Education Guidelines: ಜುಲೈ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ
ಶಾಲಾ ಪ್ರವೇಶ, ದಾಖಲಾತಿ, ಆಂದೋಲನ, ಶಾಲಾ ಹಂತದ ವಾರ್ಷಿಕ ಕ್ರಿಯಾ ಯೋಜನೆಗೆ ಪೂರ್ವ ಸಿದ್ಧತೆಗೆ ಸೂಚನೆ ನೀಡಲಾಗಿದೆ. ಕೊರೊನಾ ಸಂದರ್ಭ ನೋಡಿಕೊಂಡು ಮುಂದಿನ ದಿನಗಳಲ್ಲಿ ಆಫ್‌ಲೈನ್ ಅಥವಾ ಆನ್‌ಲೈನ್ ತರಗತಿ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಜೂನ್ 15ರಿಂದ ಹೊಸ ಶೈಕ್ಷಣಿಕ ವರ್ಷದ ತಯಾರಿ ಆರಂಭವಾಗಲಿದ್ದು, 2021ರ ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಶಾಲಾ ಪ್ರವೇಶ, ದಾಖಲಾತಿ, ಆಂದೋಲನ, ಶಾಲಾ ಹಂತದ ವಾರ್ಷಿಕ ಕ್ರಿಯಾ ಯೋಜನೆಗೆ ಪೂರ್ವ ಸಿದ್ಧತೆಗೆ ಸೂಚನೆ ನೀಡಲಾಗಿದೆ. ಕೊರೊನಾ ಸಂದರ್ಭ ನೋಡಿಕೊಂಡು ಮುಂದಿನ ದಿನಗಳಲ್ಲಿ ಆಫ್‌ಲೈನ್ ಅಥವಾ ಆನ್‌ಲೈನ್ ತರಗತಿ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ಮಾಡುವಂತೆ ಎಲ್ಲಾ ಕಾಲೇಜುಗಳಿಗೆ ಪಿಯು ಬೋರ್ಡ್ ಸುತ್ತೋಲೆ ನೀಡಿದೆ. ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 2 ವಿಷಯಗಳಿಗೆ ಪರೀಕ್ಷೆ ನಡೆಸಲು ಬೋರ್ಡ್ ಸೂಚನೆ ನೀಡಿದೆ. ಈ ಮೊದಲು ಪ್ರಥಮ ಪಿಯುಸಿ ಪಾಸ್ ಎಂದು ಶಿಕ್ಷಣ ಸಚಿವರು ತಿಳಿಸಿದ್ದರೂ ಸಹ, ಆನ್ ಲೈನ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಪಿಯು ಬೋರ್ಡ್ 2 ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿದ್ದು, ಪಿಯು ಬೋರ್ಡ್ ವೆಬ್ಸೈಟ್ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿದೆ.
ಪ್ರಥಮ ಪಿಯುಸಿಗೆ ಆನ್ ಲೈನ್ ಪರೀಕ್ಷೆ ಹೇಗೆ?
* ಇಲಾಖೆ ವೆಬ್ ಸೈಟ್ ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳೇ ಡೌನ್ ಲೋಡ್ ಮಾಡಿಕೊಳ್ಳಬೇಕು
* ಪ್ರಶ್ನೆಗಳಿಗೆ ಉತ್ತರ ಬರೆದು ವಾಟ್ಸ್ ಅಪ್, ಇ–ಮೇಲ್, ಅಂಚೆ ಮೂಲಕ ರವಾನಿಸಬೇಕು
* ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಉತ್ತರ ಪತ್ರಿಕೆಯನ್ನು ಕಳುಹಿಸಬೇಕು.
* ಉಪನ್ಯಾಸಕರು ಮೌಲ್ಯಮಾಪನ ಮಾಡಬೇಕು.
* ಮೌಲ್ಯಮಾಪನದ ಬಳಿಕ ಉಪನ್ಯಾಸಕರು SATs (ಸ್ಟೂಡೆಂಟ್ಸ್ ಅಚಿವ್ ಮೆಂಟ್ ಟ್ರಾಕಿಂಗ್ ಸಿಸ್ಟಂ) ಮೂಲಕ ಫಲಿತಾಂಶ ಅಪ್ಲೋಡ್ ಮಾಡಬೇಕು.
* ಅಸಿಸ್ಮೆಂಟ್ ಲೆಕ್ಕಾಚಾರದಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧಾರ ಕೈಗೊಂಡಿದೆ.
ಮೊದಲ ಅಸಿಸ್ಮೆಂಟ್ ಜೂ.20 ಕೊನೆಯ ದಿನವಾಗಿದ್ದು, ಉಪನ್ಯಾಸಕರು ಜೂ.25ರೊಳಗೆ ಮೌಲ್ಯಮಾಪನ ಮಾಡಿರಬೇಕು. ಅದೇ ರೀತಿ ಎರಡನೇ ಅಸಿಸ್ಮೆಂಟ್ ಜೂನ್ 26 ರಿಂದ ಜುಲೈ 5ರ ಒಳಗೆ ನಡೆಸಬೇಕು.
ಉಪನ್ಯಾಸಕರು ಜುಲೈ 10ರೊಳಗೆ ಮೌಲ್ಯಮಾಪನ ಮಾಡಿರಬೇಕು. 2 ಪತ್ರಿಕೆಗಳ ಅಂಕವನ್ನು ಸಮೀಕರಣ ಮಾಡಿ ಜುಲೈ 15 ರೊಳಗೆ ಮುಗಿಸಿ, ಜುಲೈ 20ರೊಳಗೆ ಸ್ಯಾಟ್ಸ್ ನಲ್ಲಿ ಅಪ್ಲೋಡ್ ಮಾಡಿರಬೇಕು. ಎರಡೂ ಪರೀಕ್ಷೆಗಳ ಅಂಕವನ್ನು ಜುಲೈ 20ರೊಳಗೆ ಅಪ್ಲೋಡ್ ಮಾಡಲು ಡೆಡ್ ಲೈನ್ ವಿಧಿಸಲಾಗಿದೆ.
ಮೌಲ್ಯಮಾಪನ ಪ್ರಕ್ರಿಯೆ ಹೇಗೆ ಮಾಡ್ಬೇಕು? ವಿದ್ಯಾರ್ಥಿಗಳಿಗೆ ಪ್ರತೀ ವಿಷಯದಲ್ಲಿ ಕನಿಷ್ಠ 35 ಅಂಕ ಕಡ್ಡಾಯವಾಗಿ ನೀಡಬೇಕು. ಪ್ರತಿ ಪತ್ರಿಕೆಗೆ 30 ರಂತೆ 2 ಪತ್ರಿಕೆಗೆ 60 ಅಂಕ ನೀಡಬೇಕು. 5 ಅಂಕವನ್ನ ಉಪನ್ಯಾಸಕರು ಆಂತರಿಕ ಅಂಕವೆಂದು ನೀಡಬೇಕು. ಪ್ರಯೋಗ ಸಹಿತಿ ವಿಷಯಗಳಿಗೆ ಪ್ರತ್ಯೇಕ ಅಂಕ ನೀಡಬೇಕಿದೆ. ಈ ಹಿಂದೆ ನಡೆಸಿದ ಪ್ರಾಯೋಗಿಕ ತರಗತಿಗಳ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಅಂಕ ನೀಡಬೇಕು ಎಂದು ರಾಜ್ಯದ ಎಲ್ಲ ಪಿಯು ಕಾಲೇಜುಗಳಿಗೆ ಪಿಯು ಬೋರ್ಡ್ ನಿಂದ ಸುತ್ತೋಲೆ ನೀಡಲಾಗಿದೆ.
ಇದನ್ನೂ ಓದಿ: ಭಾರತದ ಮೂಲಕ ಕೆನಡಾಕ್ಕೆ ಅಕ್ರಮವಾಗಿ ತೆರಳುತ್ತಿದ್ದ ಶ್ರೀಲಂಕಾ ಪ್ರಜೆಗಳ ಬಂಧನ; ಮಾನವ ಕಳ್ಳಸಾಗಣೆ ಜಾಲ ಪತ್ತೆಹಚ್ಚಿದ ಮಂಗಳೂರು ಪೊಲೀಸರು ಹಣಕಾಸಿನ ಇತಿಮಿತಿ ನೋಡಿಕೊಂಡು ಕೊವಿಡ್ಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರದ ಕುರಿತು ನಿರ್ಧರಿಸುವೆ: ಸಿಎಂ ಯಡಿಯೂರಪ್ಪ
(Karnataka Education Guidelines New education academic year begins by July 1)