ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು, ಆಡಳಿತ ಸಿಬ್ಬಂದಿ ಇನ್ನೂ ಎಚ್ಚೆತ್ತುಕೊಂಡಂತಿಲ್ಲ. ಇತ್ತೀಚೆಗೆ ನಡೆದಿದ್ದ ಘೋರ ಆಕ್ಸಿಜನ್ ದುರಂತ ಪ್ರಕರಣದ ನಂತರ ಜಿಲ್ಲಾಡಳಿತವೂ ಇನ್ನೂ ಎಚ್ಚೆತ್ತಿಲ್ಲ. ಕಳೆದ ತಿಂಗಳು ಮೇ 2ರಂದು ನಡೆದಿದ್ದ ಅದೇ ಪ್ರಕರಣದಲ್ಲಿ ಜಿಲ್ಲಾಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ.
ಮೇ 2ರಂದು ಜಯಶಂಕರ್ (36) ಎಂಬುವವರು ಆಕ್ಸಿಜನ್ ಕೊರತೆಯಿಂದ ಕೊನೆಯುಸಿರೆಳೆದಿದ್ದರು. ಚಾಮರಾಜನಗರ ಜಿಲ್ಲಾಸ್ಪತ್ರೆ ಅಧಿಕಾರಿಗಳು ಶವವನ್ನು ರಾತ್ರೋರಾತ್ರಿ ಸಂಬಂಧಿಕರಿಗೆ ಕೊಟ್ಟು ಕೈ ತೊಳೆದುಕೊಂಡಿದ್ದರು. ಆದರೆ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಪಟ್ಟಿಯಲ್ಲಿ ಆತನ ಹೆಸರನ್ನು ದಾಖಲಿಸಿಲ್ಲ. ನಡು ರಾತ್ರಿಯೇ ಶವ ತೆಗೆದುಕೊಂಡು ಹೋಗುವಂತೆ ಆತನ ಸಂಬಂಧಿಕರಿಗೆ ಒತ್ತಡ ಹಾಕಿದ್ದಾರೆ.
2,300 ರೂಪಾಯಿ ನೀಡಿ ಆ್ಯಂಬುಲೆನ್ಸ್ ನಲ್ಲಿ ಮಧ್ಯ ರಾತ್ರಿ 1 ಗಂಟೆಗೆ ನನ್ನ ಪತಿಯ ಶವ ತೆಗೆದುಕೊಂಡು ಹೋದೆ ಎಂದು ಮೃತನ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರೂ ನಮಗೆ ಯಾವುದೇ ಪರಿಹಾರ ನೀಡಿಲ್ಲ. ನನ್ನ ಪತಿಯೇ ಕುಟುಂಬದ ಆಧಾರಸ್ತಂಭವಾಗಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅತ್ತೆ, ಮಾವ ಅವರನ್ನು ಹೇಗೆ ಸಾಕಲಿ ಎಂದು ಮೃತ ವ್ಯಕ್ತಿಯ ಪತ್ನಿ ಸಿದ್ದರಾಜಮ್ಮ ಕಣ್ಣೀರು ಹಾಕಿದ್ದಾರೆ.
ಮೇ 2 ರಂದು ರಾತ್ರಿ ಕೊಳ್ಳೇಗಾಲ ತಾಲೂಕು ಮುಡಿಗುಂಡಂ ಗ್ರಾಮದ ಜಯಶಂಕರ್ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು ಎಂದು ಅವರ ಪತ್ನಿ ಸಿದ್ದರಾಜಮ್ಮ ಅಳಲು ತೋಡಿಕೊಂಡಿದ್ದಾರೆ.
(Chamarajanagar oxygen shortage incident one more person allegedly died of the same cause but no relief for his family)
ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಜನರಲ್ಲ, 36 ಜನ; ಹೈಕೋರ್ಟ್ಗೆ ವರದಿ ಸಲ್ಲಿಕೆ
Published On - 5:26 pm, Fri, 11 June 21