ಕಬ್ಬು ಬೆಳೆಗಾರರಿಗಾಗಿ ಕೇಂದ್ರ ಮಾಡಿದ್ದೇನು? ದಾಖಲೆ ಸಮೇತ ಸಿಎಂ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ತಿರುಗೇಟು
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವಧಿಯಲ್ಲಿ FRP ಹೆಚ್ಚಳ, ಎಥೆನಾಲ್ ಉತ್ಪಾದನೆಗೆ ಉತ್ತೇಜನ ಹಾಗೂ ಸಕ್ಕರೆ ರಫ್ತಿನಿಂದ ರೈತರಿಗೆ ಲಾಭವಾಗಿದೆ ಎಂಬುದನ್ನು ಒತ್ತಿಹೇಳಿದ ಅವರು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ದಾಖಲೆಗಳ ಸಮೇತ ಉತ್ತರ ನೀಡಿದ್ದಾರೆ.

ನವದೆಹಲಿ, ನವೆಂಬರ್ 8: ರೈತರ ಹಿತವನ್ನು ಕಾಪಾಡಲು, ರೈತರ ಸಬಲೀಕರಣಕ್ಕೆ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲೂ ಬದ್ಧವಾಗಿದೆ. ದೇಶದ ಕಬ್ಬು ಬೆಳೆಗಾರರಿಗೆ ಸಹಾಯ ಮಾಡಲು ಮತ್ತು ಪ್ರಯೋಜನ ಪಡೆಯಲು ವಿವಿಧ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ , ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಕರ್ನಾಟಕದಲ್ಲಿ ಕ್ವಿಂಟಲ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡಬೇಕೇಂದು ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಕಬ್ಬು ಬೆಳೆಗಾರರಿಗಾಗಿ ಕೇಂದ್ರ ಕೈಗೊಂಡಿರುವ ಕ್ರಮಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದತ್ತ ಬೆರಳು ತೋರಿಸುತ್ತಾ, ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ಪ್ರಲ್ಹಾದ್ ಜೋಶಿ ಎಕ್ಸ್ ಸಂದೇಶ
Central government under the leadership of Hon’ble PM Shri @naredramodi is always committed to the welfare of the farmers of the Nation. Various policy initiatives have been brought out to help and benefit the sugarcane farmers in the country. While the Cane arrear from Central… pic.twitter.com/6YYypNpMEZ
— Pralhad Joshi (@JoshiPralhad) November 7, 2025
ಮೋದಿ ಸರ್ಕಾರದ ಅವಧಿಯಲ್ಲಿ ಕಬ್ಬಿನ ಫೇರ್ ಅಂಡ್ ರಿಮ್ಯುನರೇಟಿವ್ ಪ್ರೈಸ್ (FRP) ಸ್ಥಿರವಾಗಿ ಹೆಚ್ಚಾಗಿದೆ. 2013-14 ರಲ್ಲಿ ಕ್ವಿಂಟಲ್‌ಗೆ 210 ರೂ. ಇದ್ದ ಎಫ್ಆರ್ಪಿ 2025-26 ರ ಸಕ್ಕರೆ ಋತುವಿನಲ್ಲಿ ಕ್ವಿಂಟಲ್‌ಗೆ 355 ರೂ.ಗೆ ಹೆಚ್ಚಳವಾಗಿದೆ. ಇದು ಎಫ್ಆರ್ಪಿ ದರದ ಬಲವಾದ ಏರಿಕೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸಿದೆ. ಎಫ್ಆರ್ಪಿಯು ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ 105 ರಿಂದ 112 ರಷ್ಟು ಲಾಭವನ್ನು ಒದಗಿಸುತ್ತದೆ, ಇದು ಲಾಭದಾಯಕತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದು ಜೋಶಿ ಉಲ್ಲೇಖಿಸಿದ್ದಾರೆ.
1966 ರ ಕಬ್ಬು (ನಿಯಂತ್ರಣ) ಆದೇಶದ ಪ್ರಕಾರ, ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸಿದ 14 ದಿನಗಳ ಒಳಗೆ ರೈತರಿಗೆ ಹಣ ಪಾವತಿಸಬೇಕು. ಇದನ್ನು ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳದ್ದು ಎಂದು ಜೋಶಿ ಹೇಳಿದ್ದಾರೆ.
ಕಬ್ಬು ಬೆಳೆಗಾರರ ಹಿತಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳೇನು?
- 2014-15ರಿಂದ 2020-21ರ ಅವಧಿಯಲ್ಲಿ 16,500 ಕೋಟಿ ರೂ. ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿದೆ. ಇದರಿಂದ ರೈತರ ಬಾಕಿ ಪಾವತಿಗೆ ಸಹಾಯವಾಗಿದೆ.
- ಹೆಚ್ಚುವರಿ ಸಕ್ಕರೆ ಉತ್ಪಾದನೆಯ ಸಮಸ್ಯೆ ನಿಭಾಯಿಸಲು, ಕಾರ್ಖಾನೆಗಳು ಹೆಚ್ಚುವರಿ ಕಬ್ಬನ್ನು ಎಥೆನಾಲ್ ತಯಾರಿಕೆಗೆ ಬಳಸಲು ಪ್ರೋತ್ಸಾಹ ನೀಡಲಾಗಿದೆ. ಕರ್ನಾಟಕದಲ್ಲಿ ಎಥೆನಾಲ್ ಹಂಚಿಕೆ 2022-23ರಲ್ಲಿ 85 ಕೋಟಿ ಲೀಟರ್ ಇಂದ 2025-26ಕ್ಕೆ 133 ಕೋಟಿ ಲೀಟರ್ಗೆ ಹೆಚ್ಚಿಸಲಾಗಿದೆ. ಈ ಉದ್ದೇಶಕ್ಕಾಗಿ 435.42 ಕೋಟಿ ರೂ. ಹಣವನ್ನು ಎಥೆನಾಲ್ ಇಂಟರೆಸ್ಟ್ ಸಬ್ವೆನ್ಶನ್ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ ಮಂಜೂರಾಗಿದೆ.
- ಎಕ್ಸ್-ಮಿಲ್ ಬೆಲೆ ಇಳಿಮುಖವಾಗಿದ್ದಾಗ ಕೇಂದ್ರ ಸರ್ಕಾರವು 10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಅನುಮತಿ ನೀಡಿತ್ತು. ಇದರಿಂದ ಕರ್ನಾಟಕದಲ್ಲಿ ಎಕ್ಸ್-ಮಿಲ್ ಬೆಲೆ ಪ್ರತಿ ಕ್ವಿಂಟಲ್‌ಗೆ 3,370 ರಿಂದ 3,930 ರೂ. ಏರಿಕೆಯಾಗಿದೆ.
ಕೇಂದ್ರದ ಈ ಕ್ರಮಗಳಿಂದ ಕರ್ನಾಟಕ ಸೇರಿ ದೇಶದಾದ್ಯಂತ ಕಬ್ಬಿನ ಬಾಕಿ ಪಾವತಿ ಸ್ಥಿತಿ ಬಹಳ ಸುಧಾರಿಸಿದೆ. 2022-23 ಮತ್ತು 2023-24 ಹಂಗಾಮಿಗೆ ಯಾವುದೇ ಬಾಕಿ ಇಲ್ಲ. 2024-25 ಹಂಗಾಮಿಗೆ ಕೇವಲ 50 ಲಕ್ಷ ರೂ. ಬಾಕಿ ಇದೆ (2025 ಸೆಪ್ಟೆಂಬರ್ 30ರವರೆಗೆ) ಎಂದು ಜೋಶಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಬ್ಬಿನ ಗಾಣಕ್ಕೆ ಸಿಲುಕಿದ ಸರ್ಕಾರ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಎಥೆನಾಲ್ ಹಾಗೂ ರಫ್ತು ನೀತಿಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯದ ಮಾರ್ಗ ದೊರೆತಿದ್ದು, ರೈತರಿಗೆ ಸಮಯಕ್ಕೆ ಪಾವತಿ ಖಚಿತವಾಗಿದೆ ಎಂದು ಜೋಶಿ ಉತ್ತರಿಸಿದ್ದಾರೆ.




