ಕೈದಿಗಳಿಗೆ ಕಾರಾಗೃಹದಲ್ಲಿ ಕಂಪ್ಯೂಟರ್ ಶಿಕ್ಷಣ; ವಿನೂತನ ಪ್ರಯತ್ನಕ್ಕೆ ಮುಂದಾದ ಚಾಮರಾಜನಗರ ಜಿಲ್ಲಾ ಕಾರಾಗೃಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 16, 2023 | 7:14 PM

ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಕಾರಾಗೃಹ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡುವ ವಿನೂತನ ಯೋಜನೆಗೆ ಚಾಲನೆ ಸಿಕ್ಕಿದೆ. ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ಯಾಕೆ?, ಮೊದಲು ಚಾಮರಾಜನಗರದಲ್ಲಿ ಚಾಲನೆ ಸಿಕ್ಕಿದ್ಯಾಕೆ ಗೊತ್ತಅ? ಇಲ್ಲಿದೆ ಈ ಕುರಿತು ಸಂಪೂರ್ಣ ವಿವರ.

ಕೈದಿಗಳಿಗೆ ಕಾರಾಗೃಹದಲ್ಲಿ ಕಂಪ್ಯೂಟರ್ ಶಿಕ್ಷಣ; ವಿನೂತನ ಪ್ರಯತ್ನಕ್ಕೆ ಮುಂದಾದ ಚಾಮರಾಜನಗರ ಜಿಲ್ಲಾ ಕಾರಾಗೃಹ
ಚಾಮರಾಜನಗರದ ಕಾರಾಗೃಹದಲ್ಲಿ ಕೈದಿಗಳಿಗೆ ಕಂಪ್ಯೂಟರ್​ ತರಬೇತಿ
Follow us on

ಚಾಮರಾಜನಗರ, ನ.16: ಕತ್ತಲ ಕೂಪದಲ್ಲಿರುವ ಕೈದಿಗಳ ಬದುಕಲ್ಲೂ ಕೂಡ ಭರವಸೆಯ ಬೆಳಕು ಮೂಡಿಸುವ ಕೆಲಸಕ್ಕೆ ಚಾಮರಾಜನಗರ (Chamarajanagar) ಜಿಲ್ಲಾಡಳಿತ ಹಾಗೂ ಕಾರಾಗೃಹದ ಅಧಿಕಾರಿಗಳು ಹೊಸ ಮುನ್ನುಡಿ ಬರೆದಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ, ರಾಜ್ಯದಲ್ಲಿ ಮೊದಲ ಬಾರಿಗೆ ಕಾರಾಗೃಹದಲ್ಲಿ ಕಂಪ್ಯೂಟರ್ ಶಿಕ್ಷಣ ಕೊಡುವ ಕೆಲಸಕ್ಕೆ ನಾಂದಿ ಹಾಡಿದೆ. ಚಾಮರಾಜನಗರದ ಉಪ ಕಾರಾಗೃಹದಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿದೆ.

ಈ ಕುರಿತು ಮಾತನಾಡಿದ ಕಾರಾಗೃಹದ ಅಧಿಕಾರಿಗಳು ‘ಇದು ಡಿಜಿಟಲ್ ಯುಗ, ಡಿಜಿಟಲೀಕರಣದ ಅಗತ್ಯವಿದೆ. ಅದರ ಜೊತೆಗೆ ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆ ಕೂಡ ಪ್ರತಿಯೊಬ್ಬನಿಗೂ ಕೂಡ ಇದೆ. ಈ ಕಂಪ್ಯೂಟರ್ ಜ್ಞಾನದಿಂದ ಅವರ ಮಕ್ಕಳಿಗೂ ಕೂಡ ಅನುಕೂಲವಾಗಲಿದೆ. ಅದರ ಜೊತೆಗೆ ಜೈಲಿನಿಂದ ಶಿಕ್ಷೆಯ ಅವಧಿ ಮುಗಿಸಿದ ಬಳಿಕ ಅವರ ಜೀವನ ರೂಪಿಸಿಕೊಳ್ಳಲೂ ನೆರವಾಗುತ್ತೆ ಎನ್ನುವ ಆಶಯದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಜೈಲಿನಲ್ಲಿ ಕಂಪ್ಯೂಟರ್ ಶಿಕ್ಷಣ ಕೊಡಲಾಗುತ್ತಿದೆ ಎಂದರು.

ಇದನ್ನೂ ಓದಿ:ಬೆಂಗಳೂರು, ಬೆಳಗಾವಿ ಕೇಂದ್ರ ಕಾರಾಗೃಹವನ್ನ ಬ್ಲಾಸ್ಟ್​​​ ಮಾಡುತ್ತೇವೆ ಎಂದು ಡಿಐಜಿಪಿಗೆ ಬೆದರಿಕೆ ಕರೆ

ಇನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿ ಹಾಗೂ ಆಸಕ್ತಿಯಿಂದ ಚಾಮರಾಜನಗರದ ಜಿಲ್ಲಾ ಕಾರಾಗೃಹ ಬಂಧಿಗಳಿಗೆ ಮೈಸೂರಿನ ಇನ್ಫೋಸಿಸ್ , ರೋಟರಿ ಹಾಗೂ ಪಂಚಶೀಲ ಸಹಯೋಗದೊಂದಿಗೆ ಕಾರಾಗೃಹ ಬಂಧಿಗಳಿಗೆ, ಕಾರಾಗೃಹದಲ್ಲೇ ಕಂಪ್ಯೂಟರ್ ತರಬೇತಿ ಪಡೆಯಲು ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್​ಗಳನ್ನೊಳಗೊಂಡ ತರಬೇತಿಗೆ ಚಾಲನೆ ದೊರೆತಿದೆ. ಕಾರಾಗೃಹ ಕಟ್ಟಡದಲ್ಲಿಯೇ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಇನ್ಫೋಸಿಸ್ ಸಹಕಾರದೊಂದಿಗೆ ತರಬೇತಿ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ.

ತರಬೇತಿ ಕೊಠಡಿಯಲ್ಲಿ ಕಲಿಕಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್ ಅರ್ಥೈಸುವ ಕನ್ನಡ ಕಿರುಪುಸ್ತಕಗಳನ್ನೂ ಸಹ ಇಡಲಾಗಿದೆ. ಹಿಂದೆ ಕಾರಾಗೃಹದಲ್ಲಿ ಗಂಧದ ಕಡ್ಡಿ ತಯಾರಿಕೆ ಮತ್ತಿತ್ತರ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಿತ್ತು. ಕೋವಿಡ್ ಬಳಿಕ ಇದೆಲ್ಲಾ ಸ್ಟಾಪ್ ಆಗಿದೆ. ಆ ಹಿನ್ನಲೆ ಸದುದ್ದೇಶದೊಂದಿಗೆ ಕಂಪ್ಯೂಟರ್ ತರಬೇತಿ ಆರಂಭವಾಗಿದೆ. ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಮೊದಲ ಹಂತವಾಗಿ 130 ಕ್ಕೂ ಹೆಚ್ಚು ಕೈದಿಗಳಿದ್ದು, ಎಸ್ಎಸ್ಎಲ್​ಸಿ ಹಾಗೂ ಮೇಲ್ಪಟ್ಟ 38 ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿದೆ. ನಂತರ ಹಂತಹಂತವಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಒದಗಿಸುವ ಆಶಯ ಹೊಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ