ಬಂಡೀಪುರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್​ ಚಿತ್ರೀಕರಣ ನಿಷೇಧ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತ ಡ್ರೋನ್ ಮೂಲಕ ಚಿತ್ರೀಕರಣ ಮತ್ತು ಕ್ಯಾಮೆರಾ ಚಿತ್ರೀಕರಣವನ್ನು ನಿಷೇಧ ಹೇರಿ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್‌ಬಾಬು ಆದೇಶ ಹೊರಡಿಸಿದ್ದಾರೆ. ಸಂಜೆ ವೇಳೆ ದೇವಸ್ಥಾನದ ಬಳಿಕ ಕಾಡಾನೆ ಬರುತ್ತಿದೆ. ಈ ವೇಳೆ ಚಿತ್ರೀಕರಣ ಮಾಡುವುದರಿಂದ ಕಾಡಾನೆಯಿಂದ ಜನರಿಗೆ ಮತ್ತು ಜನರಿಂದ ಕಾಡಾನೆಗೂ ತೊಂದರೆಯಾಗಬಹುದು ಎಂದು ಈ ಕ್ರಮ ಕೈಗೊಳ್ಳಲಾಗಿದೆ.

ಬಂಡೀಪುರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್​ ಚಿತ್ರೀಕರಣ ನಿಷೇಧ
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್​ ಚಿತ್ರೀಕರಣ ನಿಷೇಧ
Follow us
| Updated By: ವಿವೇಕ ಬಿರಾದಾರ

Updated on: Feb 10, 2024 | 8:06 AM

ಚಾಮರಾಜನಗರ, ಫೆಬ್ರವರಿ 10: ಬಂಡೀಪುರ ಹುಲಿ ಸಂರಕ್ಷಿತ (Bandipur Tiger Reserve Forest) ವ್ಯಾಪ್ತಿಗೆ ಬರುವ, ಗುಂಡ್ಲುಪೇಟೆ (Gundlupete) ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ (Himavad Gopalaswamy Temple) ಸುತ್ತಮುತ್ತ ಡ್ರೋನ್ (Drone) ಮೂಲಕ ಚಿತ್ರೀಕರಣ ಮತ್ತು ಕ್ಯಾಮೆರಾ ಚಿತ್ರೀಕರಣವನ್ನು ನಿಷೇಧ ಹೇರಿ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್‌ಬಾಬು ಆದೇಶ ಹೊರಡಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್ ವಲಯದಲ್ಲಿ ಬರುವ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು, ಪ್ರವಾಸಿಗರು, ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಸಂಜೆ ವೇಳೆ ದೇವಾಲಯದ ಹತ್ತಿರ ಬರುವ ಕಾಡಾನೆಯ ಬಳಿ ಪ್ರವಾಸಿಗರು ತೆರಳಿ ಛಾಯಾಚಿತ್ರ ತೆಗೆಯುವುದು, ಸೆಲ್ಪಿ ತೆಗೆದು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಕಾಡಾನೆಯಿಂದ ಜನರಿಗೆ ಮತ್ತು ಜನರಿಂದ ಕಾಡಾನೆಗೂ ತೊಂದರೆಯಾಗಬಹುದು. ವಲಯ ಅರಣ್ಯಾಧಿಕಾರಿಯವರ ಕೋರಿಕೆ ಮೇರೆಗೆ, ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತ ಕಾಡುಪ್ರಾಣಿಗಳನ್ನು ಕ್ಯಾಮೆರಾ ಮತ್ತು ಡೋನ್ ಮೂಲಕ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇತಿಹಾಸ

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಚಾಮರಾಜನಗ ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ: ಬಂಡೀಪುರದಲ್ಲಿ ಚಿತ್ರ ಸೆರೆ ಹಿಡಿಯಲು ನಿಂತ ಪ್ರವಾಸಿಗರು: ಆನೆ ತುಳಿತದಿಂದ ಕೂದಲೆಳೆ ಅಂತರದಿಂದ ಪಾರಾದ ವ್ಯಕ್ತಿ

ವೇಣುಗೋಪಾಲಸ್ವಾಮಿ ದೇವಸ್ಥಾನ: 14 ನೇ ಶತಮಾನದಲ್ಲಿ ಅಗಸ್ತ್ಯ ಋಷಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ಕೃಷ್ಣ (ವೇಣುಗೋಪಾಲ ಸ್ವಾಮಿ) ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುವ ವಿಗ್ರಹವಿದೆ. ವಿಗ್ರಹದ ಹಿಂದಿನ ಫಲಕವು ಕೃಷ್ಣನ ಪತ್ನಿಯರಾದ ಸತ್ಯಭಾಮ, ರುಕ್ಮಿಣಿ ಮತ್ತು ನೆಚ್ಚಿನ ಪ್ರಾಣಿ ಹಸು ಮತ್ತು ಗೋಪಾಲಕರ ಕೆತ್ತನೆಗಳನ್ನು ಒಳಗೊಂಡಿದೆ.

ಪ್ರಕೃತಿ: ವೇಣುಗೋಪಾಲಸ್ವಾಮಿ ದೇವಾಲಯದ ಸುತ್ತಲಿನ ಪ್ರದೇಶವು ಅತ್ಯಂತ ಹಸಿರಾಗಿದ್ದು ನಯನ ಮನೋಹರವಾಗಿದೆ. ಹೆಚ್ಚಿನ ದಿನಗಳಲ್ಲಿ ದೂರದಲ್ಲಿ ಕಾಣುವ ಬಿಳಿ ಮೋಡವು ಮಂಜು ಮುಸುಕಿದ ಅನಿಸಿಕೆ ನೀಡುತ್ತದೆ. ಹಾಗಾಗಿ ಹಿಮವದ್ ಎಂಬ ಹೆಸರು ಬಂದಿದೆ.

ಸಮಯ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಳಿಗ್ಗೆ 8.30 ರಿಂದ ಸಂಜೆ 4 ರವರೆಗೆ ಪ್ರವೇಶವಿದೆ

ಹತ್ತಿರದಲ್ಲಿ ಇನ್ನೇನಿದೆ?: ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಜೊತೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನ (20 ಕಿ.ಮೀ) ಮತ್ತು ನಂಜನಗುಡು (55 ಕಿ.ಮೀ) ಭೇಟಿ ನೀಡಬಹುದಾದ ಕೆಲವು ಸ್ಥಳಗಳಾಗಿವೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸೂರ್ಯಕಾಂತಿ ತೋಟಗಳನ್ನೂ ನೋಡಬಹುದಾಗಿದೆ.

ತಲುಪುವುದು ಹೇಗೆ?

ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬೆಂಗಳೂರಿನಿಂದ 220 ಕಿ.ಮೀ ಮತ್ತು ಮೈಸೂರಿನಿಂದ 80 ಕಿ.ಮೀ ದೂರದಲ್ಲಿದೆ. ಬೆಟ್ಟದ ಬುಡದಿಂದ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ತಲುಪಲು ಸ್ಥಳೀಯ ಆಡಳಿತ ಆಯೋಜಿಸಿದ ಬಸ್ ಹತ್ತಬೇಕಾಗಿದೆ. ಬೆಟ್ಟದ ಮೇಲೆ ಖಾಸಗಿ ವಾಹನಗಳನ್ನು ಅನುಮತಿಸಲಾಗುವುದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ