ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಸಂಬಂಧ ನಾಪತ್ತೆಯಾಗಿದ್ದ ಎ6 ಆದಿತ್ಯ ಆಳ್ವಾ 130 ದಿನಗಳ ಬಳಿಕ ಸೆರೆ ಸಿಕ್ಕಿದ್ದಾನೆ. ಈತನನ್ನು ಸೆರೆ ಹಿಡಿಯಲು ಸಿಸಿಬಿ ಪೊಲೀಸರು ಮಾಡಿದ ಪ್ಲಾನ್ ರೋಚಕ.
ಆದಿತ್ಯಾ ಆಳ್ವಾ ನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಶೋಧ ನಡೆಯುತ್ತಿತ್ತು. ಆಳ್ವಾ ಸಂಪರ್ಕದಲ್ಲಿದ್ದವರ ಮೊಬೈಲ್ ಟವರ್ ಲೋಕೆಷನ್ ಟ್ರೇಸ್ ಮಾಡುವ ಮೂಲಕ ಆದಿತ್ಯನ ಸಂಬಂಧಿಕರ, ಆಪ್ತರ ಕರೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಇನ್ನು ಅರೆಸ್ಟ್ ಆಗುವ ಭೀತಿಯಲ್ಲಿ ಆದಿತ್ಯ ಪದೇ ಪದೆ ಜಾಗ ಬದಲಾವಣೆ ಮಾಡುತ್ತಿದ್ದ.
ಭಾನುವಾರ(ಜ.10) ಸಂಜೆ ಆದಿತ್ಯನ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತ್ತು. ಚೆನ್ನೈನ ಓಲ್ಡ್ ಮಹಾಬಲೀಪುರಂ (OMR) ರಸ್ತೆಯ ಕಣತ್ತೂರು ಬಳಿ ಆದಿತ್ಯ ತಲೆಮರಿಸಿಕೊಂಡಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬಳಿಕ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದ್ರು.
ಸಿಸಿಬಿ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ತಂಡ ಭಾನುವಾರ ರಾತ್ರಿಯೇ ಚೆನ್ನೈ ಕಡೆ ದೌಡಾಯಿಸಿತು. ನಿನ್ನೆ ಇಡೀ ದಿನ ಆರೋಪಿ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ರು. ಬಳಿಕ ಕಣತ್ತೂರಿನ ರೆಸಾರ್ಟ್ನಲ್ಲಿ ಆರೋಪಿ ಆದಿತ್ಯ ಆಳ್ವಾ ಇರೋದನ್ನ ಖಚಿತಪಡಿಸಿಕೊಂಡು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಆದಿತ್ಯ ಅಳ್ವಾನನ್ನು ವಶಕ್ಕೆ ಪಡೆದ್ರು. ಸದ್ಯ ಆದಿತ್ಯನನ್ನು ಅರೆಸ್ಟ್ ಮಾಡಿದ್ದು ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತರಲಾಗಿದೆ.
ಸಿಸಿಬಿ ಪೊಲೀಸರು, ಆದಿತ್ಯನನ್ನು ಇಂದು ಸಿಸಿಹೆಚ್ 33ರ NDPS ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಸಿಸಿಬಿ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಕೊನೆಗೂ ಅರೆಸ್ಟ್ ಆದ ಆದಿತ್ಯ ಆಳ್ವಾ.. ಕೆಲ ರಾಜಕಾರಣಿಗಳು, ಸೆಲೆಬ್ರೆಟಿಗಳಿಗೆ ಒಳಗೊಳಗೆ ಶುರುವಾಯ್ತು ಭಯ
Published On - 8:52 am, Tue, 12 January 21