ಚಾಮರಾಜನಗರ, ಅ.07: ಬರಗಾಲದ ಎಫೆಕ್ಟ್ ಕೇವಲ ಊರು ಕೇರಿಗಳಿಗಷ್ಟೇ ಸೀಮಿತವಾಗಿಲ್ಲ, ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೂ ಈಗ ಬರದ ಎಫೆಕ್ಟ್ ತಟ್ಟಿದೆ. ಮಳೆ ಆಗದೆ ಹೋದರೆ, ಇನ್ನೆರೆಡು ತಿಂಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದಿಲ್ಲವೆಂಬ ಸ್ಪೋಟಕ ಸತ್ಯ ಈಗ ಆಚೆ ಬಂದಿದೆ. ಹೌದು, ಚಾಮರಾಜನಗರ(Chamarajanagar)ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್(Bandipur Tiger Reserve Forest), ಭೀಕರ ಜಲಕ್ಷಾಮಕ್ಕೆ ಸಿಲುಕುತ್ತಾ ಎಂಬ ಆತಂಕವೀಗ ಎಲ್ಲರಲ್ಲಿ ಎದುರಾಗಿದೆ. ಅದಕ್ಕೆ ಕಾರಣ ಕಾಡಿನಲ್ಲಿರುವ 450 ಕೆರೆಗಳ ಪೈಕಿ 150 ಕ್ಕೂ ಹೆಚ್ಚು ಕೆರೆಗಳ ನೀರು ಭಾಗಶಃ ಖಾಲಿಯಾಗಿದೆ.
ಇಲ್ಲಿನ ಪ್ರಾಣಿ-ಪಕ್ಷಿಗಳು, ವನ್ಯ ಮೃಗಗಳು ಎಲ್ಲವು ಕುಡಿಯುವ ನೀರಿಗಾಗಿ ಈ 450 ಕೆರೆಗಳನ್ನೇ ಆಶ್ರಯಿಸಿಕೊಂಡಿದೆ. ಈ ಪೈಕಿ ಭಾಗಶಃ 150 ಕೆರೆಗಳ ನೀರು ಖಾಲಿಯಾಗಿರುವುದು, ಇದೀಗ ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಈಗ ಕೇವಲ ಸೋಲಾರ್ ಪಂಪ್ ಸೆಟ್ಗಳಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದ್ರೆ, ಇದು ಕೇವಲ 2 ತಿಂಗಳಿಗಷ್ಟೇ ಸಾದ್ಯವೆಂದು ಬಲ್ಲ ಮೂಲಗಳು ಹೇಳುತ್ತಿದೆ. ಒಂದು ವೇಳೆ ಈ ಎರಡು ತಿಂಗಳಲ್ಲಿ ಮಳೆ ಆಗದೆ ಹೋದ್ರೆ, ವನ್ಯ ಮೃಗಗಳೆಲ್ಲ ಆಹಾರ ನೀರು ಅರಸಿ ನಾಡಿಗೆ ಲಗ್ಗೆ ಇಡುವ ಸಾಧ್ಯತೆಯನ್ನು ತಳ್ಳುಹಾಕುವಂತಿಲ್ಲ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಭೀಕರ ಬರಗಾಲ: ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಸೈಲೆಂಟ್ ಆದ ಸರ್ಕಾರ, ಆಕ್ರೋಶಗೊಂಡ ರೈತರು
ಮೊದಲೇ ಅತಿ ಹೆಚ್ಚು ಮಾನವ ಹಾಗೂ ಕಾಡುಪ್ರಾಣಿಗಳ ಸಂಘರ್ಷಕ್ಕೆ ಕಾರಣವಾದ ಜಿಲ್ಲೆ ಎಂಬ ಅಪಖ್ಯಾತಿ ಬೇರೆ ಚಾಮರಾಜನಗರಕ್ಕೆ ಇದ್ದು, ಒಂದು ವೇಳೆ ಮಳೆ ಆಗದೆ ಹೋದರೆ, ಈ ಸಂಘರ್ಷ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ಬೋರ್ವೆಲ್ಗಳ ನೀರನ್ನೇ ಹೆಚ್ಚು ಬಿಡುವ ಯೋಚನೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಸಹ ಯೋಚಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ