ಬೆಳಗಾವಿ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ: ರೈತನ ಪಾಲಿಗೆ ಕಹಿಯಾದ ಸಿಹಿ ಗೆಣಸು
ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು ಕಷ್ಟಪುಟ್ಟು ಬೆಳೆದ ಬೆಳೆ ಕೈ ಕೊಟ್ಟಿದೆ. ಅದರಲ್ಲೂ ಈ ಬಾರಿ ಗೆಣಸು ಸಿಹಿಯಾಗುತ್ತೆ ಅಂದುಕೊಂಡಿದ್ದ ರೈತರಿಗೆ ಕಹಿಯಾಗಿ ಪರಿಣಮಿಸಿದೆ. ಅಷ್ಟಕ್ಕೂ ಬೆಳಗಾವಿ ಜಿಲ್ಲೆಯಲ್ಲಿ ಹೇಗಿದೆ ಬರದ ಪರಿಸ್ಥಿತಿ? ಅದೆಷ್ಟೂ ಪ್ರಮಾಣದಲ್ಲಿ ಗೆಣಸು ಬೆಳೆ ಹಾನಿಯಾಗಿದೆ? ಕೃಷಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ಯಾಕೆ? ಇಲ್ಲಿದೆ ಮಾಹಿತಿ
ಬೆಳಗಾವಿ, ಸೆ.23: ಜಿಲ್ಲೆಯಲ್ಲಿ ಸರಿಯಾಗಿ ಮಳೆ ಬಾರದ ಪರಿಣಾಮ ರೈತರಿಗೆ ಬರಗಾಲದ (Drought) ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ರೈತ ರವಿ ಪಾಟೀಲ್ ಎಂಬುವವರು ಎಕರೆಗೆ ಸುಮಾರು ಐವತ್ತು ಸಾವಿರ ಖರ್ಚು ಮಾಡಿ ಕಷ್ಟಪಟ್ಟು ಸಿಹಿ ಗೆಣಸು (Sweet Potato) ಬೆಳೆ ಬೆಳೆದಿದ್ದರು. ಸಕಾಲಕ್ಕೆ ಮಳೆಯಾಗಬಹುದು, ತಮ್ಮ ಬದುಕು ಸಿಹಿಯಾಗುತ್ತದೆ ಅನ್ನೋ ಕನಸು ಕಂಡಿದ್ದರು. ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಬೆಳೆಯೂ ಚಿಗುರೊಡೆದು ಬಳ್ಳಿ ಜಮೀನಿನ ತುಂಬ ಹಬ್ಬಿತ್ತು.
ಇನ್ನೇನೂ ಫಸಲು ಕೈಗೆ ಬರುತ್ತೆ ಎಂದು ನಿರೀಕ್ಷಿಸಿದಾಗ ಮಳೆರಾಯ ಕೈ ಕೊಟ್ಟು ಇರುವ ಬೆಳೆಯೂ ಹಾಳಾಗಿದೆ. ಮೇಲ್ಭಾಗದಲ್ಲಿ ಹಸಿರಿದರೂ ಒಳಗಡೆ ಗೆಣಸಿನ ಗಡ್ಡೆಯೇ ಬೆಳೆಯದೇ ಇಡೀ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಮೂರು ಎಕರೆ ಪ್ರದೇಶದಲ್ಲಿ ಗೆಣಸು ಬೆಳೆದು ರೈತ ರವಿ ಪಾಟೀಲ್ ಕೈ ಸುಟ್ಟುಕೊಂಡಿದ್ದಾರೆ.
ಯಳ್ಳೂರ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೆಣಸು ಹಾಳಾಗಿದ್ದು ಆ ಎಲ್ಲ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದತ್ತ ಮುಖ ಮಾಡಿ ಪರಿಹಾರಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಬರಗಾಲಕ್ಕೆ ಕಂಗಲಾದ ಚಿಕ್ಕಬಳ್ಳಾಪುರ; ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ
ಬೆಳೆ ಕೈಕೊಟ್ಟಿದ್ದರ ನಡುವೆ ಬರ ಪೀಡಿತ ಪ್ರದೇಶದ ಪಟ್ಟಿಯಿಂದ ಬೆಳಗಾವಿ ತಾಲೂಕು ಕೈ ಬಿಟ್ಟಿದ್ದಕ್ಕೆ ಇನ್ನಷ್ಟು ರೈತರು ಪರಿತಪ್ಪಿಸುವಂತಾಗಿದೆ. ಈ ಕುರಿತು ಆಕ್ರೋಶ ಹೊರ ಹಾಕಿದ ರೈತ ರವಿ, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಇತ್ತ ಕೃಷಿ ಸಚಿವರು ಬೆಂಗಳೂರು ಬಿಟ್ಟು ಜಿಲ್ಲೆಯಲ್ಲಿ ಸಂಚಾರ ಮಾಡಿ ಬೆಳೆ ಹಾನಿ ಕುರಿತು ಅಧ್ಯಯನ ಮಾಡಲಿ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಮತ್ತು ಸ್ಥಳೀಯ ಶಾಸಕಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಮೀನಿಗೆ ಬಂದು ನಿಜ ಸ್ಥಿತಿ ತಿಳಿದುಕೊಳ್ಳಲಿ ಅಂತಾ ಸಚಿವರು ಮತ್ತು ಸರ್ಕಾರದ ವಿರುದ್ದ ರೈತ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ, ಬರ ಪೀಡಿತ ಪಟ್ಟಿಗೆ ಬೆಳಗಾವಿ ಖಾನಾಪುರ ತಾಲೂಕು ಸೇರಿಸಬೇಕು ಜತೆಗೆ ಶೀಘ್ರದಲ್ಲಿ ಪರಿಹಾರ ಬಿಡುಗಡೆ ಮಾಡಬೇಕು ಅಂತಾ ಒತ್ತಾಯಿಸಿ ಸೋಮವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕೂಡ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಏಳು ನದಿಗಳು ಹರಿಯುತ್ತಿದರೂ ಈ ಬಾರಿ ಸರಿಯಾಗಿ ಮಳೆ ಆಗದ ಹಿನ್ನೆಲೆ ಬೆಳೆ ಕೈಕೊಟ್ಟು ಸಾಕಷ್ಟು ರೈತರು ಕಂಗಾಲಾಗಿದ್ದಾರೆ. ಇತ್ತ ಬೆಳಗಾವಿ ಮತ್ತು ಖಾನಾಪುರ ತಾಲೂಕನ್ನ ಬರ ಪೀಡಿತ ಪಟ್ಟಿಯಿಂದ ಬಿಟ್ಟಿದ್ದಕ್ಕೆ ರೈತರು ಆಕ್ರೋಶಗೊಂಡು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇನ್ನೂ ಗೆಣಸು ಬೆಳೆದ ರೈತನಿಗೆ ಕಹಿ ಎದುರಾಗಿದ್ದು ಸರ್ಕಾರ ಆದಷ್ಟು ಬೇಗ ಪರಿಹಾರ ಘೋಷಣೆ ಮಾಡಿ ರೈತರಿಗೆ ಮುಟ್ಟಿಸುವ ಕೆಲಸ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ