ಚಾಮರಾಜನಗರ: ಹನೂರು(Hanur) ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಅಂಬರೀಶ್(27) ಎಂಬಾತ ಅಪಘಾತದಲ್ಲಿ ಗಂಭೀರ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಹೌದು ಮೃತ ಯುವಕ ಅಂಬರೀಶ್ ತನ್ನ ಸಾವಿನ ನಂತರ ನೇತ್ರದಾನ ಮಾಡಬೇಕೆಂಬ ಆಸೆಯನ್ನ ಹೊಂದಿದ್ದನಂತೆ. ಇದೀಗ ಯುವಕನ ಆಸೆಯಂತೆ ಆತನ ಕುಟುಂಬಸ್ಥರು ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇನ್ನು ಕಳೆದ ತಿಂಗಳ ಜೂ.5 ರಂದು ಬೆಂಗಳೂರಿನ ರಾಜಾಜಿನಗರದ ನಿವಾಸಿ ಫರ್ದೀನ್ ಖಾನ್ (23)ಎಂಬುವವರ ಮೆದುಳು ನಿಷ್ಕ್ರಯಗೊಂಡಿತ್ತು. ಬಳಿಕ ಅವರ ಕುಟುಂಬದವರು ಅಂಗಾಂಗಳನ್ನು ದಾನ ಮಾಡುವ ಮೂಲಕ ಫರ್ದೀನ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಫರ್ದೀನ್ ಇತ್ತೀಚೆಗೆ ಕುಟುಂಬದೊಂದಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತವಾಗಿತ್ತು. ಬಲವಾಗಿ ಪಟ್ಟು ಬಿದ್ದಿದ್ದರಿಂದ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿತ್ತು. ಬಳಿಕ ಅವರನ್ನ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಜೂ.11ರಂದು ಮೆದುಳು ನಿಷ್ಕ್ರೀಯಗೊಂಡಿದೆ ಎಂದು ವೈದ್ಯರು ಘೋಷಿಸಿದರು. ಇದಾದ ಬಳಿಕ ಅಂಗಾಂಗಳನ್ನು ದಾನ ಮಾಡಿದ್ದರು.
ಇದನ್ನೂ ಓದಿ:ಸದನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತ ಸಂಬಂಧ ಚರ್ಚೆ; ಪರಿಸ್ಥಿತಿ ವಿವರಿಸಿದ ಗೃಹ ಸಚಿವ ಪರಮೇಶ್ವರ್
ಆ ಮೂಲಕ 6 ಜನರಿಗೆ ಮರು ಜನ್ಮ ನೀಡಿದ್ದರು. ಸ್ಪರ್ಶ ಆಸ್ಪತ್ರೆಯಲ್ಲಿ ಫರ್ದೀನ್ ಅವರ ಬಲ ಮೂತ್ರಪಿಂಡ ಮತ್ತು ಯಕೃತ್ತನ್ನು ಯಶಸ್ವಿಯಾಗಿ ರೋಗಿಗಳಿಗೆ ಕಸಿ ಮಾಡಲಾಗಿತ್ತು. ಬಳಿಕ ಅವರ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಗಿತ್ತು, ಅವರ ಎಡ ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಇನ್ನು ಘಟನೆ ಕುರಿತು ಸ್ಪರ್ಶ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಗ ಅವರು ಈ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಅಂಗಾಂಗ ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಮರು ಜನ್ಮ ನೀಡಿದಂತಾಗುತ್ತದೆ ಎಂದು ಹೇಳಿದ್ದರು.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ