆ ಅಷ್ಟೊಂದು ಮಾರ್ಷಲ್‌ಗಳ ಅವಶ್ಯಕತೆ ಇಲ್ಲ ಎನ್ನಲಾಗಿದ್ದು, ಬಲ ತಗ್ಗಿಸಲು ಸಮಿತಿ ರಚಿಸಲಾಗಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ತಮ್ಮ ಇಲಾಖೆಗಳಲ್ಲಿ ಅಗತ್ಯವಿರುವ ಮಾರ್ಷಲ್‌ಗಳ ಸಂಖ್ಯೆಯನ್ನು ನಮೂದಿಸಿ ಯೋಜನೆಯನ್ನು ಸಲ್ಲಿಸುವಂತೆ ವಿವಿಧ ಇಲಾಖೆಗಳ ವಿಶೇಷ ಆಯುಕ್ತರಿಗೆ ತಿಳಿಸಿದ್ದಾರೆ.
ಮಾರ್ಷಲ್‌ನ ಬಲವನ್ನು ಶೇಕಡಾ 70-80 ಕ್ಕೆ ಇಳಿಸಲು ಸಂಸ್ಥೆ ಯೋಜಿಸುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಸುಮಾರು 250 ಮಾರ್ಷಲ್‌ಗಳನ್ನು ಮಾತ್ರ ಉಳಿಸಿಕೊಳ್ಳಲು ಇದು ಯೋಜಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಬೆಂಗಳೂರಿನಲ್ಲಿ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲು ಮುಂದಾದ BBMP
ಪ್ರತಿ ಮಾರ್ಷಲ್‌ಗೆ ತಿಂಗಳಿಗೆ 25,000 ಮತ್ತು ಮೇಲ್ವಿಚಾರಕರಿಗೆ ತಿಂಗಳಿಗೆ 45,000 ವೇತನ ನೀಡಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಇದಕ್ಕಾಗಿ ಬಿಬಿಎಂಪಿಗೆ ತಿಂಗಳಿಗೆ ಸುಮಾರು 35 ಕೋಟಿ ರೂ. ಬೇಕಾಗುತ್ತಿದೆ. ನಿಯಮ ಉಲ್ಲಂಘಿಸಿದವರಿಂದ ದಂಡದ ರೂಪದಲ್ಲಿ ಮಾರ್ಷಲ್‌ಗಳು ಕಳೆದ ವರ್ಷಗಳಲ್ಲಿ 27 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Fri, 24 November 23