ಚಾಮರಾಜನಗರ, ಅಕ್ಟೋಬರ್ 26: ರೈತರ ಪಾಲಿಗೆ ಕಲ್ಪವೃಕ್ಷ (Coconut Tree) ದೊಡ್ಡ ಆದಾಯ ಮೂಲವಾಗಿ ಹೊರ ಹೊಮ್ಮಿದೆ. ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆಯೇ ತೆಂಗಿಯ ಕಾಯಿ ಚಿಪ್ಪುಗಳಿಗೆ (Coconut shell) ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ತೆಂಗಿನ ಕಾಯಿ ಖಾಲಿ ಚಿಪ್ಪುಗಳು ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿದೆ. ಈ ಚಿಪ್ಪನ್ನು ಖರೀದಿಸಿ ಏನನ್ನು ತಯಾರಿಸುತ್ತಾರೆ? ತೆಂಗಿನ ಚಿಪ್ಪು ಈಗ ರೈತರ ಆದಾಯ ಮೂಲವಾಗಿದ್ದು ಹೇಗೆ ಎಂಬ ವಿವರ ಇಲ್ಲಿದೆ.
ರಾಶಿ ರಾಶಿಯಾಗಿ ಬಿದ್ದಿರುವ ತೆಂಗಿನಕಾಯಿ ಚಿಪ್ಪುಗಳು, ತೆಂಗಿನ ಖಾಲಿ ಚಿಪ್ಪುಗಳನ್ನ ಒಂದೆಡೆ ಡಂಪ್ ಮಾಡುತ್ತಿರುವ ಜನರು, ಈ ಚಿತ್ರಣ ಕಾಣಸಿಗುವುದು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ. ಸಾಮಾನ್ಯವಾಗಿ ತೆಂಗಿನ ಕಾಯಿ ಚಿಪ್ಪುಗಳನ್ನ ಬೀದಿಯಲ್ಲಿ ಬಿಸಾಡುವುದೇ ಹೆಚ್ಚು. ಅದೇ ರೀತಿ ಸೌದೆ ಒಲೆಗೂ ಸಹ ಇದನ್ನ ಬಳಸುತ್ತಾರೆ. ಆದ್ರೆ ಈ ಚಿಪ್ಪುಗಳು ಈಗ ರೈತನ ಆದಾಯ ಮೂಲವಾಗಿವೆ. ಚಿಪ್ಪುಗಳನ್ನ ನಂಜನಗೂಡು ಹಾಗೂ ಅರಸೀಕೆರೆಯ ಉದ್ಯಮಿಗಳು ಖರೀದಿಸುತ್ತಿದ್ದಾರೆ. ನಂಜನಗೂಡಿನಲ್ಲಿರುವ ಪ್ರತಿಷ್ಠಿತ ಚಾಕೋಲೆಟ್ ಕಂಪನಿಯು ಈ ತೆಂಗಿನ ಕರಟ ಖರೀದಿಸಿ ಬಾಯ್ಲರ್ ಕಾಯಲು ಬಳಸುತ್ತಿದ್ದಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ: ಪಾದಯಾತ್ರೆ ಮೂಲಕ ನಡೆದು ಬರುವ ಭಕ್ತರಿಗೆ ಶಾಕ್
2020ರಲ್ಲಿ ರೈತರು ಸರ್ಕಾರದ ಸಹಕಾರದೊಂದಿಗೆ ತೆಂಗು ಸಂಸ್ಕರಣಾ ಘಟವನ್ನ ಸ್ಥಾಪಿಸಿದ್ರು. ಆಗಿನಿಂದ ಕರಟಗಳನ್ನ ಶೇಖರಿಸಿಡಲಾಗಿತ್ತು. ಈ ಚಿಪ್ಪುಗಳನ್ನ ಹಂಗ್ರಹಿಸಿ ಕೆಜಿಗೆ 9 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದೆ. ಅರಸೀಕೆರೆ ಹಾಗೂ ನಂಜನಗೂಡಿನ ಉದ್ಯಮಿಗಳಂತೆ ರಾಜ್ಯದ ಬೇರೆ ಭಾಗಗಳಿಂದ ಕರಟಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದ್ದು, ಮತ್ತೆ ರಾಜ್ಯದ ಬೇರೆಡೆಯಲ್ಲಿ ತೆಂಗು ಸಂಸ್ಕರಣಾ ಘಟಕವನ್ನ ಸ್ಥಾಪಿಸಲು ಸರ್ಕಾರ ಯೋಚಿಸುತ್ತಿದೆ. ಈ ತೆಂಗಿನ ಚಿಪ್ಪನ್ನ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಫ್ಯಾಕ್ಟರಿಯಲ್ಲಿರುವ ಬಾಯ್ಲರ್ ಗಳಿಗೆ ಬೆಂಕಿ ಕಾಯಲು ಬಳಸಿದ್ರೆ ಇನ್ನು ಕೆಲವರು ಈ ಚಿಪ್ಪಿನಿಂದ ಇದ್ದಿಲು ಹಾಗೂ ಸೆಲ್ ಉತ್ಪಾದನೆ ಮಾಡುತ್ತಿದ್ದಾರೆ.
ಒಟ್ಟಾರೆ ತೆಂಗಿನ ಕಾಯಿಗಳ ಚಿಪ್ಪಿಗೂ ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದ್ದು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ