ನವದೆಹಲಿ, (ಆಗಸ್ಟ್ 28): ತಮಿಳುನಾಡಿಗೆ(Tamil Nadu) ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ(Cauvery River Water Management Committee) ಸೂಚನೆ ನೀಡಿದೆ. ಮುಂದಿನ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಸದ್ಯ ಕರ್ನಾಟಕ ತಮಿಳುನಾಡಿಗೆ 1900 ಕ್ಯೂಸೆಕ್ ನೀರು ಹರಿಸುತ್ತಿದೆ. ಆದ್ರೆ, ಇದೀಗ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ಹೆಚ್ಚುವರಿಯಾಗಿ 3,100 ಕ್ಯೂಸೆಕ್ಸ್ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಹೇಳಿದೆ.
ಬಿಳಿಗುಂಡ್ಳು ಮಾಪನ ಕೇಂದ್ರದಲ್ಲಿ 5000 ಕ್ಯೂಸೆಕ್ ದಾಖಲಾಗಬೇಕು. ಹೀಗಾಗಿ ಹೆಚ್ಚುವರಿಯಾಗಿ 3,100 ಕ್ಯೂಸೆಕ್ ನೀರು ಹರಿಸಬೇಕಾದ ಅನಿವಾರ್ಯತೆ ಎಂದಿದೆ. ಕಳೆದ ಬಾರಿ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಹೇಳಿತ್ತು. ಇದೀಗ 10 ಸಾವಿರ ಕ್ಯೂಸೆಕ್‌ಗೆ ಇಳಿಸಿದೆ.
ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ಸೆ.1ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ಇಂದು ವರ್ಚುವಲ್ ಮೂಲಕ ಕಾವೇರಿ ನೀರು ನಿರ್ವಹಣ ಸಭೆ ನಡೆಸಲಾಯ್ತು. ಕರ್ನಾಟಕ, ತಮಿಳುನಾಡು ಅಧಿಕಾರಿಗಳು ಮತ್ತು ಕೇಂದ್ರ ಜಲ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಎರಡು ರಾಜ್ಯಗಳ ಜಲಾಶಯಗಳ ನೀರಿನ ಸಂಗ್ರಹ, ಮಳೆಯ ಪ್ರಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಎರಡು ರಾಜ್ಯಗಳ ವಾಸ್ತವ ಪರಿಸ್ಥಿತಿ ಲೆಕ್ಕಾಹಾಕಿ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಸಮಿತಿ ಸೂಚನೆ ನೀಡಿದೆ.
ಸದ್ಯ ಕಾವೇರಿ ನದಿಯಲ್ಲಿ ಸಹಜವಾಗಿ 1900 ಕ್ಯೂಸೆಕ್ ನೀರು ಹರಿದು ತಮಿಳುನಾಡಿಗೆ ಸೇರುತ್ತಿದೆ. ಕಾವೇರಿ ನೀರು ನಿರ್ವಹಣ ಸಮಿತಿ ಸೂಚನೆಯಂತೆ ಕರ್ನಾಟಕ 5000 ಕ್ಯೂಸೆಕ್ ನೀರು ಹರಿಸಬೇಕಾಗಿದೆ. ಅಂದರೆ ಗಡಿ ಭಾಗದ ಬಿಳುಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 5000 ಕ್ಯೂಸೆಕ್ ನೀರಿನ ಹರಿವು ದಾಖಲಾಗಬೇಕಾಗುತ್ತೆ. ಈಗ ಹರಿಯುತ್ತಿರುವ ನೀರಿಗಿಂತ 3100 ಕ್ಯೂಸೆಕ್ ಹೆಚ್ಚುವರಿ ನೀರನ್ನು ಕೆಆರ್ ಎಸ್ ಅಥವಾ ಕಬಿನಿ ಜಲಾಶಯದಿಂದ ಕರ್ನಾಟಕ ಹರಿಸಬೇಕಾಗುತ್ತೆ.
ಮಳೆಯ ಕೊರತೆಯನ್ನು ಮಾನದಂಡವಾಗಿ ಪರಿಗಣಿಸಿ 22% ನಷ್ಟು ಸಂಕಷ್ಟದ ಅಂಶವನ್ನು ಅನುರಿಸಬೇಕು. ಹೀಗಾಗಿ ಇನ್ನೂ 10 ದಿನಗಳ ಕಾಲ ಕರ್ನಾಟಕ ಪ್ರತಿದಿನ 24,000 ಕ್ಯೂಸೆಕ್ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಒತ್ತಾಯಿಸಿತು. ತಮಿಳುನಾಡಿನ ಬೇಡಿಕೆ ತಿರಸ್ಕರಿಸಿದ CWRC 7200 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಕರ್ನಾಟಕಕ್ಕೆ ಒತ್ತಾಯಿಸಿತ್ತು. ಆದರೆ ಕರ್ನಾಟಕ ಅಧಿಕಾರಿಗಳು 7200 ಕ್ಯೂಸೆಕ್ ನೀರು ಬಿಡಲು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿದಿನ 7200 ಕ್ಯೂಸೆಕ್ ನೀರು ಹರಿಸಲು ಅಸಾಧ್ಯ ಎಂದು ಕರ್ನಾಟಕ ವಾದ ಮಂಡಿಸಿದೆ. ಅಂತಿಮವಾಗಿ 5000 ಕ್ಯೂಸೆಕ್ ನೀರು ಬಿಡಲು CWRC ಆದೇಶಿಸಿದೆ.
ಇಂದು ಕಾವೇರಿ ನೀರು ನಿರ್ವಹಣ ಸಮಿತಿ ನೀಡಿರುವ ಸೂಚನೆಯನ್ನು ಮಾರ್ಪಾಡು ಮಾಡಲು ಮತ್ತೊಂದು ಅವಕಾಶವಿದೆ. ನಾಳೆ ಅತಿ ಮುಖ್ಯವಾದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಸಭೆ ದೆಹಲಿಯಲ್ಲಿ ನಡೆಯಲಿದೆ. ಆ ಸಭೆಯಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣವನ್ನು ತಗ್ಗಿಸಲು ಅವಕಾಶವಿದೆ. ಕಳೆದ ಬಾರಿ CWRC 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಆದ್ರೆ CWRC ನೀಡಿದ್ದ ಸೂಚನೆಯನ್ನು ಬದಿಗಿರಿಸಿ CWMA 10 ಸಾವಿರಕ್ಕೆ ಇಳಿಸಿತ್ತು. ಹಾಗಾಗಿ ಕರ್ನಾಟಕಕ್ಕೆ ಮತ್ತೊಂದು ಅವಕಾಶವಿದೆ. ಇನ್ನು ನಾಳೆ (ಆಗಸ್ಟ್ 29) ನವದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ನಡೆಯಲಿದ್ದು, ನೀರು ಬಿಡುವ ಸೂಚನೆ ಬಗ್ಗೆ ಚರ್ಚೆಗೆ ಬರಲಿದೆ. ಇತ್ತ ಕರ್ನಾಟಕವು ಸಹ ಸಹ ಅಷ್ಟು ನೀರು ಬಿಡಲು ಸಾಧ್ಯವಿಲ್ಲ ಎಂದು ವಾದಿಸಲಿದೆ. ಹೀಗಾಗಿ ನಾಳೆ ಸಭೆಯಲ್ಲಿ CWMA ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದನ್ನು ಕಾದುಬೋಡಬೇಕಿದೆ.
ಇನ್ನು ಇದೇ ಶುಕ್ರವಾರ (ಸೆಪ್ಟೆಂಬರ್ 01) ಸುಪ್ರೀಂಕೋರ್ಟ್ ಕೂಡ ಇದೇ ವಿಚಾರವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಅಷ್ಟರೊಳಗೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿಯ ವರದಿಯನ್ನು ಸುಪ್ರೀಂಕೋರ್ಟ್ ಸಲ್ಲಿಸಬೇಕಾಗಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಶುಕ್ರವಾರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸೆಪ್ಟೆಂಬರ್ 01ಕ್ಕೆ ಮುಂದೂಡಿತ್ತು. ಅಲ್ಲದೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ತಜ್ಞರಿದ್ದಾರೆ . ನಾವು ತಜ್ಞರಲ್ಲ ಹಾಗಾಗಿ ಯಾವುದನ್ನೂ ತನಿಖೆ ಮಾಡದೆ ತಕ್ಷಣ ಆದೇಶ ಹೊರಡಿಸುವುದು ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದು, ಈ ಮಧ್ಯಂತರ ಅವಧಿಯಲ್ಲಿ ಸಭೆ ಕರೆಯುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿತ್ತು. ಕೋರ್ಟ್ ಸೂಚನೆಯಂತೆ ಕಾವೇರಿ ಪ್ರಾಧಿಕಾರ ನಾಳೆ ಸಭೆ ನಡೆಸಲಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:22 pm, Mon, 28 August 23