
ಬೆಂಗಳೂರು, ನವೆಂಬರ್ 4: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census) ಕೊನೆಗೂ ಮುಕ್ತಾಯಗೊಂಡಿದ್ದು, ನವೆಂಬರ್ 10 ರವರೆಗೆ ಆನ್ಲೈನ್ನಲ್ಲಿ ಸ್ವಯಂಪ್ರೇರಿತರಾಗಿ ಭಾಗಿ ಆಗಲು ಅವಕಾಶವಿದೆ. ಮನೆ ಮನೆ ಸಮೀಕ್ಷೆ ವೇಳೆ ಸಾಕಷ್ಟು ಮಂದಿ ಗೊಂದಲ, ರಾಜಕೀಯ ಕೆಸರೆರೆಚಾಟದ ಹಿನ್ನೆಲೆ ಮಾಹಿತಿ ನೀಡಲು ನಿರಾಕರಿಸಿದ್ದರು. ಆದಾಗ್ಯೂ 1.46 ಕೋಟಿ ಕುಟುಂಬಗಳ 6 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಸಮೀಕ್ಷೆ ಕವರ್ ಮಾಡಿದೆ. ಇನ್ನು ಮನೆ ಮನೆ ಸಮೀಕ್ಷೆಯಿಂದ ಹೊರಗುಳಿದವರ ಮಾಹಿತಿ ಸಂಗ್ರಹಣೆಗೆ ಸರ್ಕಾರ ಮತ್ತೊಂದು ಪ್ಲಾನ್ ಮಾಡಿಕೊಂಡಿದೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮಾಹಿತಿ ಪ್ರಕಾರ, ವದಂತಿ, ಊಹಾಪೋಹ, ಹಲವರು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರಿಂದ ಮನೆ ಮನೆ ಸಮೀಕ್ಷೆ ವೇಳೆ ಸಾಕಷ್ಟು ಮಂದಿ ಮಾಹಿತಿ ನೀಡಿಲ್ಲ. ಆದರೆ ಇದು ಸಮೀಕ್ಷೆಗೆ ಯಾವುದೇ ಹಿನ್ನಡೆ ಉಂಟುಮಾಡಿಲ್ಲ.
ಆದಾಗ್ಯೂ ನಾವು ಸರ್ಕಾರಿ ಹಾಗೂ ಖಾಸಗಿ ವಲಯದ ಸಂಘ-ಸಂಸ್ಥೆಗಳಿಂದ, ಅಲ್ಲಿ ಕೆಲಸ ಮಾಡುತ್ತಿರುವ ಅಥವಾ ವ್ಯಾಸಂಗ ಮಾಡುತ್ತಿರುವವರ ಅಗತ್ಯ ಮಾಹಿತಿಯನ್ನು ತರಿಸಿಕೊಳ್ಳುತ್ತೇವೆ. ಈ ಮಾಹಿತಿ ಸಂಗ್ರಹದ ಬಳಿಕ ನಾವು ಕ್ರಾಸ್ ವೆರಿಫೈ ಮಾಡಿಕೊಳ್ಳಲು ಸಾಧ್ಯವಿದೆ ಅಂತಾ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಮಧುಸೂಧನ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ: ಮನೆ ಮನೆ ಸರ್ವೇ ಅಂತ್ಯ, ಒಟ್ಟು 6.13 ಕೋಟಿ ಜನರ ಸಮೀಕ್ಷೆ
ಒಟ್ಟಾರೆ, ಪರ ವಿರೋಧದ ಬಳಿಕವೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಿರೀಕ್ಷಿತ ಗುರಿಯನ್ನಂತೂ ತಲುಪಿದೆ. ಆದರೆ ನಾನಾ ನೆಪವೊಡ್ಡಿ ಸಮೀಕ್ಷೆಯಿಂದ ತಪ್ಪಿಸಿಕೊಂಡವರ ಮಾಹಿತಿ ಸಂಗ್ರಹಕ್ಕೆ ಹಿಂದುಳಿದ ವರ್ಗಗಳ ಆಯೋಗ ಪ್ಲಾನ್ ಬಿ ಕೂಡ ಮಾಡಿಕೊಂಡಿದೆ. ಅಂತಿಮವಾಗಿ ಸಮೀಕ್ಷೆಯ ವರದಿ ಡಿಸೆಂಬರ್ ಹೊತ್ತಿಗೆ ಸರ್ಕಾರದ ಕೈಸೇರುವ ಸಾಧ್ಯತೆ ಇದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
Published On - 7:20 am, Tue, 4 November 25