ಕಾವೇರಿ ನೀರು ಹಂಚಿಕೆ ವಿವಾದ; ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್​

| Updated By: ಗಣಪತಿ ಶರ್ಮ

Updated on: Sep 01, 2023 | 2:39 PM

Cauvery Water Sharing Dispute; ಕೊನೆಯಲ್ಲಿ ಸೆಪ್ಟೆಂಬರ್ 11ರಂದು ವಿಚಾರಣೆ ನಡೆಸುಂತೆ ಕರ್ನಾಟಕದ ವಕೀಲರು ಒತ್ತಾಯಿಸಿದರು. ಆದರೆ, ಸೋಮವಾರ ವಿಚಾರಣೆ ನಡೆಸುವಂತೆ ತಮಿಳುನಾಡು ವಕೀಲರು ಆಗ್ರಹಿಸಿದರು. ಕೊನೆಯದಾಗಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 6ರ ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.

ಕಾವೇರಿ ನೀರು ಹಂಚಿಕೆ ವಿವಾದ; ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್​
ಸುಪ್ರೀಂ ಕೋರ್ಟ್
Follow us on

ನವದೆಹಲಿ, ಸೆಪ್ಟೆಂಬರ್ 1: ಕಾವೇರಿ ನೀರು ಹಂಚಿಕೆ ವಿವಾದಕ್ಕೆ (Cauvery Dispute) ಸಂಬಂಧಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಪರಿಗಣಿಸಿದ ಸುಪ್ರೀಂ ಕೋರ್ಟ್​​​ (Supreme Court), ವಿಚಾರಣೆಯನ್ನು ಸೆಪ್ಟೆಂಬರ್ 6ರ ಬುಧವಾರಕ್ಕೆ ಮುಂದೂಡಿಕೆ ಮಾಡಿದೆ. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸಿದ್ದೇವೆ ಎಂದು ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್ ಸುಪ್ರೀಂ ಕೋರ್ಟ್​ಗೆ ತಿಳಿಸಿದರು. ಆದರೆ, 5000 ಕ್ಯೂಸೆಕ್ ನೀರು ಸಾಕಾಗುವುದಿಲ್ಲ. ಕರ್ನಾಟಕವು ಹೆಚ್ಚು ನೀರು ಹರಿಸಬೇಕು ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದರು.

ಕೊನೆಯಲ್ಲಿ ಸೆಪ್ಟೆಂಬರ್ 11ರಂದು ವಿಚಾರಣೆ ನಡೆಸುಂತೆ ಕರ್ನಾಟಕದ ವಕೀಲರು ಒತ್ತಾಯಿಸಿದರು. ಆದರೆ, ಸೋಮವಾರ ವಿಚಾರಣೆ ನಡೆಸುವಂತೆ ತಮಿಳುನಾಡು ವಕೀಲರು ಆಗ್ರಹಿಸಿದರು. ಕೊನೆಯದಾಗಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 6ರ ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.

ವಿಚಾರಣೆ ಇಂದು ನಡೆಯುವುದೇ ಅನುಮಾನವಾಗಿತ್ತು. ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠದ ವಿಚಾರಣಾ ಪಟ್ಟಿಯಲ್ಲಿ ಪ್ರಕರಣದ ಬಗ್ಗೆ ಉಲ್ಲೇಖಿಸದೇ ಇರುವುದರಿಂದ ಇಂದು ವಿಚಾರಣೆ ನಡೆಯುವುದು ಅನುಮಾನ ಎಂದು ವರದಿಯಾಗಿತ್ತು. ಆದರೆ, ಕೊನೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಕೈಗೆತ್ತಿಕೊಂಡಿತು.

ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು ಹೇಳಿದ್ದೇನು?

ಸುಪ್ರೀಂ ಕೋರ್ಟ್​​ಗೆ ಮೊರೆ ಹೋದ ನಂತರ ಕರ್ನಾಟಕ ಹೆಚ್ಚುವರಿ ನೀರು ಹರಿಸಿದೆ. ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಲಭ್ಯತೆ ಮಾಹಿತಿ ಆಧಾರದಲ್ಲಿ ನೀರು ಹರಿಸಲಿ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ಗೆ ಗುರುವಾರ ಅಫಿಡವಿಟ್ ಸಲ್ಲಿಸಿತ್ತು. ಜೂನ್, ಜುಲೈ, ಆಗಸ್ಟ್​ ತಿಂಗಳಲ್ಲಿ ಕರ್ನಾಟಕವು 80 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಕೇವಲ 30 ಟಿಎಂಸಿ ನೀರು ಮಾತ್ರ ಹರಿಸಲಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದರೂ ಮಳೆ ಕೊರತೆ ನೆಪ ಹೇಳಿ ಪೂರ್ಣಪ್ರಮಾಣದ ನೀರು ಬಿಡುಗಡೆ ಮಾಡಿಲ್ಲ ಎಂದು ಅಫಿಡವಿಟ್​​ನಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್​ಗೆ ತಿಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ