ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧ ವಾಪಸ್

| Updated By: Ganapathi Sharma

Updated on: Feb 17, 2024 | 2:27 PM

Himavad Gopalaswamy Temple: ಪ್ರಸಿದ್ಧ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಅಲ್ಲಿನ ದೇಗುಲಕ್ಕೆ ತೆರಳುವ ಭಕ್ತರು ಹಾಗೂ ಪ್ರವಾಸಿಗರನ್ನು ಗುಂಡ್ಲುಪೇಟೆ ತಾಲೂಕು ಆಡಳಿತ ನಿರಾಳರನ್ನಾಗಿಸಿದೆ. ಮಧ್ಯಾಹ್ನ ನಂತರ 3 ಗಂಟೆಯ ಬಳಿಕ ಬಸ್ ಸಂಚಾರಕ್ಕೆ ನಿಷೇಧ ಹೇರಿ ಹೊರಡಿಸಿದ್ದ ಆದೇಶವನ್ನು ಒಂದೇ ದಿನದಲ್ಲಿ ಹಿಂಪಡೆದಿದೆ. ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಮಣಿದು ಆಡಳಿತ ಈ ನಿರ್ಧಾರ ಕೈಗೊಂಡಿದೆ.

ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧ ವಾಪಸ್
ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ
Follow us on

ಚಾಮರಾಜನಗರ, ಫೆಬ್ರವರಿ 17: ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (Himavad Gopalaswamy Temple) ಬಸ್ ಸಂಚಾರವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲಾಗಿದೆ. ಸಂಚಾರ ನಿಷೇಧ ಆದೇಶವನ್ನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತಹಶೀಲ್ದಾರ್ ಹಿಂಪಡೆದಿದ್ದಾರೆ. ಹೀಗಾಗಿ ಬಂಡೀಪುರ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್​ ಸಂಚಾರ ಯಥಾಸ್ಥಿತಿಯಂತೆ ಮುಂದುವರಿಯಲಿದೆ.

ವನ್ಯಜೀವಿಗಳಿಗೆ ತೊಂದರೆ, ಪ್ರವಾಸಿಗರಿಗೆ ಅಪಾಯದ ಕಾರಣವೊಡ್ಡಿ ಮಧ್ಯಾಹ್ನ 3 ಗಂಟೆ ಬಳಿಕ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು, ಪ್ರವಾಸಿಗರು ಹಾಗೂ ಭಕ್ತರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.

ವಿರೋಧದ ಕಾರಣ ಒಂದೇ ದಿನಕ್ಕೆ ನಿಷೇಧವನ್ನು ತಹಶೀಲ್ದಾರ್ ರಮೇಶ್‌ಬಾಬು ಹಿಂಪಡೆದಿದ್ದಾರೆ. ಇದೀಗ ನಿಷೇಧ ವಾಪಸ್ ಪಡೆದಿರುವುದರಿಂದ ಸಂಜೆ 4 ಗಂಟೆವರೆಗೆ ಬಸ್ ಸಂಚಾರಕ್ಕೆ ಅವಕಾಶ ದೊರೆಯಲಿದೆ.

ಕ್ಯಾಮೆರಾ, ಡ್ರೋನ್​ ಚಿತ್ರೀಕರಣಕ್ಕಿದೆ ನಿಷೇಧ

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತ ಡ್ರೋನ್ ಮೂಲಕ ಚಿತ್ರೀಕರಣ ಮತ್ತು ಕ್ಯಾಮೆರಾ ಚಿತ್ರೀಕರಣಕ್ಕೆ ನಿಷೇಧ ಹೇರಿ ಫೆಬ್ರವರಿ 10ರಂದು ಗುಂಡ್ಲುಪೇಟೆ ತಹಸೀಲ್ದಾರ್ ಟಿ. ರಮೇಶ್‌ಬಾಬು ಆದೇಶ ಹೊರಡಿಸಿದ್ದರು. ಸಂಜೆ ವೇಳೆ ದೇವಾಲಯದ ಬಳಿ ಬರುವ ಕಾಡಾನೆಯ ಹತ್ತಿರ ತೆರಳಿ ಪ್ರವಾಸಿಗರು ಛಾಯಾಚಿತ್ರ ತೆಗೆಯುವುದು, ಸೆಲ್ಫೀ ತೆಗೆದು ಅದರ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದು ಗಮನಕ್ಕೆ ಬಂದಿತ್ತು. ಕಾಡಾನೆಯಿಂದ ಜನರಿಗೆ ಮತ್ತು ಜನರಿಂದ ಕಾಡಾನೆಗೂ ತೊಂದರೆಯಾಗಬಹುದು. ವಲಯ ಅರಣ್ಯಾಧಿಕಾರಿಯವರ ಕೋರಿಕೆ ಮೇರೆಗೆ, ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತ ಕಾಡುಪ್ರಾಣಿಗಳನ್ನು ಕ್ಯಾಮರಾ ಮತ್ತು ಡೋನ್ ಮೂಲಕ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಅವರು ಆದೇಶದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಬಂಡೀಪುರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್​ ಚಿತ್ರೀಕರಣ ನಿಷೇಧ

ಇದಾದ ಕೆಲವೇ ದಿನಗಳ ನಂತರ ಅವರು, ಸಂಜೆ 3ರ ನಂತರ ಬೆಟ್ಟಕ್ಕೆ ಬಸ್ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಹೀಗಾಗಿ ಇನ್ನು ಮುಂದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಈ ಹಿಂದಿನಂತೆ ಬೆಳಿಗ್ಗೆ 8.30 ರಿಂದ ಸಂಜೆ 4 ರವರೆಗೆ ತೆರಳಬಹುದಾಗಿದೆ.

ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟ; ಪ್ರತಿ ನಿತ್ಯ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕುತ್ತೆ ಈ ಒಂಟಿ ಸಲಗ, ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟ ಜನ

ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗವೊಂದು ಜನವರಿ ತಿಂಗಳಲ್ಲಿ ಕಾಣಿಸಿಕೊಂಡಿತ್ತು. ಅದು ಪ್ರತಿ ದಿನ ಬಂದು ದೇವಾಲಯ ಪ್ರದಕ್ಷಿಣೆ ಹಾಕುವ ಬಗ್ಗೆ ಮತ್ತು ಪ್ರವಾಸಿಗರು ಅದರ ಬಳಿ ತೆರಳಿ ಫೋಟೊ, ಸೆಲ್ಫೀ ತೆಗೆಯುವ ಬಗ್ಗೆ ವರದಿಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:26 pm, Sat, 17 February 24