ಹವಾನಾ ಸಿಂಡ್ರೋಮ್​ ಬಗ್ಗೆ ಪರಿಶೀಲನೆಗೆ ಕರ್ನಾಟಕ ಹೈಕೋರ್ಟ್​ ನಿರ್ದೇಶನಕ್ಕೆ ಕೇಂದ್ರ ಸಮ್ಮತಿ; ಏನಿದು ಹೊಸ ರೋಗ?

|

Updated on: Aug 07, 2023 | 3:25 PM

ಹವಾನಾ ಸಿಂಡ್ರೋಮ್ ಒಂದು ನಿಗೂಢ ನರಮಾನಸಿಕ ಕಾಯಿಲೆಯಾಗಿದ್ದು, ಪ್ರಪಂಚದ ಅನೇಕ ಭಾಗಗಳಲ್ಲಿ ಅಮೆರಿಕದ ರಾಜತಾಂತ್ರಿಕರು ಮತ್ತು ಗೂಢಚಾರು ಇದರಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಹವಾನಾ ಸಿಂಡ್ರೋಮ್​ ಬಗ್ಗೆ ಪರಿಶೀಲನೆಗೆ ಕರ್ನಾಟಕ ಹೈಕೋರ್ಟ್​ ನಿರ್ದೇಶನಕ್ಕೆ ಕೇಂದ್ರ ಸಮ್ಮತಿ; ಏನಿದು ಹೊಸ ರೋಗ?
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಭಾರತದಲ್ಲಿ ‘ಹವಾನಾ ಸಿಂಡ್ರೋಮ್ (Havana Syndrome)’ ಸಾಧ್ಯತೆಯ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ನಿರ್ದೇಶನ ನೀಡಿದ್ದು, ಅದಕ್ಕೆ ಸರ್ಕಾರ ಸಮ್ಮತಿಸಿದೆ. ಈ ವಿಚಾರವಾಗಿ ಹೈಕೋರ್ಟ್​​ಗೆ ಕೇಂದ್ರ ಸರ್ಕಾರ ಸಂದೇಶ ರವಾನಿಸಿದೆ. ಈ ವಿಚಾರವಾಗಿ ಎ ಅಮರನಾಥ್ ಚಾಗು ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು, ಮೂರು ತಿಂಗಳ ಒಳಗೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ.

ಹವಾನಾ ಸಿಂಡ್ರೋಮ್ ಒಂದು ನಿಗೂಢ ನರವೈಜ್ಞಾನಿಕ ಕಾಯಿಲೆಯಾಗಿದ್ದು, ಪ್ರಪಂಚದ ಅನೇಕ ಭಾಗಗಳಲ್ಲಿ ಅಮೆರಿಕದ ರಾಜತಾಂತ್ರಿಕರು ಮತ್ತು ಗೂಢಚಾರು ಇದರಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ರೋಗ ಹೊಂದಿರುವವರು ಮೈಗ್ರೇನ್, ವಾಕರಿಕೆ, ನೆನಪಿನ ಕೊರತೆ ಮತ್ತು ತಲೆತಿರುಗುವಿಕೆ ಲಕ್ಷಣಗಳಿಂದ ಬಳಲುತ್ತಾರೆ ಎನ್ನಲಾಗಿದೆ. ಕ್ಯೂಬಾದಲ್ಲಿನ ಅಮೆರಿಕ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾದ ಅಧಿಕಾರಿಗಳಲ್ಲಿ ಮೊದಲು ರೋಗಲಕ್ಷಣಗಳು 2016 ರಲ್ಲಿ ಕಾಣಿಸಿಕೊಂಡಿದ್ದವು.

ಹವಾನಾ ಸಿಂಡ್ರೋಮ್ ಬಗ್ಗೆ ತನಿಖೆ ನಡೆಸಲು ಮತ್ತು ಅಂತಹ ಯಾವುದೇ ರೋಗ ಭಾರತದ ಭೂಪ್ರದೇಶದಲ್ಲಿ ಹರಡುವುದನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಎ ಅಮರನಾಥ್ ಚಾಗು ಹೈಕೋರ್ಟ್​ಗೆ ಮನವಿ ಮಾಡಿದ್ದರು.

ಹವಾನಾ ಸಿಂಡ್ರೋಮ್ ಎಂದರೇನು?

ಹವಾನಾ ಸಿಂಡ್ರೋಮ್ ಎಂಬುದು ನಿಗೂಢ ನರಮಾನಸಿಕ ಕಾಯಿಲೆಯಾಗಿದೆ. ಕ್ಯೂಬಾದ ಹವಾನಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಯಲ್ಲಿ ಮೊದಲು ಪತ್ತೆಯಾದ ಕಾರಣ ಇದಕ್ಕೆ ‘ಹವಾನಾ ಸಿಂಡ್ರೋಮ್’ ಎಂದು ಹೆಸರಿಡಲಾಗಿದೆ. ಈ ಕಾಯಿಲೆಯು ಎಲೆಕ್ಟ್ರೋಮ್ಯಾಗ್ನೆಟಿಕ್ ಎನರ್ಜಿಯು ರೇಡಿಯೋ ವೇವ್ಸ್​ ಮೂಲಕ ತಗುಲಿ ಉಂಟಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Havana Syndrome; ಹವಾನಾ ಸಿಂಡ್ರೋಮ್; ಲಕ್ಷಣ ಕಾಣಿಸಿಕೊಂಡ ಅಧಿಕಾರಿಗಳಿಗೆ ಪರಿಹಾರ ನೀಡಲಿದೆ ಅಮೆರಿಕ; ಏನಿದು ಹವಾನಾ ಸಿಂಡ್ರೋಮ್ ?

ಯಾವುದೇ ಸರ್ಕಾರಿ ಸಂಸ್ಥೆಯು ‘ಹವಾನಾ ಸಿಂಡ್ರೋಮ್’ಗೆ ಕಾರಣವೇನು ಎಂಬುದನ್ನು ಪುರಾವೆ ಸಹಿತ ನಿರೂಪಿಸಲು ಸಾಧ್ಯವಾಗಿಲ್ಲ. ಆದಾಗ್ಯೂ ಒಂದೇ ಸ್ಥಳದಲ್ಲಿ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಾವು ಗುರುತಿಸಿದ್ದೇವೆ ಎಂದು ಅಮೆರಿಕದ ನಾರ್ತ್​​ಈಸ್ಟರ್ನ್ ಯುನಿವರ್ಸಿಟಿಯ ಅಸಿಸ್ಟೆಂಟ್ ಕ್ಲಿನಿಕಲ್ ಪ್ರೊಫೆಸರ್ ನಿಕೋಲ್ ಲಾಫನ್ ತಿಳಿಸಿರುವುದಾಗಿ ‘ನ್ಯೂಸ್ ನಾರ್ತ್​ಈಸ್ಟರ್ನ್​’ ಕಳೆದ ವರ್ಷ ವರದಿ ಮಾಡಿತ್ತು.

ಭಾರತದಲ್ಲಿದೆಯೇ ಹವಾನಾ ಸಿಂಡ್ರೋಮ್?

ಹವಾನಾ ಸಿಂಡ್ರೋಮ್ ಬಗ್ಗೆ ಭಾರತದಲ್ಲಿ ಮೊದಲು 2021ರಲ್ಲಿ ವರದಿಯಾಗಿತ್ತು. ಆಗ ಅಮೆರಿಕದ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಹಾಗೂ ಗುಪ್ತಚರ ಅಧಿಕಾರಿಯೊಬ್ಬರು ಭಾರತಕ್ಕೆ ಭೇಟಿ ನೀಡಿದ್ದರು. ಆ ಗುಪ್ತಚರ ಅಧಿಕಾರಿ ಹವಾನಾ ಸಿಂಡ್ರೋಮ್ ಲಕ್ಷಣಗಳನ್ನು ಹೊಂದಿದ್ದರು ಎಂದು ಹೇಳಲಾಗಿತ್ತು. ಆದರೆ, ರಕ್ಷಣಾ ಇಲಾಖೆ ಮೂಲಗಳು ಅದನ್ನು ನಿರಾಕರಿಸಿದ್ದವು. ಅಲ್ಲದೆ, ಭಾರತದಲ್ಲಿ ಹವಾನಾ ಸಿಂಡ್ರೋಮ್​ ಲಕ್ಷಣಗಳು ಅಥವಾ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ