ಭೀಕರ ಬರಗಾಲ ಮಧ್ಯೆ ಜಾನುವಾರುಗಳಿಗೆ ‘ಚರ್ಮಗಂಟು’ ಕಾಟ: ಕಂಗಾಲಾದ ಚಿಕ್ಕೋಡಿ ರೈತರು

Lumpy Skin Disease: ಕಳೆದ ವರ್ಷ ಬೆಳಗಾವಿ ಜಿಲ್ಲೆಯ ಗಡಿ ತಾಲೂಕು ಕೇರೂರು ಗ್ರಾಮವೊಂದರಲ್ಲೇ ಚರ್ಮಗಂಟು ರೋಗದಿಂದ 70 ಜಾನುವಾರುಗಳು ಮೃತಪಟ್ಟಿದ್ದವು. ಸದ್ಯ ಮತ್ತೆ ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದ ಹಿನ್ನೆಲೆ ರೈತರಲ್ಲಿ ಆತಂಕ ಶುರುವಾಗಿದೆ. ಚರ್ಮಗಂಟು ರೋಗದಿಂದ ಜಾನುವಾರು ಮೃತಪಟ್ಟರೇ ಮರಣೋತ್ತರ ಪರೀಕ್ಷೆ ಮಾಡಿಸಿದರೆ ಮಾತ್ರ ಸರ್ಕಾರದ ವತಿಯಿಂದ ಪರಿಹಾರ ಸಿಗುತ್ತದೆ.

ಭೀಕರ ಬರಗಾಲ ಮಧ್ಯೆ ಜಾನುವಾರುಗಳಿಗೆ 'ಚರ್ಮಗಂಟು' ಕಾಟ: ಕಂಗಾಲಾದ ಚಿಕ್ಕೋಡಿ ರೈತರು
ಚರ್ಮಗಂಟು ರೋಗ (ಸಂಗ್ರಹ ಚಿತ್ರ)
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 24, 2023 | 3:02 PM

ಚಿಕ್ಕೋಡಿ, ಸೆಪ್ಟೆಂಬರ್​​ 24: ಕಳೆದ ವರ್ಷ ಜಾನುವಾರುಗಳಿಗೆ ಬಿಟ್ಟು ಬಿಡದೇ ಕಾಡಿದ್ದ ಚರ್ಮಗಂಟು ರೋಗ (Lumpy Skin Disease) ಇದೀಗ ಮತ್ತೆ ಕಾಣಿಸಿಕೊಂಡಿದೆ. ಬೆಳಗಾವಿ ಜಿಲ್ಲೆಯ ಗಡಿ ತಾಲೂಕುಗಳ ರೈತರ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಕೇರೂರು ಗ್ರಾಮವೊಂದರಲ್ಲೇ ಎಮ್ಮೆ, ಹೋರಿ, ಆಕಳುಗಳು ಸೇರಿದಂತೆ ಆರು ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿದೆ. ಕಳೆದ ವರ್ಷ ಕೇರೂರು ಗ್ರಾಮವೊಂದರಲ್ಲೇ ಚರ್ಮಗಂಟು ರೋಗದಿಂದ 70 ಜಾನುವಾರುಗಳು ಮೃತಪಟ್ಟಿದ್ದವು. ಸದ್ಯ ಮತ್ತೆ ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದ ಹಿನ್ನೆಲೆ ರೈತರಲ್ಲಿ ಆತಂಕ ಶುರುವಾಗಿದೆ.

ಚರ್ಮಗಂಟು ರೋಗದ ಬಗ್ಗೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಎಸ್.ಘಂಟಿ ಹೇಳಿಕೆ ನೀಡಿದ್ದು, ಕಳೆದ ವರ್ಷ ಚರ್ಮಗಂಟು ರೋಗ ಹೆಚ್ಚಿತ್ತು, ಲಸಿಕೆ ನೀಡಿದ ಬಳಿಕ ಈಗ ಕಡಿಮೆಯಾಗಿದೆ. ಜಾನುವಾರುಗಳಿಗೆ ಗೋಟ್‌ಫಾಕ್ಸ್ ಲಸಿಕೆ ನೀಡಲಾಗುತ್ತಿದೆ. ರೈತರ ಮನೆಗೆ ಭೇಟಿ ನೀಡಿ ಚರ್ಮಗಂಟು ರೋಗ ಬಂದ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಕಳೆದ ವರ್ಷ ಚರ್ಮಗಂಟು ರೋಗದಿಂದ ಕೇರೂರಲ್ಲಿ 70 ಜಾನುವಾರು ಮೃತಪಟ್ಟಿದ್ದವು. ಈಗ ಚರ್ಮಗಂಟು ರೋಗದಿಂದ ಜಾನುವಾರು ಮೃತಪಟ್ಟರೇ ಮರಣೋತ್ತರ ಪರೀಕ್ಷೆ ಮಾಡಿಸಿದರೆ ಮಾತ್ರ ಸರ್ಕಾರದ ವತಿಯಿಂದ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಚರ್ಮಗಂಟು ರೋಗ ಜಾನುವಾರುಗಳಿಂದ ಜಾನುವಾರುಗಳಿಗೆ ವ್ಯಾಪಿಸುವ ಸಾಂಕ್ರಾಮಿಕ ರೋಗ. ಉಣ್ಣೆ, ಸೊಳ್ಳೆಯಂತ ಹೊರ ಪರಾವಲಂಬಿ ಜೀವಿಗಳು ಜಾನುವಾರುಗಳ ಬಳಿ ಬರದಂತೆ ತಡೆಯಬೇಕು. ಅದಕ್ಕಾಗಿ ಪಶು ಆಸ್ಪತ್ರೆಯಿಂದ ಔಷಧಿ ನೀಡಲಾಗುತ್ತಿದೆ ಹಾಗೂ ಲಸಿಕೆಯನ್ನು ಸಹ ನೀಡಲಾಗುತ್ತಿದೆ ಎಂದರು.

ಟಿವಿ9 ಬಳಿ ಅಳಲು ತೋಡಿಕೊಂಡ ರೈತ ಮಹಿಳೆ 

ಕಳೆದ ಒಂದು ತಿಂಗಳ ಅಂತರದಲ್ಲಿ ಕೇರೂರು ಗ್ರಾಮದ ರೈತ ಮಹಿಳೆ ಸರಸ್ವತಿ ಭೋಸಲೆಗೆ ಸೇರಿದ ಎಮ್ಮೆ, ನಾಲ್ಕು ಮೇಕೆಗಳು ಮೃತಪಟ್ಟಿವೆ. ಸದ್ಯ ಮನೆಯಲ್ಲಿದ್ದ ಹೋರಿಗೂ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡುವಂತೆ ಸರಸ್ವತಿ ಭೋಸಲೆ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಕಮೀಷನರ್ ಆದೇಶಕ್ಕೂ ಡೋಂಟ್ ಕೇರ್, ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು

ಹೋರಿಗೆ ಚರ್ಮಗಂಟು ರೋಗ ಬಂದಿದ್ದು ಮೈಯೆಲ್ಲಾ ಗಂಟು ಎದ್ದಿದೆ. ಕಳೆದ ವಾರ ಇದ್ದಕ್ಕಿದ್ದಂತೆ ಎಮ್ಮೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ಮಾಡಿಸದೇ ಅಂತ್ಯಸಂಸ್ಕಾರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಿಸಿದರೆ ಮಾತ್ರ ಪರಿಹಾರ ನೀಡುತ್ತಾರಂತೆ. ಮಳೆ ಇಲ್ಲದೇ ಬರಗಾಲ ಇದ್ದು ಬೆಳೆಯೂ ಬಂದಿಲ್ಲ. ಜಾನುವಾರುಗಳ ನರಕಯಾತನೆ ನೋಡಿ ನಮಗೂ ಕಷ್ಟವಾಗುತ್ತಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Sun, 24 September 23