
ಚಾಮರಾಜನಗರ, ಡಿಸೆಂಬರ್ 17: ಚಿನ್ನದ ವ್ಯಾಪಾರಿಯನ್ನು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿ ಸುಮಾರು ಒಂದು ಕಾಲು ಕೆಜಿ ಚಿನ್ನ ದೋಚಿದ ಪ್ರಕರಣ ಚಾಮರಾಜನಗರದಲ್ಲಿ (Chamarajanagara) ನಡೆದಿತ್ತು. ಈ ವೇಳೆ ಕೇರಳದ ನಟೋರಿಯ್ ಗ್ಯಾಂಗ್ ಈ ಕೃತ್ಯವೆಸಗಿರಬಹುದೆಂಬ ಶಂಕೆ ಪೊಲೀಸರಲ್ಲಿ ಮೂಡಿತ್ತು. ಶಂಕಿತರಿಗಾಗಿ ಹುಡುಕುತ್ತಿದ್ದ ಪೊಲೀಸರ ಕೈಗೆ ಮೂವರು ಸಿಕ್ಕಿಬಿದ್ದಿದ್ದು, ತನಿಖೆ ಮುಂದುವರೆದಿದೆ.
ನವೆಂಬರ್ 20ರಂದು ಬಂಡೀಪುರದಲ್ಲಿ ಆಭರಣ ತಯಾರಕ ವಿನು ಅವರ ಕಾರನ್ನು ಅಡ್ಡಗಟ್ಟಿ, 1.3 ಕೆಜಿಗೂ ಹೆಚ್ಚು ಚಿನ್ನ ದರೋಡೆ ಮಾಡಲಾಗಿತ್ತು. ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಕಾರನ್ನು ತಡೆದ ಆರೋಪಿಗಳು ಚಿನ್ನದೊಂದಿಗೆ ಪರಾರಿಯಾಗಿದ್ದರು. ಘಟನೆ ಬಳಿಕ ಟೋಲ್ ಪ್ಲಾಸಾ ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು, ಚಿನ್ನದ ವ್ಯಾಪಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಕೇರಳ ಗ್ಯಾಂಗ್ ಈ ಕೃತ್ಯವೆಸಗಿದ್ದು ತಿಳಿದುಬಂದಿದೆ. ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ ಚಾಮರಾಜನಗರದಲ್ಲಿ ಮತ್ತೆ ಆಕ್ಟೀವ್ ಆಯ್ತಾ ನಟೋರಿಯಸ್ ಕೇರಳಿಯನ್ ಗ್ಯಾಂಗ್?; ಕೆಜಿಗಟ್ಟಲೆ ಚಿನ್ನ ದರೋಡೆ
ಕಾರು ಚಾಲಕ ಸಮೀರ್ ಹಾಗೂ ವಿನು, ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಎಂಬಾತನಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಖರೀದಿಸಿ ಬಂಡೀಪುರದ ಮೂಲೆಹೊಳೆ ಮೂಲಕ ತೆರಳುತ್ತಿದ್ದರು. ಇದೇ ಸಮಯದಲ್ಲಿ ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ವಾಹನದಲ್ಲಿ ಮದ್ದೂರು ಚೆಕ್‌ಪೋಸ್ಟ್ ಬಳಿ ಕಾರು ಚೇಸ್ ಮಾಡಿಕೊಂಡು ಬಂದ ದರೋಡೆಕೋರರು, ನೆಟ್‌ವರ್ಕ್ ಸಿಗದ ಕಾಡಿನ ಮಧ್ಯೆ ಕಾರಿಗೆ ಡಿಕ್ಕಿ ಹೊಡೆದಿದ್ದರು. ಬಳಿಕ ಕಬ್ಬಿಣದ ರಾಡ್‌ನಿಂದ ವಿನು ಮೇಲೆ ಹಲ್ಲೆ ನಡೆಸಿ, ಅವರ ಬಳಿ ಇದ್ದ ಸುಮಾರು 1,400 ಗ್ರಾಂ ಚಿನ್ನದ ಗಟ್ಟಿಯನ್ನು ದೋಚಿಕೊಂಡು ಪರಾರಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.